ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆದ ಅವ್ಯವಹಾರದ ತನಿಖೆಗೆ ಸರ್ಕಾರ ಆದೇಶಿಸಿರುವುದು ಸ್ವಾಗತಾರ್ಹ. ದೇವಸ್ಥಾನದ ನಿರ್ವಹಣೆ, ಸ್ಥಿರಾಸ್ತಿ, ಚರಾಸ್ತಿಗಳ ಪರೀಶಿಲನೆ ಭಕ್ತರ ಸಮ್ಮುಖದಲ್ಲಿ ಪಾರದರ್ಶಕವಾಗಿ ನಡೆಯಬೇಕು. ದೇವಸ್ಥಾನ ಧಾರ್ಮಿಕ ಸಂಸ್ಥೆಗಳ ಮಹಾಸಂಘಕ್ಕೂ ಭಾಗವಹಿಸಲು ಅವಕಾಶ ನೀಡಬೇಕು ಎಂದು ಮಹಾಸಂಘದ ರಾಜ್ಯ ವಕ್ತಾರ ಗುರುಪ್ರಸಾದ ಗೌಡ ಒತ್ತಾಯಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದ ಅವ್ಯವಹಾರ ತನಿಖೆಯಲ್ಲಿ ಭಕ್ತರ ಸಹಭಾಗಿತ್ವ ಮುಖ್ಯವಾಗಿದ್ದು, ಅವಕಾಶ ನೀಡಬೇಕು. ಎಲ್ಲ ಆಯಾಮಗಳಿಂದ ತನಿಖೆ ನಡೆಯಬೇಕು ಎಂದು ಗುರುಪ್ರಸಾದ್ ಗೌಡ ಆಗ್ರಹಿಸಿದರು.
ಸರ್ಕಾರದ ಅಧೀನದಲ್ಲಿರುವ ಬಹುತೇಕ ಎಲ್ಲ ದೇವಸ್ಥಾನಗಳಲ್ಲಿ ಅವ್ಯವಹಾರ ನಡೆದಿದ್ದು, ದೇಗುಲಗಳು ಸರ್ಕಾರದ ಹಿಡಿತದಿಂದ ಮುಕ್ತವಾಗಿ ಖಾಸಗೀಕರಣವಾಗಬೇಕು. ಇದರಿಂದ ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಿದ್ದು, ಅಕ್ರಮಗಳನ್ನು ತಡೆಯಬಹುದು ಎಂದು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಮಹಾಸಂಘದ ಸದಸ್ಯ ಮಧುಸೂಧರ್ ಅಯ್ಯರ್, ಎಂ.ಪಿ.ದಿನೇಶ್, ಶ್ರೀನಿವಾಸ್, ಚಂದ್ರ ಮೊಗೇರ, ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ವಿಜಯ ಕುಮಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.