ADVERTISEMENT

‘ಭತ್ತಕ್ಕೆ ನೈಜ ಬೆಲೆ ಸಿಗದಿದ್ದರೆ ರೈತರಿಂದ ಹೋರಾಟ’

ಕೋಟ ಪಂಚವರ್ಣ: ರೈತರೆಡೆಗೆ ನಮ್ಮ ನಡಿಗೆ ಮಾಲಿಕೆಯಲ್ಲಿ ಕೃಷಿಕ ಚಂದ್ರಶೇಖರ ಗಾಣಿಗಗೆ ರೈತ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 7:41 IST
Last Updated 20 ಅಕ್ಟೋಬರ್ 2024, 7:41 IST
ಕೃಷಿಕ ಚೆಚ್ಕೆರೆ ಚಂದ್ರಶೇಖರ ಗಾಣಿಗ ದಂಪತಿಯನ್ನು ಸನ್ಮಾನಿಸಲಾಯಿತು
ಕೃಷಿಕ ಚೆಚ್ಕೆರೆ ಚಂದ್ರಶೇಖರ ಗಾಣಿಗ ದಂಪತಿಯನ್ನು ಸನ್ಮಾನಿಸಲಾಯಿತು   

ಕೋಟ (ಬ್ರಹ್ಮಾವರ): ರೈತ ಕಾಯಕ ಕಷ್ಟಕರವಾದದ್ದು. ಅದರಲ್ಲಿ ಅಳಿದುಳಿದ ರೈತರು ತಮ್ಮ ಕಾಯಕದಲ್ಲಿ ನಿರತರಾಗಿದ್ದಾರೆ. ಆದರೆ ಅವರು ಬೆಳೆದ ಬೆಳೆಗಳ ಲಾಭ ಮಧ್ಯವರ್ತಿಗಳಿಗೆ ಆಗುತ್ತಿದೆ. ಭತ್ತದ ಬೆಳೆಗೆ ನೈಜ ಬೆಲೆ ಸಿಗದಿದ್ದರೆ ರೈತ ಸಮುದಾಯ ಹೋರಾಟಕ್ಕೆ ಧುಮುಕಲಿದೆ ಎಂದು ಇಲ್ಲಿನ ರೈತಧ್ವನಿ ಸಂಘದ ಅಧ್ಯಕ್ಷ ಎಂ. ಜಯರಾಮ ಶೆಟ್ಟಿ ತಿಳಿಸಿದರು.

ಇಲ್ಲಿನ ಪಂಚವರ್ಣ ಯುವಕ ಮಂಡಲ, ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಮಣೂರು ಗೀತಾನಂದ ಫೌಂಡೇಷನ್, ಕಾರ್ಕಡ ಗೆಳೆಯರ ಬಳಗ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ರೈತಧ್ವನಿ ಸಂಘ, ಸಾಲಿಗ್ರಾಮದ ವಿಪ್ರ ಮಹಿಳಾ ವಲಯ, ಜೆಸಿಐ ಸಿನಿಯರ್ ಲೀಜನ್ ಸಹಯೋಗದೊಂದಿಗೆ ನಡೆದ ‘ರೈತರೆಡೆಗೆ ನಮ್ಮ ನಡಿಗೆ’ 40ನೇ ಮಾಲಿಕೆಯಲ್ಲಿ ಅವರು ಮಾತನಾಡಿದರು.

ರೈತರ ಬವಣೆ ಆಲಿಸದ ಇಂದಿನ ಪರಿಸ್ಥಿತಿಯಲ್ಲಿ ಅವರ ಮನೆಯಂಗಳಕ್ಕೆ ತೆರಳಿ ಗೌರವಿಸುವ ಪಂಚವರ್ಣದ ಕಾರ್ಯ ಶ್ಲಾಘನೀಯ. ಸರ್ಕಾರ, ಜಿಲ್ಲಾಡಳಿತ ಮಾಡಬೇಕಾದ ಕಾರ್ಯ ಸಂಘ ಸಂಸ್ಥೆಗಳಿಂದ ಆಗುತ್ತಿದೆ. ಇಂತಹ ಕಾರ್ಯಕ್ರಮಗಳ ಮೂಲಕ ರೈತರ ಕಣ್ಣೀರೊರೆಸುವ ಕೆಲಸ ನಿರಂತರವಾಗಿ ನಡೆಯಲಿ ಎಂದ ಅವರು, ಕಟಾವಿಗೆ ಬಂದ ಭತ್ತಕ್ಕೆ ನೈಜ ಬೆಲೆ ಶೀಘ್ರದಲ್ಲೇ ನಿಗದಿಪ‍ಡಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ವಕೀಲ ಕೋಟತಟ್ಟು ಪ್ರಮೋದ ಹಂದೆ ಮಾತನಾಡಿ, ನಾವು ಕೃಷಿಭೂಮಿಗೆ ವಿಷಕಾರಿ‌ ವಸ್ತುಗಳನ್ನು ಅತಿಯಾಗಿ ಬಳಸುತ್ತಿದ್ದೇವೆ. ಇದು ನಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದಕ್ಕೆ ರೈತ ಸಮುದಾಯ ಕಡಿವಾಣ ಹಾಕಬೇಕು. ಅತಿಯಾಗಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ವಿಜೃಂಭಿಸುತ್ತಿದ್ದು, ಇದು ಭೂಮಿಯ ಫಲವತ್ತತೆ ಹಾಳು ಮಾಡುತ್ತಿದೆ ಎಂದರು.

ಪ್ರಗತಿಪರ ಕೃಷಿಕ ಕೋಟತಟ್ಟು ಚೆಚ್ಕೆರೆ ಚಂದ್ರಶೇಖರ ಗಾಣಿಗ ದಂಪತಿಯನ್ನು ಕೃಷಿ ಪರಿಕರ ನೀಡಿ ಗೌರವಿಸಲಾಯಿತು. ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಜಿತ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಉಡುಪಿ ಜಿಲ್ಲಾ ಸಂಯೋಜಕ ರವೀಂದ್ರ ಮೊಗವೀರ ವಿಮಾ ಯೋಜನೆ ಬಗ್ಗೆ ಮಾಹಿತಿ ನೀಡಿದರು.

ಕೋಟ ಸಹಕಾರಿ ವ್ಯವಸಾಯಕ ಸಂಘದ ಸಿಇಒ ಶರತ ಕುಮಾರ್ ಶೆಟ್ಟಿ, ಕೋಟತಟ್ಟು ಗ್ರಾಮ ಪಂಚಾಯಿತಿ ಸದಸ್ಯ ವಾಸು ಪೂಜಾರಿ, ಸ್ಥಳೀಯ ಮುಖಂಡ ವೈಕುಂಠ ಹಂದೆ, ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ಅಧ್ಯಕ್ಷ ಜಿ. ತಿಮ್ಮ ಪೂಜಾರಿ, ಜೆಸಿಐ ಸೀನಿಯರ್ ಲೀಜನ್ ಕೋಟ ಅಧ್ಯಕ್ಷ ಕೇಶವ ಆಚಾರ್, ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಪಂಚವರ್ಣ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ ಗಾಣಿಗ ಇದ್ದರು.

ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಶಕೀಲ ಎನ್. ಪೂಜಾರಿ ಸನ್ಮಾನಪತ್ರ ವಾಚಿಸಿದರು. ಸದಸ್ಯ ಸಂತೋಷ್ ಕುಮಾರ್ ಕೋಟ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಶಶಿಧರ ತಿಂಗಳಾಯ ವಂದಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.