ADVERTISEMENT

ಸಿಎಂ ನನ್ನ ವಿರುದ್ಧದ ಆರೋಪ ವಾಪಸ್ ಪಡೆಯದಿದ್ದರೆ ಧರಣಿ: ಕೋಟ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 19:20 IST
Last Updated 20 ಜುಲೈ 2024, 19:20 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಉಡುಪಿ: ‘ಕೊಳವೆಬಾವಿ ಯೋಜನೆಯಲ್ಲಿ ಭ್ರಷ್ಟಾಚಾರ ಎಸಗಿದ್ದೇನೆ ಎಂದು ಸಿ.ಎಂ ಸಿದ್ದರಾಮಯ್ಯ ಮಾಡಿರುವ ಆರೋಪವನ್ನು ವಾರದಲ್ಲಿ ಹಿಂಪಡೆಯದಿದ್ದರೆ ವಿಧಾನಸೌಧದ ಗಾಂಧಿಪ್ರತಿಮೆ ಮುಂದೆ ಧರಣಿ ಕೂರುತ್ತೇನೆ’ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕೊಳವೆಬಾವಿ ಯೋಜನೆಯಲ್ಲಿ ಹಾಗೂ ಭೋವಿ ನಿಗಮದಲ್ಲಿ ನಾನು ಒಂದೇ ಒಂದು ರೂಪಾಯಿ ಹಗರಣ ನಡೆಸಿದ್ದರೂ ಅದರ ತನಿಖೆಯನ್ನು ಸಿಬಿಐಗೆ ನೀಡಲಿ’ ಎಂದೂ ಸವಾಲು ಹಾಕಿದರು.

‘ಸಿಐಡಿ ನಿಮ್ಮ ಕೈಯಲ್ಲಿದೆ. ನೀವು ಮುಖ್ಯಮಂತ್ರಿ ಆಗಿ ವರ್ಷವಾಯಿತು. ನಾನು ತಪ್ಪು ಮಾಡಿದ್ದರೆ ತನಿಖೆ ನಡೆಸುವ ಅಧಿಕಾರ ನಿಮಗೆ ಇತ್ತು. ಅದನ್ನು ಮಾಡಿಲ್ಲ. ಈಗ ವಾಲ್ಮೀಕಿ ನಿಗಮ ಹಗರಣದ ಆರೋಪ ಬಂದಾಗ ಅದನ್ನು ಬೇರೆಯವರ ತಲೆಗೆ ಕಟ್ಟಲು ಪ್ರಯತ್ನಿಸುತ್ತಿದ್ದೀರಿ. ಅದೇ ಕಾರಣಕ್ಕೆ ನನ್ನ ಹೆಸರೂ ಉಲ್ಲೇಖಿಸಿದ್ದೀರಿ’ ಎಂದರು.

‘ಹಿಂದೆ ಸಿದ್ದರಾಮಯ್ಯ ಅವರು ಸಿ.ಎಂ ಆಗಿದ್ದಾಗ ಕೆಲ ಅಧಿಕಾರಿಗಳನ್ನು ನೇಮಿಸಿದ್ದರು. ಅವರು ದುರ್ನಡತೆಯವರಾಗಿದ್ದು, ಹಗರಣ ಮಾಡಿದ್ದರು. ನಾನು ಸಚಿವನಾಗಿದ್ದಾಗ ಅವರನ್ನು ಅಮಾನತು ಮಾಡಿದ್ದೆ. ಸಿಐಡಿ ತನಿಖೆಗೂ ಆದೇಶಿಸಿದ್ದೆ’ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.