ಉಡುಪಿ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ (ಮಾಹೆ) ಘಟಕವಾದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ (ಕೆಎಂಸಿ) ನೇತ್ರಚಿಕಿತ್ಸಾ ವಿಭಾಗದ ದ್ವಿತೀಯ ವರ್ಷದ ಕಿರಿಯ ಸ್ಥಾನೀಯ ವೈದ್ಯೆ ಡಾ.ಪೂರ್ವಪ್ರಭಾ ಪಾಟೀಲ ಅವರು, ನ್ಯೂಯಾರ್ಕ್‌ನಲ್ಲಿ ಈಚೆಗೆ ಜರುಗಿದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿನ ಮಕ್ಕಳು ಮತ್ತು ಯುವ ಸಮುದಾಯಕ್ಕಾಗಿ ಇರುವ ಪ್ರಮುಖ ಸಮೂಹವನ್ನು (ಯುಎನ್ ಎಂಜಿಸಿವೈ) ಪ್ರತಿನಿಧಿಸಿದರು.
ಶಾಂತಿ, ಭದ್ರತೆ, ಹವಾಮಾನ ವೈಪರೀತ್ಯ, ಮಾನವ ಹಕ್ಕುಗಳು ಸೇರಿ ಪ್ರಮುಖ ಪ್ರಚಲಿತ ಜಾಗತಿಕ ಸವಾಲುಗಳ ಬಗ್ಗೆ ಚರ್ಚಿಸಲು ಈ ಸಭೆಯಲ್ಲಿ 193 ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಮಹಾರಾಷ್ಟ್ರದ ಪುಣೆಯ ಪೂರ್ವಪ್ರಭಾ ಪಾಟೀಲ ಅವರು ಸೆ. 20ರಂದು ಜರುಗಿದ ಸಮಾವೇಶದಲ್ಲಿ ಅಂತರರಾಷ್ಟ್ರೀಯ ಸಮತೆ ಮತ್ತು ಐಕ್ಯಮತಕ್ಕೆ ಸಂಬಂಧಿಸಿದ ಕಲಾಪದ ಸಮನ್ವಯಕಾರರಾಗುವ ಗೌರವ ಪಡೆದಿದ್ದರು.
ಈ ಕಲಾಪದಲ್ಲಿ ಬಹರೈನ್, ಸ್ಪೇನ್, ಡಾಮಿನಿಕನ್ ರಿಪಬ್ಲಿಕ್‌ನ ಸಚಿವರು ಸೇರಿದಂತೆ ಜಾಗತಿಕ ಮಟ್ಟದ ನಾಯಕರು ಭಾಗವಹಿಸಿದ್ದರು. ಇದಲ್ಲದೆ ಪೂರ್ವಪ್ರಭಾ ಅವರು, ಹಲವು ಉನ್ನತಮಟ್ಟದ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದರು. ಜಾಗತಿಕ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ಆಲಿಸುವ ಅವಕಾಶವನ್ನೂ ಪಡೆದಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.