ಕೋಟ (ಬ್ರಹ್ಮಾವರ): ‘ಜ್ಞಾನವು ಸಾರ್ಥಕತೆಯ ಬದುಕು ಕಲಿಸಿಕೊಡುತ್ತದೆ. ಕಾರಂತರಂಥ ಜ್ಞಾನದ ದೀವಿಗೆ ಎಲ್ಲಾ ಕಾಲಕ್ಕೂ ಶಾಶ್ವತ’ ಎಂದು ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಹೇಳಿದರು.
ಕೋಟದ ಶಿವರಾಮ ಕಾರಂತ ಥೀಂ ಪಾರ್ಕ್ನಲ್ಲಿ ಭಾನುವಾರ ಕೋಟತಟ್ಟು ಗ್ರಾಮ ಪಂಚಾಯಿತಿ, ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಉಡುಪಿಯ ಶಿವರಾಮ ಕಾರಂತ ಟ್ರಸ್ಟ್ ಸಹಯೋಗದಲ್ಲಿ ನಡೆದ ಶಿವರಾಮ ಕಾರಂತ ಜನ್ಮದಿನೋತ್ಸವ, 20ನೇ ವರ್ಷದ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ‘ಸವಿನ್ಯ; ಅನುಭವಗಳ ನಾವಿನ್ಯ’ದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
‘ನೇರ ನುಡಿಯ, ಪರಿಸರವಾದಿಯಾಗಿದ್ದ ಶಿವರಾಮ ಕಾರಂತರನ್ನು ಲೋಕವೇ ಗೌರವಿಸುತ್ತದೆ. ಲೌಕಿಕ ಅಲೌಕಿಕ ಜ್ಞಾನ ದೀವಿಗೆಯಾಗಿದ್ದ ಕಾರಂತರು ಕೋಟದ ಸುಪುತ್ರ’ ಎಂದರು.
ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಹಿತಿ, ಮೈಸೂರಿನ ಪ್ರೊ.ಕೃಷ್ಣೇಗೌಡ, ‘ಕಾರಂತರ ಹೆಸರಿನ ಪ್ರಶಸ್ತಿ ಸ್ವೀಕರಿಸಿ ನನ್ನ ಗೌರವ ಇನ್ನಷ್ಟು ಹೆಚ್ಚಿದೆ. ಜೀವನದಿಂದ ಹೊರಗೆ ಹೋಗಿ ಬದುಕು ಹೇಗಿದೆ ಎನ್ನುವುದನ್ನು ಸಾಹಿತ್ಯ ಕಲಿಸಿಕೊಡುತ್ತದೆ. ಮನುಷ್ಯ ಚೈತನ್ಯಶಾಲಿಯಾಗಿ ಬೆಳೆಯಲು ಅಲ್ಲಿನ ವಾತಾವರಣ ಮುಖ್ಯ. ಸಮುದ್ರ, ಪರ್ವತ, ಹವಾಮಾನ ವೈಪರೀತ್ಯ, ದಟ್ಟ ಕಾಡು, ಬಿಸಿಲ ಬಾಧೆ, ಚಳಿ ಇವೆಲ್ಲ... ಸವಾಲುಗಳಿದ್ದಲ್ಲಿ ಜನರು ಸಾಹಸಿಗಳಾಗುತ್ತಾರೆ ಎನ್ನುವುದಕ್ಕೆ ಶಿವರಾಮ ಕಾರಂತರೇ ಉತ್ತಮ ಉದಾಹರಣೆ’ ಎಂದರು.
ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕ ಯು.ಎಸ್. ಶೆಣೈ ಪ್ರಶಸ್ತಿ ಆಯ್ಕೆಯ ಕುರಿತು ಮಾಹಿತಿ ನೀಡಿದರು. ಗಾಂಧಿ ಗ್ರಾಮ ಪುರಸ್ಕೃತ ಗ್ರಾಮ ಪಂಚಾಯಿತಿಗಳನ್ನು ಪುರಸ್ಕರಿಸಲಾಯಿತು. ರಾಜ್ಯಪಾಲ ಸಿ.ಎಚ್. ವಿಜಯ ಶಂಕರ್, ಉದ್ಯಮಿ ಆನಂದ ಸಿ. ಕುಂದರ್ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ನರೇಂದ್ರ ಕುಮಾರ್ ಕೋಟ, ಕಾರಂತ ಥೀಂ ಪಾರ್ಕ್ ಮೇಲ್ವಿಚಾರಕರಾಗಿದ್ದ ಪ್ರಶಾಂತ್ ಅವರನ್ನು ಗೌರವಿಸಲಾಯಿತು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಹಾಯಕ ಉಪ ವಿಭಾಗಾಧಿಕಾರಿ ಮಹೇಶ್ಚಂದ್ರ, ಕೋಟತಟ್ಟು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಹರೀಶ ಶೆಟ್ಟಿ ಇದ್ದರು. ಶಿವರಾಮ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ. ಕುಂದರ್ ಸ್ವಾಗತಿಸಿದರು. ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಕೆ. ಸತೀಶ ಕುಂದರ್ ವಂದಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಜೊತೆ ಕಾರ್ಯದರ್ಶಿ ಸತೀಶ ವಡ್ಡರ್ಸೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.