ಉಡುಪಿ: ಮಲೆನಾಡಿಗರನ್ನು ಕಂಗೆಡಿಸಿರುವ ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್–ಕೆಎಫ್‌ಡಿ) ಕರಾವಳಿ ಪ್ರವೇಶಿಸಿದ್ದು, ಈ ವರ್ಷದ ಮೊದಲ ಕೆಎಫ್‌ಡಿ ಪ್ರಕರಣ ಕುಂದಾಪುರ ತಾಲ್ಲೂಕಿನ ವಂಡ್ಸೆ ಹೋಬಳಿಯ ಕೆಂಚನೂರು ಗ್ರಾಮದಲ್ಲಿ ಕಾಣಿಸಿಕೊಂಡಿದೆ.
58 ವರ್ಷದ ಮಹಿಳೆಯಲ್ಲಿ ಮಂಗನ ಕಾಯಿಲೆ ಸೋಂಕು ಪತ್ತೆಯಾಗಿದ್ದು ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ರೋಗಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆಯ ಪರಿಸ್ಥಿತಿ ಸದ್ಯ ಸ್ಥಿರವಾಗಿದ್ದು, ಶೀಘ್ರ ಗುಣಮುಖರಾಗಲಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆದರೆ, ಜಿಲ್ಲೆಯಲ್ಲಿ ಪತ್ತೆಯಾಗಿರುವ ಕೆಎಫ್‌ಡಿ ಸೋಂಕು ಎಲ್ಲಡೆ ವ್ಯಾಪಿಸಿದರೆ ಪರಿಸ್ಥಿತಿ ಗಂಭೀರವಾಗುವ ಅಪಾಯವಿದ್ದು, ಆರೋಗ್ಯ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಕಾಡಂಚಿನ ಗ್ರಾಮಗಳಲ್ಲಿ ವಾಸವಾಗಿರುವ ಜನರಿಗೆ ಮಂಗನ ಕಾಯಿಲೆಯ ಸೋಂಕು ಹರಡದಂತೆ ಎಚ್ಚರ ವಹಿಸಬೇಕಾದ ಅಗತ್ಯವಿದೆ.
ಉಡುಪಿ ಜಿಲ್ಲೆ ಮಲೆನಾಡಿನೊಂದಿಗೆ ಬೆಸೆದುಕೊಂಡಿರುವುದರಿಂದ ಮಂಗನ ಕಾಯಿಲೆ ಸುಲಭವಾಗಿ ಹರಡುವ ಅಪಾಯ ಹೆಚ್ಚು. ಜಿಲ್ಲೆಯ ಬೈಂದೂರು, ಹೆಬ್ರಿ, ಕುಂದಾಪುರ, ಕಾರ್ಕಳ ತಾಲ್ಲೂಕುಗಳ ಕಾಡಂಚಿನ ಗ್ರಾಮಗಳಲ್ಲಿ ಮಂಗಗಳ ಸಂಖ್ಯೆ ಅಧಿಕವಾಗಿರುವುದರಿಂದ ಈ ಭಾಗದಲ್ಲಿ ಮಂಗಗಳಿಂದ ಮನುಷ್ಯರಿಗೆ ಕೆಎಫ್‌ಡಿ ಸೋಂಕು ತಗುಲುವ ಭೀತಿ ಇದ್ದು ಸಾರ್ವಜನಿಕರು ಹೆಚ್ಚು ಜಾಗ್ರತೆ ವಹಿಸಬೇಕು.
4 ವರ್ಷಗಳ ಬಳಿಕ ಸೋಂಕು: 2019ರಲ್ಲಿ ಬೈಂದೂರು ಹಾಗೂ ಸಿದ್ದಾಪುರದಲ್ಲಿ ಇಬ್ಬರಿಗೆ ಮಂಗನ ಕಾಯಿಲೆ ದೃಢಪಟ್ಟಿತ್ತು. ಇದಾಗಿ 4 ವರ್ಷಗಳ ಬಳಿಕ ಕುಂದಾಪುರದ ವಂಡ್ಸೆಯಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿರುವುದು ಕಾಡಂಚಿನ ಗ್ರಾಮಗಳಾದ ಶೀರೂರು, ಹಳ್ಳಿಹೊಳೆ, ಕೊಲ್ಲೂರು, ಸಿದ್ದಾಪುರ, ಶಂಕರ ನಾರಾಯಣ, ಬಿದ್ಕಲ್‌ಕಟ್ಟೆ, ಆಲೂರು, ಹಾಲಾಡಿ ಸೇರಿದಂತೆ ನೂರಾರು ಗ್ರಾಮಗಳಲ್ಲಿ ಆತಂಕ ಸೃಷ್ಟಿಯಾಗಿದೆ.
ಐದು ವರ್ಷಗಳಲ್ಲಿ 24 ಸಾವು: ಕಳೆದ ಐದು ವರ್ಷಗಳಲ್ಲಿ ಮಲೆನಾಡು, ಅರೆಮಲೆನಾಡು ಹಾಗೂ ಕರಾವಳಿಯ ಭಾಗಗಳಲ್ಲಿ ಮಂಗನ ಕಾಯಿಲೆ ಮರಣ ಮೃದಂಗ ಬಾರಿಸಿದ್ದು ಈ ಅವಧಿಯಲ್ಲಿ 24 ಮಂದಿಯ ಜೀವಗಳನ್ನು ಬಲಿ ತೆಗೆದುಕೊಂಡಿದೆ.
2019ರಲ್ಲಿ ಶಿವಮೊಗ್ಗ ಜಿಲ್ಲೆಯೊಂದರಲ್ಲೇ 12 ಮಂದಿ ಕೆಎಫ್‌ಡಿ ಸೋಂಕಿಗೆ ಬಲಿಯಾಗಿದ್ದು 344 ಜನರಲ್ಲಿ ಸೋಂಕು ದೃಢಪಟ್ಟಿತ್ತು. ಉತ್ತರ ಕನ್ನಡ ಜಿಲ್ಲೆಯ 85 ಮಂದಿಗೆ ಸೋಂಕು ದೃಢಪಟ್ಟು ಮೂವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಉಡುಪಿಯಲ್ಲಿ ಇಬ್ಬರು, ಮೈಸೂರು, ಬೆಳಗಾವಿ, ಚಿಕ್ಕಮಗಳೂರು ಹಾಗೂ ಹಾವೇರಿಯಲ್ಲಿ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿತ್ತು.
2020ರಲ್ಲಿ ಶಿವಮೊಗ್ಗದಲ್ಲಿ 184 ಪಾಸಿಟಿವ್ ಪ್ರಕರಣ, ನಾಲ್ಕು ಸಾವು ಸಂಭವಿಸಿದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ 91 ಮಂದಿಯಲ್ಲಿ ಪಾಸಿಟಿವ್ ಹಾಗೂ ಒಬ್ಬರು ಮೃತಪಟ್ಟಿದ್ದರು. ಚಿಕ್ಕಮಗಳೂರಿನಲ್ಲಿ 12 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು.
2021ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 13, ಚಿಕ್ಕಮಗಳೂರು ಜಿಲ್ಲೆಯಲ್ಲಿ 2, ಉತ್ತರ ಕನ್ನಡ ಜಿಲ್ಲೆಯಲ್ಲಿ 8 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. 2022ರಲ್ಲಿ ಶಿವಮೊಗ್ಗದಲ್ಲಿ 35 ಪಾಸಿಟಿವ್ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 14 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿ, ಉಭಯ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದರು.
2023ರಲ್ಲಿ ಶಿವಮೊಗ್ಗ 15, ಚಿಕ್ಕಮಗಳೂರು 2 ಪಾಸಿಟಿವ್ ಪ್ರಕರಣ ಹೊರತುಪಡಿಸಿ ರಾಜ್ಯದ ಯಾವ ಜಿಲ್ಲೆಯಲ್ಲೂ ಕೆಎಫ್‌ಡಿ ಪ್ರಕರಣ ವರದಿಯಾಗಿರಲಿಲ್ಲ. 2024ರಲ್ಲಿ ಮತ್ತೆ ಮಂಗನಕಾಯಿಲೆ ಪ್ರಕರಣಗಳು ಹೆಚ್ಚಾಗಿದ್ದು ಜನವರಿಂದ ಇಲ್ಲಿಯವರೆಗೂ ಶಿವಮೊಗ್ಗದಲ್ಲಿ 39, ಉತ್ತರ ಕನ್ನಡದಲ್ಲಿ 43, ಚಿಕ್ಕಮಗಳೂರಿನಲ್ಲಿ 36 ಹಾಗೂ ಉಡುಪಿಯಲ್ಲಿ 1 ಕೆಎಫ್‌ಡಿ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. 2019ರ ಬಳಿಕ ಇಳಿಮುಖವಾಗಿದ್ದ ಕೆಎಫ್‌ಡಿ ಸೋಂಕು ಏಕಾಏಕಿ ಏರುಗತಿಯಲ್ಲಿ ಸಾಗಿರುವುದು ಆತಂಕ ಹುಟ್ಟಿಹಾಕಿದೆ.
ರೋಗ ಲಕ್ಷಣಗಳು: ಮಂಗನ ಕಾಯಿಲೆ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಬದಲಾಗಿ, ಕೆಎಫ್‌ಡಿ ವೈರಸ್ ಸೋಂಕಿತ ಉಣ್ಣೆ ಮನುಷ್ಯರಿಗೆ ಕಚ್ಚಿದರೆ ಮಂಗನ ಕಾಯಿಲೆ ಬರುತ್ತದೆ. ಸೋಂಕಿತ ವ್ಯಕ್ತಿಗೆ ಎರಡು ಹಂತಗಳಲ್ಲಿ ರೋಗ ಕಾಡುತ್ತದೆ. ಮೊದಲ ಹಂತದಲ್ಲಿ ಜ್ವರ, ಚಳಿ, ತಲೆನೋವು, ಕೀಲುನೋವು, ವಾಂತಿ, ಹೊಟ್ಟೆ ನೋವು, ಸ್ನಾಯು ಸೆಳೆತ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಹಂತದಲ್ಲಿ ಪ್ಯಾರಾಸಿಟಮಲ್ ಮಾತ್ರೆ ಹೊರತಾಗಿ ಸ್ಟಿರಾಯ್ಡ್ಸ್, ಡೈಕ್ಲೊಫಿನ್ ಚುಚ್ಚುಮದ್ದು ತೆಗೆದುಕೊಳ್ಳಬಾರದು ಎನ್ನುತ್ತಾರೆ ವೈದ್ಯರು.
ಮೊದಲ ಹಂತದಲ್ಲಿ ಚೇತರಿಸಿಕೊಳ್ಳದ ರೋಗಿಗಳಿಗೆ ಎರಡನೇ ಹಂತದಲ್ಲಿ ಬಿಳಿರಕ್ತ ಕಣಗಳು ಕಡಿಮೆಯಾಗಿ ತೀವ್ರ ರಕ್ತಸ್ರಾವವಾಗುತ್ತದೆ. ಈ ಹಂತದಲ್ಲಿ ಕಾಯಿಲೆ ಉಲ್ಬಣಗೊಂಡರೆ ಕಿಡ್ನಿ ವೈಫಲ್ಯ ಸೇರಿದಂತೆ ಅಂಗಾಗಗಳು ವೈಫಲ್ಯವಾಗಿ ಮರಣ ಹೊಂದುವ ಸಾಧ್ಯತೆಗಳು ಹೆಚ್ಚು.
ರೋಗಿಗಳು ಏನು ಮಾಡಬೇಕು: ಕಾಡಂಚಿನ ಗ್ರಾಮಗಳಲ್ಲಿರುವ ಜನರಿಗೆ ಜ್ವರ ಕಾಣಿಸಿಕೊಂಡರೆ ತಕ್ಷಣ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಬೇಕು. ಇಲ್ಲಿ ರೋಗಿಗಳ ರಕ್ತದಲ್ಲಿರುವ ಸಿರಂ ಅಂಶ ತೆಗೆದು ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. 24 ಗಂಟೆಗಳಲ್ಲಿ ಪರೀಕ್ಷಾ ವರದಿ ವೈದ್ಯರ ಕೈಸೇರಲಿದ್ದು, ಜ್ವರಕ್ಕೆ ನಿಖರ ಕಾರಣ ತಿಳಿಯಲಿದೆ. ಕೆಎಫ್‌ಡಿ ಸೋಂಕು ಪತ್ತೆಯಾದರೆ ರೋಗಿಯ ಆರೋಗ್ಯದ ಮೇಲೆ ವೈದ್ಯರು ತೀವ್ರ ನಿಗಾ ಇರಿಸಲಿದ್ದು ಅಂಗಾಗಗಳು ವೈಫಲ್ಯವಾಗದಂತೆ ಪರ್ಯಾಯ ಚಿಕಿತ್ಸೆ ನೀಡಲಿದ್ದಾರೆ.
ಅಗತ್ಯಬಿದ್ದರೆ ಹೆಚ್ಚಿನ ಚಿಕಿತ್ಸೆಗೆ ಮಲ್ಪಿಸ್ಟೆಷಾಲಿಟಿ ಆಸ್ಪತ್ರೆಗೆ ಸಾಗಿಸಲಾಗುತ್ತದೆ. ಮಂಗನ ಕಾಯಿಲೆ ರೋಗಿಗಳಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತ ಚಿಕಿತ್ಸೆ ಲಭ್ಯವಿದೆ ಎನ್ನುತ್ತಾರೆ ಉಡುಪಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರೇಮಾನಂದ್.
1957ರಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕ್ಯಾಸನೂರಿನಲ್ಲಿ ಮೊದಲ ಬಾರಿಗೆ ಕೆಎಫ್‌ಡಿ ಸೋಂಕು ಪತ್ತೆಯಾಯಿತು. ಹಾಗಾಗಿ ಈ ಕಾಯಿಲೆಗೆ ಕ್ಯಾಸನೂರು ಫಾರೆಸ್ಟ್ ಡಿಸೀಸ್ ಎಂದೇ ಹೆಸರಿಡಲಾಯಿತು. ಶಿವಮೊಗ್ಗ ಜಿಲ್ಲೆಯಲ್ಲಿ ಪತ್ತೆಯಾದ ಮಂಗನ ಕಾಯಿಲೆ ಪ್ರಸ್ತುತ ದೇಶದ 7 ರಾಜ್ಯಗಳಿಗೆ ಹರಡಿದೆ. ಕರ್ನಾಟಕದ 11 ಜಿಲ್ಲೆಗಳನ್ನು ಕೆಎಫ್‌ಡಿ ಹೈರಿಸ್ಕ್ ಜಿಲ್ಲೆಗಳೆಂದು ಗುರುತಿಸಲಾಗಿದೆ.
ಕುಂದಾಪುರ ತಾಲ್ಲೂಕಿನ ವಂಡ್ಸೆಯಲ್ಲಿ ಈ ವರ್ಷದ ಮೊದಲ ಕೆಎಫ್‌ಡಿ ಪ್ರಕರಣ ಪತ್ತೆಯಾಗುತ್ತಿದ್ದಂತೆ ವಂಡ್ಸೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಗಗಳು ಸತ್ತಿರುವ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಎಲ್ಲೂ ಮಂಗಗಳು ಸಾವನ್ನಪ್ಪಿರುವುದು ಗಮನಕ್ಕೆ ಬಂದಿಲ್ಲ. ಕಾಡಂಚಿನ ಗ್ರಾಮಗಳಲ್ಲಿ ವಾಸವಿರುವ ಜನರಿಗೆ ಕೆೆಎಫ್‌ಡಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಕಾಡು ಹಾಡಿಗಳಿಗೆ ತರಗೆಲೆ ಹೆಕ್ಕಲು ಸೌದೆ ತರಲು ಹೋಗದಂತೆ ಸೂಚಿಸಲಾಗಿದೆ. ಕೆಲಸಕ್ಕೆ ತೋಟಗಳಿಗೆ ಹೋಗುವಾಗ ಡೆಪಾ ತೈಲ ಲೇಪಿಸಿಕೊಂಡು ಹೋಗುವಂತೆ ಸೂಚಿಸಿ ತೈಲದ ಬಾಟೆಲ್ ವಿತರಿಸಲಾಗಿದೆ.
–ಐ.ಪಿ.ಗಡಾದ್ ಡಿಎಚ್‌ಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.