ADVERTISEMENT

ಕಮಿಷನ್ ಆರೋಪ: ಹೆಸರು ಬಹಿರಂಗಪಡಿಸಲು ದಿಂಗಾಲೇಶ್ವರ ಶ್ರೀಗಳಿಗೆ ಸಚಿವ ಕೋಟ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 13:36 IST
Last Updated 19 ಏಪ್ರಿಲ್ 2022, 13:36 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಉಡುಪಿ: ಸರ್ಕಾರದಿಂದ ಮಠಗಳಿಗೆ ಬಿಡುಗಡೆಯಾದ ಅನುದಾನ ಪಡೆದುಕೊಳ್ಳಲು ಯಾವ ಇಲಾಖೆಯ ಅಧಿಕಾರಿ ಹಣ ಕೇಳಿದ್ದಾರೆ ಎಂದು ದಿಂಗಾಲೇಶ್ವರ ಶ್ರೀಗಳು ಸ್ಪಷ್ಟಪಡಿಸಿದರೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹಿಂದುಳಿದ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಂಗಳವಾರ ಪ್ರೆಸ್‌ಕ್ಲಬ್ ಬಳಿ ಮಾತನಾಡಿದ ಸಚಿವರು ‘ಏಪ್ರಿಲ್ ಮೊದಲ ವಾರದಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ 65 ಮಠಗಳಿಗೆ ₹ 119 ಕೋಟಿ ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳು ಆದೇಶ ಮಾಡಿದ್ದಾರೆ, ಆದರೆ, ಇನ್ನೂ ಹಣ ಬಿಡುಗಡೆಯಾಗಿಲ್ಲ. ಬಿಡುಗಡೆಯಾಗಬೇಕಾದರೆ ಅಧಿಕಾರಿಗಳು ಸಂಬಂಧಿತ ಮಠಗಳಿಗೆ ಭೇಟಿನೀಡಿ ದಾಖಲೆಗಳನ್ನು ಪರಿಶೀಲಿಸಿ ಯೋಜನಾ ವರದಿ ಸಿದ್ಧಪಡಿಸಬೇಕು. ಇಲ್ಲಿಯವರೆಗೂ ಒಂದು ಪೈಸೆ ಕೂಡ ಇಲಾಖೆಯಿಂದ ಬಿಡುಗಡೆಯಾಗಿಲ್ಲ ಎಂದು ತಿಳಿಸಿದರು.

‘ಸಮಾಜಕ್ಕೆ ಸಾಧು ಸಂತರು ಸಂದೇಶ ನೀಡುವಾಗ ಗೊಂದಲಗಳಿರಬಾರದು. ದಿಂಗಾಲೇಶ್ವರ ಶ್ರೀಗಳು ನಿರ್ಧಿಷ್ಟವಾಗಿ ಯಾವ ವಿಚಾರ, ಕಾಮಗಾರಿ, ಇಲಾಖೆ ಹಾಗೂ ಅಧಿಕಾರಿಯ ಹೆಸರು ಹೇಳಿದರೆ ಸಮಗ್ರವಾಗಿ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ಇಲಾಖೆ ಪಾರದರ್ಶಕ ಹಾಗೂ ಗುಣಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಆರೋಪ ಮಾಡುವ ಅಧಿಕಾರ ಇದೆ. ಆದರೆ, ಸತ್ಯಕ್ಕೆ ಅಪಚಾರವಾಗದಂತೆ ಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಿದರು.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.