ಉಡುಪಿ: ಕಿರಂ ನಾಗರಾಜ್ ಹಾಗೂ ಜಿ.ರಾಜಶೇಖರ್ ಮನಸ್ಸಿಗೆ ಸರಿ ಎನಿಸಿದ ವಿಚಾರವನ್ನು ನೇರವಾಗಿ ಹೇಳುವಂತಹ ಲೋಕ ನಿಷ್ಠುರಿಗಳು ಎಂದು ಚಿಂತಕ ಪ್ರೊ.ಕೆ.ಫಣಿರಾಜ್ ಅಭಿಪ್ರಾಯಪಟ್ಟರು.
ಬೆಂಗಳೂರಿನ ಜನಸಂಸ್ಕೃತಿ ಪ್ರತಿಷ್ಠಾನ, ಬೆಂಗಳೂರು ಆರ್ಟ್ ಫೌಂಡೇಶನ್ ಆಶ್ರಯದಲ್ಲಿ ರಥಬೀದಿ ಗೆಳೆಯರು ಉಡುಪಿ ಸಂಸ್ಥೆಯ ಸಹಯೋಗದಲ್ಲಿ ಚಿಂತಕ ಜಿ.ರಾಜಶೇಖರ್ ಅವರಿಗೆ ಕಿರಂ ನಾಗರಾಜ್ ನೆನಪಿನಲ್ಲಿ ‘ಕಿರಂ ಪುರಸ್ಕಾರ’ವನ್ನು ಉಡುಪಿಯ ಕೊಳಂಬೆಯ ಸ್ವಗೃಹದಲ್ಲಿ ಪ್ರಧಾನ ಮಾಡಿ ಮಾತನಾಡಿದರು.
ಕಿರಂ ಹಾಗೂ ಜಿ.ಆರ್ ನಿಷ್ಠುರತೆಯ ಕಾರಣದಿಂದ ಯಾವ ಪ್ರಶಸ್ತಿ, ಪುರಸ್ಕಾರದ ಹಂಗಿಲ್ಲದ ಲೋಕ ನಿರಭಿಮಾನಿಗಳಾದವರು. ಉದ್ಯೋಗದ ಮಿತಿಯ ಆಚೆ ಅವರು ಗಳಿಸಿದ ಜ್ಞಾನದಿಂದ ಇಬ್ಬರೂ ಲೋಕಜ್ಞಾನಿಗಳಾಗಿದ್ದಾರೆ. ಅವರಿಂದ ಕಲಿತವರು ಬಹಳಷ್ಟು ಮಂದಿ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಿ. ರಾಜಶೇಖರ್, ‘ಸಾಹಿತ್ಯ ನನ್ನ ಉಸಿರು. ಉಸಿರಾಡಲು ಯಾವ ಪ್ರಶಸ್ತಿ ಅಗತ್ಯವಿಲ್ಲ, ಕಿರಂ ಸಾಹಿತ್ಯದ ಮಹಾನ್ ಉತ್ಸಾಹಿಗಳು. ಅಡಿಗರ ಕಾವ್ಯದ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ಕಿರಂ ಅವರಿಂದಾಗಿಯೇ ಅಡಿಗರ ಕಾವ್ಯದ ಪ್ರಭಾವ ನನ್ನ ಮೇಲೆ ಬೀರಿದೆ’ ಎಂದರು.
ರಥಬೀದಿ ಗೆಳೆಯರು ಸಂಸ್ಥೆಯ ಉಪಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಪ್ರೊ. ಸುಬ್ರಹ್ಮಣ್ಯ ಜೋಶಿ ವಂದಿಸಿದರು
ರಥಬೀದಿ ಗೆಳೆಯರು ಉಪಾಧ್ಯಕ್ಷ ಎನ್.ಸಂತೋಷ್ ಬಲ್ಲಾಳ್, ಸಂತೋಷ್ ಶೆಟ್ಟಿ ಹಿರಿಯಡ್ಕ, ಡಾ.ರಾಘವೇಂದ್ರ ರಾವ್, ವೇದವ್ಯಾಸ ಭಟ್ ,ರಾಜು ಮಣಿಪಾಲ, ಕೌಶಿಕ್ ಚಟ್ಟಿಯಾರ್, ಕೆ.ರವೀಂದ್ರ ಆಚಾರ್ಯ, ನಜೀರ್ ಪೊಲ್ಯ ಮತ್ತು ಜಿಆರ್ ಕುಟುಂಬಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.