ಉಡುಪಿ: ದೇವರನ್ನು ದೇವಸ್ಥಾನದಲ್ಲಿ ಮಾತ್ರವಲ್ಲ; ಮಕ್ಕಳಲ್ಲಿಯೂ ಕಾಣಬಹುದು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಕೃಷ್ಣಮಠದ ರಾಜಾಂಗಣದಲ್ಲಿ ಗುರುವಾರ ನಡೆದ ಚಿಣ್ಣರ ಮಾಸೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘2002ರಲ್ಲಿ ಪಲಿಮಾರು ಮಠದಿಂದ ಉಡುಪಿ ನಗರದ ಆಸುಪಾಸಿನ ಶಾಲೆಗಳಿಗೆ ಗಂಜಿ ಊಟ ಪೂರೈಸುವ ಕಾರ್ಯಕ್ರಮ ಆರಂಭಿಸಿದರು. ಇದು ದೇಶದ ಕೋಟ್ಯಂತರ ಮಕ್ಕಳ ಹೊಟ್ಟೆ ತುಂಬಿಸುವ ಅಕ್ಷರ ದಾಸೋಹ ಯೋಜನೆಗೆ ಪ್ರೇರಣೆಯಾಯಿತು ಎಂದರು.
ಪಲಿಮಾರು ಶ್ರೀಗಳು ಶಾಲಾ ಮಕ್ಕಳಿಗೆ ಗಂಜಿ ಊಟ ನೀಡುವ ಕಾರ್ಯಕ್ರಮ ಆರಂಭಿಸಿದಾಗ ರಾಜ್ಯದಲ್ಲಿ ಎಸ್.ಎಂ.ಕೃಷ್ಣ ಸರ್ಕಾರ ಇತ್ತು. ಶ್ರೀಗಳಿಂದ ಯೋಜನೆಯ ಮಾಹಿತಿ ಪಡೆದ ಮುಖ್ಯಮಂತ್ರಿಗಳು ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಆರಂಭಿಸಿದರು. ರಾಜ್ಯದ ಯೋಜನೆ ದೇಶದೆಲ್ಲೆಡೆ ಜಾರಿಗೆ ಕಾರಣವಾಯಿತು ಎಂದರು.
ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಮಾತನಾಡಿ, ಚಿಣ್ಣರ ಉತ್ಸವ ಎಂದರೆ ಕೃಷ್ಣನ ಉತ್ಸವವಿದ್ದಂತೆ. ಮಕ್ಕಳಲ್ಲಿ ಕೃಷ್ಣನನ್ನು ಕಂಡು ಆನಂದಿಸಬಹುದು. ತಿಂಗಳ ಕಾಲ ನಡೆಯುವ ಚಿಣ್ಣರ ಉತ್ಸವದಲ್ಲಿ ಮಕ್ಕಳು ಆನಂದಿಸಲಿ ಎಂದರು.
ಸಂವಿಧಾನದ ಆಶಯದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಉನ್ನತ ಹುದ್ದೆಗೇರಬಹುದು. ಇಂದಿನ ಮಕ್ಕಳು ಮುಂದೆ ಪ್ರಧಾನಿ, ರಾಷ್ಟ್ರಪತಿಗಳಾಗಬಹುದು. ದೇಶವನ್ನು ಸಮರ್ಥವಾಗಿ ಮುನ್ನಡೆಸುವ ನಾಯಕರಾಗಿ ಬೆಳೆಯಲಿ ಎಂದು ಸ್ವಾಮೀಜಿ ಹರಸಿದರು.
ಚಿಣ್ಣರ ಸಂತರ್ಪಣೆ ಯೋಜನೆಯ ಅಧ್ಯಕ್ಷರಾದ ಅರುಣ್ ಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಯೋಜನೆಯ ಕಾರ್ಯದರ್ಶಿ ಶ್ರೀನಿವಾಸ್ ರಾವ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.