ADVERTISEMENT

ಕಟಪಾಡಿ: ಹಲಸಿನ ಮೇಳಕ್ಕೆ ಚಾಲನೆ

ಗ್ರಾಮೀಣ ಜನರನ್ನು ಆಕರ್ಷಿಸಿದ ಹಲಸು ಉತ್ಪನ್ನ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 5:04 IST
Last Updated 23 ಜೂನ್ 2024, 5:04 IST
ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಎರಡು ದಿನ ನಡೆಯುವ ಹಲಸು ಮೇಳಕ್ಕೆ ಭಾನುವಾರ ಚಾಲನೆ ನೀಡಿದರು
ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಎರಡು ದಿನ ನಡೆಯುವ ಹಲಸು ಮೇಳಕ್ಕೆ ಭಾನುವಾರ ಚಾಲನೆ ನೀಡಿದರು   

ಶಿರ್ವ: ‘ಕರಾವಳಿಯಲ್ಲಿ ಯಥೇಚ್ಛವಾಗಿ ದೊರಕುವ ಹಲಸು, ಅದರ ಉತ್ಪನ್ನಗಳಿಗೆ ದೇಶ ವಿದೇಶಗಳಲ್ಲಿ ಹೆಚ್ಚಿನ‌ ಬೇಡಿಕೆಯಿದೆ. ಹಲಸು ಬೆಳೆಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಹಲಸು ಮೇಳ‌ ಯಶಸ್ವಿಯಾಗಿದೆ’ ಎಂದು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಹೇಳಿದರು.

ಕಟಪಾಡಿ ಎಸ್‌ವಿಎಸ್ ಪದವಿಪೂರ್ವ ಕಾಲೇಜು ಸಭಾಭವನದಲ್ಲಿ ಕಟಪಾಡಿ ಏಣಗುಡ್ಡೆ ಯುವಜನ ಸೇವಾ ಸಂಘ ಮತ್ತು ಜಿಲ್ಲಾ ತೋಟಗಾರಿಕೆ ಮತ್ತು ಕೃಷಿ ಇಲಾಖೆ ವತಿಯಿಂದ ಎರಡು ದಿನಗಳ ಕಾಲ ನಡೆಯುವ ಹಲಸು ಮೇಳ-2023ನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಉಡುಪಿ ತಾಲ್ಲೂಕು ತೋಟಗಾರಿಕಾ ಮತ್ತು ಕೃಷಿ ಇಲಾಖೆ ನಿರ್ದೇಶಕ ಹೇಮಂತ್ ಮಾತನಾಡಿ, ‘ಹಲಸಿನ ಉತ್ಪನ್ನಗಳಿಗೆ ದಿನೇ ದಿನೇ ಬೇಡಿಕೆ ಹೆಚ್ಚುತ್ತಿದ್ದು, ಈ ಕ್ಷೇತ್ರದಲ್ಲಿ ಸ್ವಉದ್ಯೋಗ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಕೃಷಿ, ತೋಟಗಾರಿಕಾ ಇಲಾಖೆಯ ಮೂಲಕ ಹಲಸು ಉತ್ಪನ್ನಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ನಡೆಸಲಾಗುತ್ತಿದೆ’ ಎಂದರು.

ADVERTISEMENT

ನಿವೃತ್ತ ಕುಲಪತಿ ಎಂ.ಕೆ.ನಾಯಕ್, ಪೊಲೀಸ್ ಉಪಠಾಣಾ ನಿರೀಕ್ಷಕ ದಯಾನಂದ್, ‌ಎಸ್‌ವಿಎಸ್‌ ವಿದ್ಯಾವರ್ಧಕ ಸಂಘದ ಸಂಚಾಲಕ ಕೆ. ಸತ್ಯೇಂದ್ರ ಪೈ, ಕಟಪಾಡಿ ಎಸ್‌ವಿಎಸ್ ಕಾಲೇಜು ಪ್ರಾಂಶುಪಾಲ ದಯಾನಂದ ಪೈ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ಆಚಾರ್ಯ, ಯುವಜನ ಸೇವಾ ಸಂಘದ ಅಧ್ಯಕ್ಷ ಪ್ರಮೋದ್ ಇದ್ದರು. ಶ್ರೀನಿಧಿ ದೇವಾಡಿಗ ಸ್ವಾಗತಿಸಿದರು.

ಹಲಸು ಮೇಳದಲ್ಲಿನ ವಿವಿಧ ಮಳಿಗೆಗಳು

ಗ್ರಾಮೀಣ ಜನರನ್ನು ಆಕರ್ಷಿಸಿದ ಹಲಸು ಮೇಳ

ಕಟಪಾಡಿಯಲ್ಲಿ ಪ್ರಥಮ ಬಾರಿ ಅದ್ದೂರಿಯಾಗಿ ಆಯೋಜನೆಗೊಂಡಿರುವ ಹಲಸು ಮೇಳದಲ್ಲಿ 60ಕ್ಕೂ ಅಧಿಕ ವಿವಿಧ ಮಳಿಗೆಗಳು ಕಟಪಾಡಿ ಸುತ್ತಮುತ್ತಲಿನ ಜನರನ್ನು ಆಕರ್ಷಿಸಿತು. ವಿವಿಧ ತಳಿಯ ಹಣ್ಣು ಹಲಸು‌‌ ಮಾರಾಟ ಭರ್ಜರಿಯಾಗಿ‌ ನಡೆಯಿತು. ಜಿಲ್ಲೆಯ ವಿವಿಧ ಕಡೆಗಳ ಹಲಸಿನ ಉತ್ಪನ್ನಗಳ ಹೋಮ್ ಪ್ರಾಡಕ್ಟ್‌ಗಳು ಮೇಳದಲ್ಲಿ ಮೇಳೈಸಿದವು. ಹಲಸಿನಿಂದ ತಯಾರಿಸಿದ ಹಪ್ಪಳ ಉಪ್ಪಿನಕಾಯಿ ಹೋಳಿಗೆ ಕಬಾಬ್ ಪಕೋಡ ಹಲಸಿನ ಚಿಪ್ಸ್ ಹಲಸಿನ ಗಟ್ಟಿ ಹಲಸಿನ ಮುಳ್ಕ ಸವಿಯುವ ಅವಕಾಶದ ಜೊತೆಗೆ ಹಲಸಿನ ಐಸ್‌ಕ್ರೀಂ ಗಮನ ಸೆಳೆಯಿತು. ವಿವಿದ ತಳಿಯ ಹಲಸಿನ ಗಿಡಗಳು ಹಾಗೂ ಇನ್ನಿತರ ತರಕಾರಿ ಹಣ್ಣಿನ ಗಿಡಗಳ ಮಾರಾಟ ಕೇಂದ್ರಗಳನ್ನು ತೆರೆಯಲಾಗಿತ್ತು. ಸ್ಥಳದಲ್ಲೇ ವಿವಿಧ ಬಗೆಯ ಹಲಸಿನ‌ ಖಾದ್ಯಗಳನ್ನು ತಯಾರಿಸಿ ಮಿತಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದ್ದು ಹಲಸಿನ ಮೇಳ ಭಾನುವಾರ ಸಂಜೆ ತನಕವೂ ಮುಂದುವರಿಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.