ಉಡುಪಿ: ಮಣಿಪಾಲದ ಕಸ್ತೂರಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದ್ರೋಗ ವಿಭಾಗವು ಈಚೆಗೆ ಹಲವು ರೋಗಿಗಳಿಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆ (ಓಪನ್ ಆರ್ಟ್ ಸರ್ಜರಿ) ಇಲ್ಲದೆ ಮಹಾಪಧಮನಿಯ ಕವಾಟವನ್ನು ಯಶಸ್ವಿಯಾಗಿ ಬದಲಾಯಿಸಿದೆ.
ಪ್ರಾಧ್ಯಾಪಕ ಡಾ.ಟಾಮ್ ದೇವಾಸಿಯಾ, ಸಹಾಯಕ ಪ್ರಾಧ್ಯಾಪಕಿ ಡಾ.ಜೆ.ಮೋನಿಕಾ ಮತ್ತು ಹೃದಯ ಶಸ್ತ್ರ ಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕ ಡಾ.ಗುರುಪ್ರಸಾದ್ ರೈ ನೇತೃತ್ವದ ತಂಡವು ಈ ಸಾಧನೆ ಮಾಡಿದೆ.
ಟ್ರಾನ್ಸ್‌ಕ್ಯಾಥೆಟರ್ ಎರೋಟಿಕ್ ವಾಲ್ವ್ ಇಂಪ್ಲಾಂಟೇಷನ್ ಚಿಕಿತ್ಸೆಯ ಬಳಿಕ ರೋಗಿಯ ಆರೋಗ್ಯ ಸುಧಾರಿಸಿದ್ದು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಲಾಗಿದೆ. ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ಕವಾಟದ ಬದಲಾವಣೆಯನ್ನು ದೇಶದ ಕೆಲವು ಹೃದ್ರೋಗ ತಜ್ಞರು ಮಾತ್ರ ಮಾಡುತ್ತಿದ್ದು, ಕೆಎಂಸಿ ವೈದ್ಯರು ಕೂಡ ಯಶಸ್ವಿಯಾಗಿ ಮಾಡಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.
ವಿವರ:
ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 76 ವರ್ಷದ ಪುರುಷ ರೋಗಿಗೆ ಪರೀಕ್ಷೆಗೊಳಪಡಿಸಿದಾಗ ತೀವ್ರ ಕ್ಯಾಲ್ಸಿಫಿಕ್ ಮಹಾಪಧಮನಿಯ ಸ್ಟೆನೋಸಿಸ್ ಸಮಸ್ಯೆ ಪತ್ತೆಯಾಯಿತು. ರೋಗಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡುವುದು ಹೆಚ್ಚಿನ ಅಪಾಯವಿದ್ದ ಕಾರಣ ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ಕವಾಟದ ಬದಲಾವಣೆ ಮಾಡಲಾಯಿತು.
72 ವರ್ಷದ ಮತ್ತೊಬ್ಬರ ರೋಗಿಯ ಹೃದಯ ಮೌಲ್ಯಮಾಪನದಲ್ಲಿಯೂ ತೀವ್ರ ಕ್ಯಾಲ್ಸಿಫಿಕ್ ಮಹಾಪಧಮನಿಯ ಸ್ಟೆನೋಸಿಸ್ ದೃಢಪಟ್ಟಿತ್ತು. ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ ಹೊಂದಿದ್ದ ರೋಗಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲು ಅಸಾಧ್ಯವಾಗಿದ್ದ ಕಾರಣ ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ಕವಾಟ ಬದಲಾಯಿಸಲಾಯಿತು.
ತೀವ್ರ ಹೃದಯ ವೈಫಲ್ಯ ಮತ್ತು ದೀರ್ಘಕಾಲದ ಕೆಮ್ಮಿನಿಂದ ಬಳಲುತ್ತಿದ್ದ 74 ವರ್ಷದ ಪುರುಷ ರೋಗಿಯಲ್ಲಿಯೂ ಕ್ಯಾಲ್ಸಿಫಿಕ್ ಮಹಾಪಧಮನಿಯ ಸ್ಟೆನೋಸಿಸ್ ಕಾಣಿಸಿಕೊಂಡು ತೆರೆದ ಹೃದಯ ಶಸ್ತ್ರಚಿಕಿತ್ಸೆಯಿಂದ ಸಾವನ್ನಪ್ಪುವ ಅಪಾಯವಿದ್ದರಿಂದ ಹೃದ್ರೋಗ ತಜ್ಞರು ಚರ್ಚಿಸಿ ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ಕವಾಟ ಅಳವಡಿಸಲು ನಿರ್ಧರಿಸಿ ಯಶಸ್ವಿಯಾಗಿ ನಡೆಸಲಾಯಿತು.
ಮಹಾಪಧಮನಿಯ ಸ್ಟೆನೋಸಿಸ್ ಎಡಭಾಗದ ಹೃದಯ ಕವಾಟದ ಕಿರಿದಾಗುವಿಕೆಯಾಗಿದ್ದು ದೇಹಕ್ಕೆ ರಕ್ತ ಪೂರೈಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ವಯಸ್ಸಾಗುತ್ತಿದ್ದಂತೆ ಕವಾಟಕ್ಕೆ ಹಾನಿಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಸಾಮಾನ್ಯವಾಗಿ ಇಂತಹ ಕಾಯಿಲೆ ಕಾಣಿಸಿಕೊಂಡಾಗ ಹಾನಿಗೊಳಗಾದ ಕವಾಟಗಳನ್ನು ತೆರೆದ ಹೃದಯ ಶಸ್ತ್ರಚಿಕಿತ್ಸೆ ಮೂಲಕ ಬದಲಾಯಿಸಲಾಗುತ್ತದೆ ಎನ್ನುತ್ತಾರೆ ಡಾ. ಟಾಮ್ ದೇವಾಸಿಯಾ.
ಮಹಾಪಧಮನಿಯ ಕವಾಟ ಕಿರಿದಾದರೆ ಎದೆ ನೋವು, ತೀವ್ರ ಉಸಿರಾಟದ ತೊಂದರೆ, ಹಠಾತ್ ಸಾವು ಸಂಭವಿಸಬಹುದು. ಈ ಸಮಸ್ಯೆ ಕಾಣಿಸಿಕೊಂಡ ರೋಗಿಗಳು ದುರ್ಬಲರಾಗಿದ್ದಾರೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಹೆಚ್ಚು ಅಪಾಯ. ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ಕವಾಟದ ಅಳವಡಿಕೆ ಅತ್ಯುತ್ತಮ ಚಿಕಿತ್ಸಾ ವಿಧಾನ ಎಂದು ಡಾ.ಟಾಮ್ ದೇವಾಸಿಯಾ ತಿಳಿಸಿದರು.
ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ.ಆನಂದ್ ವೇಣುಗೋಪಾಲ್ ಹಾಗೂ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ವೈದ್ಯರನ್ನು ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.