ಬ್ರಹ್ಮಾವರ: ಕರಾವಳಿಯಲ್ಲಿ ಕಳೆದ ಒಂದು ವಾರದಿಂದ ಮುಂಗಾರಿನ ಆಗಮನವಾಗಿದ್ದು, ಬ್ರಹ್ಮಾವರ ಪರಿಸರದಲ್ಲಿ ಭತ್ತದ ಬೇಸಾಯ ಗರಿಗೆದರಿದೆ. ಕೋಟ ಹೋಬಳಿಯಲ್ಲಿ ಸಾಕಷ್ಟು ಮುಂಚಿತವಾಗಿ ನೇಜಿ ಸಿದ್ಧಪಡಿಸಿಕೊಂಡಿದ್ದು ಈಗಾಗಲೇ ನಾಟಿ ಕಾರ್ಯ ಕೂಡ ಆರಂಭಿಸಿದ್ದಾರೆ. ಹಲವು ಕಡೆಗಳಲ್ಲಿ ನೇಜಿ ತಯಾರಿ ಭರದಿಂದ ನಡೆಯುತ್ತಿದೆ.
ಜಿಲ್ಲೆಯಲ್ಲಿ ಕಾರ್ಮಿಕರ ಕೊರತೆ, ಹೆಚ್ಚು ಶ್ರಮ ಮುಂತಾದ ಕಾರಣಗಳಿಗಾಗಿ ಸಾಂಪ್ರದಾಯಿಕ ಕೃಷಿ ವಿಧಾನದಿಂದ ರೈತರು ದೂರವಾಗುತ್ತಿದ್ದು, ನೇರ ಬಿತ್ತನೆ ಕಡೆಗೆ ಮನಸ್ಸು ಮಾಡುತ್ತಿದ್ದಾರೆ. ಹೀಗಾಗಿ ಎಲ್ಲಾ ಕಡೆಗಳಲ್ಲಿ ನೇರ ಬಿತ್ತನೆ, ಕೂರಿಗೆ, ಸಾಲು ಬೀಜ, ಡ್ರಮ್‌ಸೀಡರ್ ಮತ್ತು ಯಾಂತ್ರೀಕೃತ ನಾಟಿ ಹೆಚ್ಚಾಗಿ ಕಂಡುಬರುತ್ತಿದೆ. ಎರಡು ಮೂರು ವರ್ಷಗಳಿಂದ ಕೋವಿಡ್ ಕಾರಣದಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಹೆಚ್ಚಿದೆ. ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆಯೂ ಹೆಚ್ಚಿದೆ.
ತಾಲ್ಲೂಕಿನ ಕೋಟ ಮತ್ತು ಬ್ರಹ್ಮಾವರ ಹೋಬಳಿಯಲ್ಲಿ ಒಟ್ಟು 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ನಿರೀಕ್ಷೆ ಇದೆ. ಹಾಗೂ ಕೋಟದಲ್ಲಿ ಇದುವರೆಗೆ 357 ಕ್ವಿಂಟಾಲ್ ಮತ್ತು ಬ್ರಹ್ಮಾವರದಲ್ಲಿ 287 ಕ್ವಿಂಟಾಲ್ ಒಟ್ಟು ತಾಲ್ಲೂಕಿನಲ್ಲಿ 644 ಕ್ವಿಂಟಾಲ್ ಬಿತ್ತನೆ ಬೀಜ ರೈತರು ಖರೀದಿಸಿದ್ದಾರೆ. ಎಂ.ಓ4, ಸಹ್ಯಾದ್ರಿ ಪಂಚಮುಖಿ ಮತ್ತು ಬ್ರಹ್ಮ ತಳಿ ಹೆಚ್ಚು ಮಾರಾಟವಾಗಿದೆ ಎಂದು ಕೋಟದ ಕೃಷಿ ಅಧಿಕಾರಿ ಸುಪ್ರಭಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಈ ಬಾರಿ ಮಳೆ ವಿಳಂಬವಾಗಿದ್ದರಿಂದ ಶೇ 30ರಷ್ಟು ರೈತರು ನೇರ ಬಿತ್ತನೆ ಶೇ 40ರಷ್ಟು ಡ್ರಮ್ ಸೀಡರ್ ಚಾಪೆ ನೇಜಿ ಮೂಲಕ ಮತ್ತು ಉಳಿದ ಶೇ 30ರಷ್ಟು ರೈತರು ಸಾಂಪ್ರದಾಯಿಕ ನಾಟಿ ಕಾರ್ಯ ಮಾಡುತ್ತಿದ್ದಾರೆ.ಜಯರಾಮ ಶೆಟ್ಟಿ, ಪ್ರಗತಿಪರ ಕೃಷಿಕ
ಪ್ರಕೃತಿ ಮಾತೆ ರೈತರ ಪರ ಇಲ್ಲ
ವಿಷಾದ ಕೋಟದ ಪ್ರಗತಿಪರ ಕೃಷಿಕ ಜಯರಾಮ ಶೆಟ್ಟಿ ಅವರ ಪ್ರಕಾರ ಮುಂಗಾರು ಮಳೆ ಕಳೆದೆರಡು ವರ್ಷಗಳಿಂದ ಕೈಕೊಡುತ್ತಿದೆ. ಪ್ರಕೃತಿ ಮಾತೆ ರೈತರ ಪರವಾಗಿಲ್ಲ. ಆದರೂ ರೈತರು ಕೃಷಿ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಈ ಬಾರಿಯೂ ಒಳ್ಳೆಯ ಫಸಲು ಇಳುವರಿ ಮತ್ತು ಉತ್ತಮ ಬೆಂಬಲ ಬೆಲೆಯೂ ಸಿಗುವ ನಿರೀಕ್ಷೆಯಲ್ಲಿದ್ದೇವೆ ಎಂದು ವಿಷಾದದ ನಡುವೆಯೂ ಆಶಾಭಾವನೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.