ADVERTISEMENT

ಸಾಲ ಮಾಡಿ ಮನೆ ಕಟ್ಟುತ್ತಿದ್ದೇನೆ: ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 12:30 IST
Last Updated 30 ಜುಲೈ 2021, 12:30 IST
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ   

ಉಡುಪಿ: ‘ಬ್ಯಾಂಕ್‌ ಸಾಲ ಹಾಗೂ ಸ್ವಂತ ದುಡಿಮೆಯಿಂದ ಬ್ರಹ್ಮಾವರ ತಾಲ್ಲೂಕಿನ ಗಿಳಿಯಾರು ಗ್ರಾಮದಲ್ಲಿರುವ 13 ಸೆಂಟ್ಸ್ ಜಾಗದಲ್ಲಿ ₹ 60 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದೇನೆ. ಆದರೆ, ಕೆಲವರು ₹ 6 ಕೋಟಿ ವೆಚ್ಚದಲ್ಲಿ ಮನೆ ಕಟ್ಟಿಸುತ್ತಿರುವುದಾಗಿ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಡುತ್ತಿದ್ದು, ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಲೋಕಾಯುಕ್ತಕ್ಕೆ ಮನವಿ ಸಲ್ಲಿಸಿದ್ದಾರೆ.

3 ಬಾರಿ ವಿಧಾನ ಪರಿಷತ್ ಸದಸ್ಯ, 2 ಬಾರಿ ಸಂಪುಟ ದರ್ಜೆ ಸಚಿವ ಹಾಗೂ 1 ಬಾರಿ ವಿರೋಧ ಪಕ್ಷದ ನಾಯಕನಾಗಿದ್ದೇನೆ. ಪ್ರತಿವರ್ಷ ಆಸ್ತಿಯ ವಿವರಗಳನ್ನು ಲೋಕಾಯುಕ್ತರಿಗೆ ಸಲ್ಲಿಸುತ್ತಾ ಬಂದಿದ್ದೇನೆ. ಆದರೂ, ಈಗ ನಿರ್ಮಾಣ ಮಾಡುತ್ತಿರುವ ಮನೆಯ ಬಗ್ಗೆ ವಿನಾಕಾರಣ ಅಪಪ್ರಚಾರ ಮಾಡುತ್ತಿರುವುದು ನೋವುಂಟು ಮಾಡಿದೆ ಎಂದು ಕೋಟ ತಿಳಿಸಿದ್ದಾರೆ.

ಸ್ವಂತ ಆದಾಯದಿಂದ 13 ಸೆಂಟ್ಸ್‌ ಜಾಗ ಖರೀದಿಸಿ ಗ್ರಾಮ ಪಂಚಾಯಿತಿಯಿಂದ ಪರವಾನಗಿ ಪಡೆದು ಮನೆ ಕಟ್ಟಿಸುತ್ತಿದ್ದೇನೆ. 2 ವರ್ಷಗಳ ಹಿಂದೆ ಅಪೆಕ್ಸ್‌ ಬ್ಯಾಂಕ್‌ನಿಂದ ₹ 35 ಲಕ್ಷ ಸಾಲ ಪಡೆಯಲಾಗಿದ್ದು, ಮತ್ತೆ ₹ 40 ಲಕ್ಷ ಸಾಲಕ್ಕಾಗಿ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದೇನೆ. ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಮಹತ್ತರ ವಿದ್ಯಮಾನಗಳು ನಡೆಯುತ್ತಿರುವ ಸಂದರ್ಭದಲ್ಲಿ, ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆಗೆ ಮಹತ್ವ ನೀಡುತ್ತಾ ಬಂದಿದ್ದೇನೆ. ಶಾಸಕನಾದಾಗಿನಿಂದ ಇಲ್ಲಿಯವರೆಗೂ ಪಡೆದಿರುವ ವೇತನ, ಗೌರವಧನ, ಆರ್ಥಿಕ ನೆರವು ಹಾಗೂ ಮಗನ ಉದ್ದಿಮೆಯಿಂದ ಬಂದ ಆದಾಯವನ್ನು ಪರಿಗಣಿಸಿ, ಆದಾಯಕ್ಕಿಂತ ಮನೆಯ ನಿರ್ಮಾಣದ ವೆಚ್ಚ ಹೆಚ್ಚಾಗಿರುವುದು ಕಂಡುಬಂದರೆ ನನ್ನ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಜತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ದುರುದ್ದೇಶಪೂರಿತ ಆರೋಪ ಮಾಡಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಲೋಕಾಯುಕ್ತರಿಗೆ ಮನವಿ ಮಾಡಿದ್ದಾರೆ.

ಹಿನ್ನೆಲೆ:

‘ಸರಳ ಹಾಗೂ ಸಜ್ಜನರಾದವರು 13 ಸೆಂಟ್ಸ್‌ ಜಾಗದಲ್ಲಿ ₹ 6 ಕೋಟಿ ವೆಚ್ಚದಲ್ಲಿ ಗುಡಿಸಲು ನಿರ್ಮಾಣ ಮಾಡುತ್ತಿದ್ದಾರೆ’ ಎಂಬ ಬರಹ ಫೇಸ್‌ಬುಕ್‌ನಲ್ಲಿ ಹೆಚ್ಚು ಸುದ್ದಿಯಾಗಿತ್ತು. ಈ ಆರೋಪಕ್ಕೆ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.