ಬ್ರಹ್ಮಾವರ: ಇಂದಿನ ಡಿಜಿಟಲ್ ಯುಗದಿಂದಾಗಿ ಯುವಜನರ ಮಿದುಳಿನ ನಿಯಂತ್ರಣ ಕಳೆದುಕೊಂಡಿದ್ದಾರೆ ಎಂದು ಉದ್ಯಮಿ ವಿಜಯ ಸಂಕೇಶ್ವರ ಹೇಳಿದರು.
ಕೋಟದ ಗಾಂಧಿ ಮೈದಾನದಲ್ಲಿ ಪಂಚವರ್ಣ ಯುವಕ ಮಂಡಲ, ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಶನಿವಾರ ನಡೆದ ಕನ್ನಡ ರಾಜ್ಯೋತ್ಸವ ಸದ್ಭಾವನಾ ನಾಡುನುಡಿಗೆ ಭಾವ ನಮನ ಕಾರ್ಯಕ್ರಮದಲ್ಲಿ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿ, ಇಂದು ಎಲ್ಲವೂ ಡಿಜಿಟಲ್ ಆದ ಕಾರಣ ಪುಸ್ತಕ ಓದುಗರ ಸಂಖ್ಯೆ ವಿರಳವಾಗಿದೆ. ಇದು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪುಸ್ತಕ ಓದುವ ಅಭ್ಯಾಸ ಯುವಜನರು ರೂಢಿಸಿಕೊಳ್ಳಬೇಕು ಎಂದರು.
ದೇಶದ 23 ರಾಜ್ಯಗಳಲ್ಲಿ ಗುಟ್ಕಾ, ತಂಬಾಕು ನಿಷೇಧ ಮಾಡಿದ್ದರೂ ಕರ್ನಾಟಕದಲ್ಲಿ ಮಾತ್ರ ನಿಷೇಧ ಮಾಡದಿರುವುದು ದುರದೃಷ್ಟಕರ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಯುವಜನರು ನಿಷೇಧದ ಬಗ್ಗೆ ಅಭಿಯಾನ ಪ್ರಾರಂಭಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು. ಯುವಜನರು ಸಾಮರ್ಥ್ಯ ಗುರುತಿಸಿಕೊಂಡು ನಾಳೆಯ ಚಿಂತನೆ, ಯೋಜನೆ ಬೆಳೆಸಿ ಯಶಸ್ಸು ಕಾಣಬೇಕು. ಸರ್ಕಾರದ ಅನುದಾನಕ್ಕೆ ಕಾಯದೆ ಸ್ವಂತ ಕಾಲಲ್ಲಿ ನಿಲ್ಲುವ ಮನಸ್ಸು ಮಾಡಬೇಕು ಎಂದರು.
ನಟ ಎಸ್. ದೊಡ್ಡಣ್ಣ ಮಾತನಾಡಿ, ಜಗತ್ತಿನಲ್ಲಿ ಕನ್ನಡ ಭಾಷೆಗೆ ಶ್ರೇಷ್ಠ ಸ್ಥಾನವಿದೆ. ರನ್ನ, ಪಂಪ, ನೃಪತುಂಗರಂತಹ ಅನೇಕ ಕವಿ ಮಹಾತ್ರಯರು ಕನ್ನಡ ಉಳಿಸಿ ಬೆಳೆಸಿದ್ದಾರೆ. 8 ಜ್ಞಾನಪೀಠ ಪುರಸ್ಕಾರ ಕನ್ನಡ ಸಾಹಿತಿಗಳಿಗೆ ದೊರಕಿರುವುದು ಕನ್ನಡ ಭಾಷೆ ಹಿರಿಮೆ ಸಾರುತ್ತದೆ ಎಂದರು.
ಉದ್ಯಮಿ ವಿಜಯ ಸಂಕೇಶ್ವರ ಅವರಿಗೆ ನಟ ದೊಡ್ಡಣ್ಣ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಕಳದ ಸ್ವಚ್ಛ ಬ್ರಿಗೇಡ್ ತಂಡಕ್ಕೆ ವಿಶೇಷ ಪುರಸ್ಕಾರ, ಬೆಂಗಳೂರಿನ ಯಕ್ಷಕಲಾ ಅಕಾಡೆಮಿ ಮುಖ್ಯಸ್ಥ ಕೃಷ್ಣಮೂರ್ತಿ ತುಂಗ ಅವರನ್ನು ವಿಶೇಷವಾಗಿ ಅಭಿನಂದಿಸಲಾಯಿತು. ಬಹುಮುಖ ಪ್ರತಿಭೆಗಳಾದ ಸುಶ್ಮಿತಾ ಕೃಷ್ಣಮೂರ್ತಿ ಸಾಲಿಗ್ರಾಮ, ಪ್ರಜ್ಞಾ ಗೀತಾ ಪೂಜಾರಿ ಹಂದಟ್ಟು ಅವರನ್ನು ಪುರಸ್ಕರಿಸಲಾಯಿತು. ಉಡುಪಿಯ ಹೊಸಬದುಕು ಆಶ್ರಮಕ್ಕೆ ದಿನಸಿ ಪರಿಕರ, ಅಶಕ್ತ ಅನಾರೋಗ್ಯ ಪೀಡಿತರಿಗೆ, ಅಂಗವಿಕಲರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ದಿ.ಉದಯ ಪೂಜಾರಿ ಸ್ಮರಣಾರ್ಥ ಸಹಾಯಹಸ್ತ ನೀಡಲಾಯಿತು. ಸ್ಥಳೀಯ ಕನ್ನಡ ಮಾಧ್ಯಮ ಶಾಲೆಗಳಿಗೆ ದತ್ತಿನಿಧಿ, ಅಂಗನವಾಡಿ ಶಾಲೆಗಳಿಗೆ ವಿವಿಧ ಪರಿಕರ ಹಸ್ತಾಂತರಿಸಲಾಯಿತು.
ಉದ್ಯಮಿ, ಸಮಾಜ ಸೇವಕ ಆನಂದ ಸಿ ಕುಂದರ್ ಉದ್ಘಾಟಿಸಿದರು. ಸಮಾಜ ಸೇವಕ ಮುಂಬೈ ಒಎನ್‌ಜಿಸಿ ನಿವೃತ್ತ ಮೆನೇಜರ್ ಬನ್ನಾಡಿ ನಾರಾಯಣ ಆಚಾರ್ ಶುಭಾಶಂಸನೆ ಮಾಡಿದರು. ಪಂಚವರ್ಣ ಅಧ್ಯಕ್ಷ ಅಜಿತ ಅಚಾರ್ ಅಧ್ಯಕ್ಷತೆ ವಹಿಸಿದ್ದರು.
ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಸುರೇಶ ಪ್ರಭು, ಮುಂಬೈನ ಸಮಾಜ ಸೇವಕ, ಉದ್ಯಮಿ ಬಡಾಮನೆ ರತ್ನಾಕರ ಶೆಟ್ಟಿ, ರಾಜ್ಯ ಕರಕುಶಲ ನಿಗಮದ ಮಾಜಿ ಅಧ್ಯಕ್ಷ ಬಿ. ರಾಘವೇಂದ್ರ ಶೆಟ್ಟಿ, ಯಡಾಡಿ ಮತ್ಯಾಡಿಯ ಸುಜ್ಞಾನ ಎಜುಕೇಷನ್ ಟ್ರಸ್ಟ್ ಮುಖ್ಯಸ್ಥ ರಮೇಶ ಶೆಟ್ಟಿ, ಎಂಜಿನಿಯರ್ ಜಯರಾಜ ಶೆಟ್ಟಿ, ಬೆಂಗಳೂರು ಉದ್ಯಮಿ ಕರುಣಾಕರ ಖಲಾಸೆ, ಸಾಂಸ್ಕ್ರತಿಕ ಚಿಂತಕ ಋಷಿರಾಜ್ ಸಾಸ್ತಾನ, ಪಾಂಡೇಶ್ವರ ರಕ್ತೇಶ್ವರಿ ದೇವಸ್ಥಾನದ ಧರ್ಮದರ್ಶಿ ಕೆ.ವಿ. ರಮೇಶ ರಾವ್, ಪಂಚವರ್ಣ ಗೌರವಾಧ್ಯಕ್ಷ ಸತೀಶ ಎಚ್. ಕುಂದರ್, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ ಗಾಣಿಗ, ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ ಪೂಜಾರಿ, ಗೌರವಾಧ್ಯಕ್ಷೆ ಕುಸುಮ ದೇವಾಡಿಗ, ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ಇದ್ದರು. ಪಂಚವರ್ಣ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿದರು. ಕಾರ್ಯದರ್ಶಿ ಸುಧೀಂದ್ರ ಜೋಗಿ ವಂದಿಸಿದರು. ಶಿಕ್ಷಕರಾದ ಸತೀಶ್‌ಚಂದ್ರ ಶೆಟ್ಟಿ, ಸಂತೋಷ್ ಕುಮಾರ್ ಕೋಟ ನಿರೂಪಿಸಿದರು. ಪಂಚವರ್ಣ ಮಹಿಳಾ ಮಂಡಲ ಸಂಚಾಲಕಿ ಸುಜಾತ ಬಾಯರಿ ಸಹಕರಿಸಿದರು.
ಸಂಪ್ರದಾಯ ಸಂಸ್ಕೃತಿ ಕಲೆ ಭಾಷೆ ರಕ್ತ ಸಂಬಂಧವನ್ನು ನಾವು ಅವಿಭಜಿತ ಜಿಲ್ಲೆ ಉಡುಪಿ ದಕ್ಷಿಣ ಕನ್ನಡಜಿಲ್ಲೆಗಳಲ್ಲಿ ಕಾಣಬಹುದು. ಇದು ಎಲ್ಲರಿಗೂ ಮಾದರಿವಿಜಯ ಸಂಕೇಶ್ವರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.