ಉಡುಪಿ: ಪ್ರಸಿದ್ಧ ಹಾಗೂ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಭೋಜನ ಪ್ರಸಾದಕ್ಕೆ ರಾಷ್ಟ್ರೀಯ ಸುರಕ್ಷತಾ ಗುಣಮಟ್ಟದ ಮಾನ್ಯತೆ ಸಿಕ್ಕಿದೆ.
ದೇವರಿಗೆ ಅರ್ಪಿಸುವ ನೈವೈದ್ಯ ಹಾಗೂ ಭಕ್ತರಿಗೆ ನೀಡುವ ಭೋಜನ ಪ್ರಸಾದ ಗರಿಷ್ಠ ಗುಣಮಟ್ಟದಿಂದ ಕೂಡಿದ್ದು, ಆರೋಗ್ಯಕ್ಕೆ ಸುರಕ್ಷಿತವಾಗಿದೆ ಎಂದು ಭಾರತದ ಅಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಪ್ರಮಾಣ ಪತ್ರ ನೀಡಿದೆ.
ಕೊಲ್ಲೂರು ದೇವಸ್ಥಾನದಲ್ಲಿ ನಿತ್ಯ ತಯಾರಾಗುವ ಆಹಾರವನ್ನು ಪ್ರಾಧಿಕಾರ ಪರಿಶೀಲಿಸಿದ್ದು, ಆಹಾರ ತಯಾರಿಕಾ ಕಟ್ಟಡ, ಸೌಲಭ್ಯಗಳು, ಆಹಾರ ತಯಾರಿಸುವ ವಿಧಾನ, ಸ್ವಚ್ಛತೆ, ಸಿಬ್ಬಂದಿಗೆ ನೀಡಿರುವ ತರಬೇತಿ ಸೇರಿದಂತೆ ಹಲವು ಅಂಶಗಳನ್ನೂ ಪರೀಕ್ಷೆಗೊಳಪಡಿಸಿ ಪ್ರಮಾಣಪತ್ರ ನೀಡಿದೆ.
ಸುಸಜ್ಜಿತ ಆಹಾರ ತಯಾರಿಕಾ ಕೊಠಡಿ, ಮಳೆ ನೀರಿನಿಂದ ಸೋರದಂತೆ ವ್ಯವಸ್ಥೆ, ಕಾಲು ಜಾರದಂತೆ ನೆಲಹಾಸು ನಿರ್ಮಾಣ, ತುಕ್ಕು ರಹಿತ ಕಿಟಕಿ ಬಾಗಿಲುಗಳು, ಆಹಾರ ತಯಾರಿಕೆಗೆ ಬಳಸುವ ಪಾತ್ರೆಗಳ ಗುಣಮಟ್ಟ, ಕಲಾಯಿ ಹಾಕಿರುವುದು, ಉತ್ತಮ ಗಾಳಿ, ಬೆಳಕು ಸೌಲಭ್ಯ , ಆಹಾರ ಬಿಸಿ ಮತ್ತು ತಂಪು ಮಾಡಲು ಬಳಸುವ ಯಂತ್ರೋಕರಣಗಳು, ಆಹಾರ ಸಾಮಗ್ರಿಗಳ ದಾಸ್ತಾನು ಮಾಡಲು ಬಳಸಲು ಕೊಠಡಿ ಸೌಲಭ್ಯ, ಪಾತ್ರೆಗಳನ್ನು ತೊಳೆಯಲು ಬಳಸುವ ನೀರು ಹಾಗೂ ಆಹಾರ ತಯಾರಿಕೆ ಸಮಯದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡುವ ಕ್ರಮಗಳನ್ನು ಅನುಸರಿಸಲಾಗಿದೆ ಎಂದು ಪ್ರಾಧಿಕಾರ ಖಾತ್ರಿ ಪಡಿಸಿಕೊಂಡಿದೆ ಎನ್ನುತ್ತಾರೆ ಜಿಲ್ಲಾ ಆಹಾರ ಮತ್ತು ಗುಣಮಟ್ಟ ನಿಯಂತ್ರಣಾ ಅಧಿಕಾರಿ ಡಾ.ಪ್ರೇಮಾನಂದ್.
ದೇವಸ್ಥಾನಕ್ಕೆ ಆಹಾರ ಸುರಕ್ಷತಾ ಪ್ರಮಾಣ ಪತ್ರ ಹೊಂದಿರುವ ಸರಬರಾಜುದಾರರಿಂದ ಮಾತ್ರಆಹಾರ ಸಾಮಗ್ರಿಗಳನ್ನು ಖರೀದಿಸಲಾಗುತ್ತಿದೆ. ಆಹಾರ ಪದಾರ್ಥಗಳ ಅವಧಿ ಮೀರುವ ದಿನಾಂಕ ಪರಿಶೀಲನೆ, ಪದಾರ್ಥಗಳು ಕೆಡದಂತೆ ಸೂಕ್ತ ವ್ಯವಸ್ಥೆ, ಶೈತ್ಯಾಗಾರ ಮತ್ತು ಉಷ್ಣಾಗಾರಗಳ ಸೌಲಭ್ಯಗಳು ದೇವಸ್ಥಾನದಲ್ಲಿವೆ. ಆಹಾರ ಸರಬರಾಜು ವಾಹನಗಳಲ್ಲೂ ಸ್ವಚ್ಚತೆ ಕಾಪಾಡಿಕೊಳ್ಳಲಾಗುತ್ತಿದೆ.
ಆಹಾರ ಬಡಿಸುವ ಪಾತ್ರೆಗಳ ಸ್ವಚ್ಛತೆ, ಆಹಾರ ವಿತರಣೆ ಸ್ಥಳದಲ್ಲಿ ಗರಿಷ್ಠ ಶುಚಿತ್ವ ಹಾಗೂ ನಿಯಮಿತವಾಗಿ ಸಂಪೂರ್ಣ ಸ್ಯಾನಿಟೈಸ್ ಮಾಡಿಸುವುದು, ಕ್ರಿಮಿ ಕೀಟಗಳ ಬಾಧೆ ಇರದಂತೆ ಕ್ರಮ ಕೈಗೊಳ್ಳಲಾಗಿದೆ. ಆಹಾರ ಬಡಿಸುವವರಿಗೂ ಸೂಕ್ತ ತರಬೇತಿ ನೀಡಿಲಾಗಿದ್ದು, ಸ್ವಚ್ಛತೆ ಕಾಪಾಡಿಕೊಂಡು ಆಹಾರ ಬಡಿಸುವಂತೆ ನಿರ್ದೇಶನ ನೀಡಲಾಗಿದೆ.
ಅನಾರೋಗ್ಯ ಲಕ್ಷಣಗಳಿರುವ ಸಿಬ್ಬಂದಿಗೆ ಆಹಾರ ತಯಾರಿಕಾ ಕೊಠಡಿ ಪ್ರವೇಶಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಬಗ್ಗೆ ಪರಿಶೀಲನೆ ಸಹ ನಡೆಸಲಾಗುತ್ತಿದೆ. ಆಹಾರ ಉಳಿದರೆ ಮರು ಬಳಕೆ ಮಾಡದೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಕರಿದ ಎಣ್ಣೆಯನ್ನೂ ಮರು ಬಳಕೆ ಮಾಡುವುದಿಲ್ಲ ಎನ್ನುತ್ತಾರೆ ದೇವಸ್ಥಾನದ ಸಿಬ್ಬಂದಿ.
ನಿರಂತರ ಪರಿಶೀಲನೆ
ಕೊಲ್ಲೂರು ದೇವಸ್ಥಾನದಲ್ಲಿ ಭಕ್ತರಿಗೆ ನೀಡುವ ಭೋಜನ ಪ್ರಸಾದವು ಅತ್ಯಂತ ಸುರಕ್ಷಿತ ಮತ್ತು ಗುಣಮಟ್ಟದಿಂದ ಕೂಡಿದೆ ಎಂದು ಕೇಂದ್ರ ಸರ್ಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಪ್ರಮಾಣಪತ್ರ ದೊರೆತಿದೆ. ಆಹಾರ ಸುರಕ್ಷತೆ ಕುರಿತು ದೇವಾಲಯದ ಎಲ್ಲ ಸಿಬ್ಬಂದಿಗೆ ಮಾಹಿತಿ ಹಾಗೂ ಅಗತ್ಯ ತರಬೇತಿ ನೀಡಲಾಗಿದೆ. ನಿರಂತರವಾಗಿ ದೇವಸ್ಥಾನದಲ್ಲಿ ಪರಿಶೀಲನೆ ನಡೆಸಿ, ಅಗತ್ಯ ಸಲಹೆಗಳನ್ನು ನೀಡಲಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಆಹಾರ ಮತ್ತು ಗುಣಮಟ್ಟ ನಿಯಂತ್ರಣಾ ಅಧಿಕಾರಿ ಡಾ.ಪ್ರೇಮಾನಂದ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.