ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಉತ್ಸವಕ್ಕಾಗಿ ಉಡುಪಿಯ ಶ್ರೀಕೃಷ್ಣ ಮಠ ಸಿಂಗಾರಗೊಂಡು ಸಜ್ಜಾಗುತ್ತಿದೆ.
ಅಷ್ಟಮಿ ಅಂಗವಾಗಿ ಇದೇ 26ರಂದು ಕೃಷ್ಣನಿಗೆ ಅರ್ಘ್ಯ ಪ್ರದಾನ ನಡೆಯಲಿದ್ದು, 27 ವಿಟ್ಲಪಿಂಡಿ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಸಾವಿರಾರು ಮಂದಿ ಭಕ್ತರು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ವಿಟ್ಲಪಿಂಡಿಯಂದು ಮೊಸರು ಕುಡಿಕೆ ನೇತುಹಾಕುವ ಗುರ್ಜಿಗಳನ್ನು ರಥಬೀದಿಯಲ್ಲಿ ಹಲವು ಕಡೆ ನೆಡಲಾಗಿದೆ. ಮೊಸರು, ಅರಿಶಿನ, ಕುಂಕುಮ ಮಿಶ್ರಿತ ದ್ರವ್ಯಗಳನ್ನು ಅಲಂಕೃತ ಮಣ್ಣಿನ ಕುಡಿಕೆಗಳಿಗೆ ತುಂಬಿಸಿ ಈ ಗುರ್ಜಿಗಳಿಗೆ ನೇತು ಹಾಕಲಾಗುತ್ತದೆ. ಗೊಲ್ಲ ವೇಷಧಾರಿಗಳು ಅದನ್ನು ಒಡೆಯುತ್ತಾರೆ.
ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚುವ ಚಕ್ಕುಲಿ, ಉಂಡೆಗಳ ತಯಾರಿಗೂ ಸಿದ್ಧತೆ ನಡೆದಿದೆ. ರಥಬೀದಿಯಲ್ಲಿ ಹೂವು ಹಾಗೂ ಪೂಜಾ ಸಾಮಾಗ್ರಿಗಳ ಮಾರಾಟವು ಗರಿಗೆದರಿದೆ.
ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಈ ಬಾರಿ ಶ್ರೀಕೃಷ್ಣ ಮಾಸೋತ್ಸವ ಮೂಲಕ ಆ. 1ರಿಂದ ಸೆ.1ರವರೆಗೆ ಆಚರಿಸಲಾಗುತ್ತಿದೆ.
ಮಾಸೋತ್ಸವದ ಅಂಗವಾಗಿ ಈಗಾಗಲೇ ಕ್ರೀಡೋತ್ಸವ, ಲಡ್ಡೋತ್ಸವ ಮತ್ತು ಲೀಲೋತ್ಸವ ನಡೆದಿದ್ದು, ಇದೇ 25ರಂದು ನೃತ್ಯೋತ್ಸವ ಮತ್ತು 26ರಂದು ಡೋಲೋತ್ಸವ 27ರಂದು ಲೀಲೋತ್ಸವ ನಡೆಯಲಿದೆ.
ವಿಟ್ಲಪಿಂಡಿಯಂದು ಹುಲಿ ವೇಷ ಸೇರಿದಂತೆ ವಿವಿಧ ವೇಷಧಾರಿಗಳ ಕುಣಿತ ಪ್ರದರ್ಶನ ಹಾಗೂ ಸ್ಪರ್ಧೆಗಳು ನಡೆಯಲಿದ್ದು, ಹುಲಿಗಳ ಕುಣಿತಕ್ಕಾಗಿ ವೇದಿಕೆ ನಿರ್ಮಿಸುವ ಕೆಲಸವೂ ಭರದಿಂದ ಸಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.