ADVERTISEMENT

‘ಕಾನೂನು ಹೋರಾಟಕ್ಕೆ ಸಿದ್ಧತೆ’

ಕಸ್ತೂರಿ ರಂಗನ್ ವರದಿ: ಸಮಾಲೋಚನ ಸಭೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 6:53 IST
Last Updated 14 ನವೆಂಬರ್ 2024, 6:53 IST
ಬೈಂದೂರು ಫೌಂಡೇಶನ್ ವತಿಯಿಂದ ಶಾಸಕರಾದ ಗುರುರಾಜ ಗಂಟಿಹೊಳೆ ಅವರ ನೇತೃತ್ವದಲ್ಲಿ ಕಸ್ತೂರಿ ರಂಗನ್ ವರದಿ ವಿರುದ್ಧ ಕಾನೂನು ಹೋರಾಟ ರೂಪಿಸಲು ಸಮಾಲೋಚನ ಸಭೆ ನಡೆಯಿತು.
ಬೈಂದೂರು ಫೌಂಡೇಶನ್ ವತಿಯಿಂದ ಶಾಸಕರಾದ ಗುರುರಾಜ ಗಂಟಿಹೊಳೆ ಅವರ ನೇತೃತ್ವದಲ್ಲಿ ಕಸ್ತೂರಿ ರಂಗನ್ ವರದಿ ವಿರುದ್ಧ ಕಾನೂನು ಹೋರಾಟ ರೂಪಿಸಲು ಸಮಾಲೋಚನ ಸಭೆ ನಡೆಯಿತು.   

ಬೈಂದೂರು:  ಬೈಂದೂರು ಫೌಂಡೇಶನ್ ಮೂಲಕ ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿರೋಧಿಸಿ ಕಾನೂನು ಹೋರಾಟಕ್ಕೆ ನಾವು ವೇದಿಕೆ ಸಿದ್ಧ ಮಾಡಿಕೊಳ್ಳುತ್ತಿದ್ದೇವೆ. ಅದಕ್ಕೆ ಬೇಕಾದ ದಾಖಲೆ, ಮಾಹಿತಿಗಳನ್ನು ಸಂಗ್ರಹ ಮಾಡುತ್ತಿದ್ದೇವೆ. ಜತೆಗೆ ಫೌಂಡೇಶನ್ ಮೂಲಕ ಸಿಆರ್‌ಝಡ್, ಡೀಮ್ಡ್ ಫಾರೆಸ್ಟ್ ಇತ್ಯಾದಿ ಸಮಸ್ಯೆಗಳ ಬಗ್ಗೆಯೂ ಹೋರಾಟಕ್ಕೆ ರೂಪುರೇಷೆ ಸಿದ್ದಪಡಿಸುತ್ತಿದ್ದೇವೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದ ಬೈಂದೂರು ವಿಧಾನಸಭಾ ಕ್ಷೇತ್ರದ ಪಶ್ಚಿಮಘಟ್ಟಕ್ಕೆ ಹೊಂದಿಕೊಂಡಿರುವ ಗ್ರಾಮಗಳಿಗೆ ಎದುರಾಗಬಹುದಾದ ಸಮಸ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಕಾನೂನು ಹೋರಾಟ ಸಂಬಂಧ ರಚಿಸಿರುವ ಬೈಂದೂರು ಫೌಂಡೇಶನ್ ವತಿಯಿಂದ ಶಾಸಕರಾದ ಗುರುರಾಜ ಗಂಟಿಹೊಳೆ ಅವರ ನೇತೃತ್ವದಲ್ಲಿ ಮಂಗಳವಾರ ಕುಂದಾಪುರದಲ್ಲಿ ನಡೆದ ಸಮಾಲೋಚನ ಸಭೆಯಲ್ಲಿಅವರು ಮಾತನಾಡಿದರು.

ಕಸ್ತೂರಿ ರಂಗನ್ ವರದಿ ಅನುಷ್ಠಾನ ಆಗದಂತೆ ನೋಡಿಕೊಳ್ಳುವುದು, ವನ್ಯಜೀವಿ (ಡೀಮ್ಡ್ ಫಾರೆಸ್ಟ್), ಸಿಆರ್‌ಝಡ್, ಮರಳುಗಾರಿಕೆ, ಕಲ್ಲು ಗಣಿಗಾರಿಕೆ ಇತ್ಯಾದಿಗಳಿಂದ ಕ್ಷೇತ್ರದ ಜನ ಸಾಮಾನ್ಯರಿಗೆ ಸಮಸ್ಯೆ ಆಗದಂತೆ ಎಚ್ಚರ ವಹಿಸುವುದು ಇದರ ಉದ್ದೇಶವಾಗಿದೆ ಎಂದರು.

ADVERTISEMENT

ಹಿರಿಯ ವಕೀಲರಾದ ಟಿ.ಬಿ. ಶೆಟ್ಟಿ ಹಾಗೂ ರಾಘವೇಂದ್ರ ಉಪ್ಪುಂದ ಕಸ್ತೂರಿ ರಂಗನ್ ವರದಿ ಅನುಷ್ಠಾನದಿಂದ ಆಗಬಹುದಾದ ಸಮಸ್ಯೆ ಬಗ್ಗೆ, ಗುರುಮೂರ್ತಿ ವನ್ಯಜೀವಿ, ಡೀಮ್ಡ್ ಫಾರೆಸ್ಟ್ ಸಮಸ್ಯೆ ಬಗ್ಗೆ, ವಕೀಲರ ಸಂಘದ ಅಧ್ಯಕ್ಷ ಪ್ರಮೋದ್ ಹಂದೆ ಸಿಆರ್ಝಡ್ ನಿಂದ ಆಗುತ್ತಿರುವ ಸಮಸ್ಯೆ ಮತ್ತು ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದರ ಬಗ್ಗೆ, ರಮೇಶ್ ಹತ್ವಾರ್ ಮೈನಿಂಗ್ಸ್ ಬಗ್ಗೆ ವಿವರ ನೀಡಿದರು.

ವಕೀಲರಾದ ಸಾಜಿ ಅಬ್ರಾಹಂ ಅವರು ಕೇರಳ ರಾಜ್ಯ ಕಸ್ತೂರಿ ರಂಗನ್ ವರದಿಯಿಂದ ಪಾರಾಗಿದ್ದು ಹೇಗೆ ಮತ್ತು ಕಾನೂನು ಹೋರಾಟ ಹೇಗಿತ್ತು ಎಂಬುದರ ಮಾಹಿತಿ ನೀಡಿ, ಅಲ್ಲಿಗೆ ಭೇಟಿ ನೀಡಿ ದಾಖಲೆ ಸಂಗ್ರಹಿಸುವ ಬಗ್ಗೆ ತಿಳಿಸಿದರು.

ಹಿರಿಯ ವಕೀಲರು ಹಾಗೂ ಕಾನೂನು ತಜ್ಞರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಶೀಘ್ರವೇ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರನ್ನು ಭೇಟಿ ಮಾಡಿ ಈ ವಿಷಯದ ಕುರಿತು ಇನ್ನಷ್ಟು ಚರ್ಚೆ ಮಾಡುವ ಬಗ್ಗೆಯೂ ನಿರ್ಧರಿಸಲಾಯಿತು.

ಬೈಂದೂರು ಕ್ಷೇತ್ರಕ್ಕೆ ಹೆಚ್ಚು ಸಮಸ್ಯೆ ನೀಡುತ್ತಿರುವ ಸಿಆರ್‌ಝಡ್, ಡೀಮ್ಡ್ ಫಾರೆಸ್ಟ್ (ವನ್ಯಜೀವಿ), ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಮುಂದಾಗಿರುವ ವಿಚಾರವೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ  ಚರ್ಚೆ ನಡೆಯಿತು.

ವಕೀಲರ ಸಂಘದ ಕೆ.ಬಿ. ಶೆಟ್ಟಿ, ಶರತ್ ಶೆಟ್ಟಿ, ಪ್ರವೀಶ್‌ಚಂದ್ರ, ಪ್ರಶಾಂತ್ ಶೆಟ್ಟಿ, ರಜನಿಕಾಂತ್, ಫೌಂಡೇಷನ್ ಸಂಯೋಜಕ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ರವಿಚಂದ್ರ ಹಾಗೂ ಹಿರಿಯ ಕಿರಿಯ ವಕೀಲರು, ಕಾನೂನು ತಜ್ಞರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.