ADVERTISEMENT

ಗ್ರಾಮ ಪಂಚಾಯಿತಿಗಳಿಗೆ ಸೋಲಾರ್‌: ಸಚಿವ ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 10:53 IST
Last Updated 12 ಜನವರಿ 2021, 10:53 IST
ಕೆ.ಎಸ್.ಈಶ್ವರಪ್ಪ, ಸಚಿವ
ಕೆ.ಎಸ್.ಈಶ್ವರಪ್ಪ, ಸಚಿವ   

ಉಡುಪಿ: ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಸೋಲಾರ್ ಅಳವಡಿಸಲು ₹ 300 ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

ಮಂಗಳವಾರ ಜನಸೇವಕ್‌ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಂದಿದ್ದ ವೇಳೆ ಮಣಿಪಾಲ್ ಇನ್ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ‘ಸೋಲಾರ್ ಅಳವಡಿಕೆಗೆ ಟೆಂಡರ್ ಮುಗಿದಿದ್ದು, 9 ಕಂಪನಿಗಳನ್ನು ಜಿಲ್ಲಾವಾರು ಆಯ್ಕೆ ಮಾಡಲಾಗಿದೆ. ಟೆಂಡರ್ ಪಡೆದ ಕಂಪನಿಗಳಿಗೆ 5 ವರ್ಷಗಳ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ.ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪೂರ್ಣಗೊಳ್ಳುತ್ತಿದ್ದಂತೆ ಸೋಲಾರ್ ಉಪಕರಣಗಳ ಅಳವಡಿಕೆ ಆರಂಭವಾಗಲಿದೆ’ ಎಂದು ಎಂದರು.

ಗ್ರಾಮ ಪಂಚಾಯಿತಿಗಳಲ್ಲಿ ಸೋಲಾರ್ ಅಳವಡಿಕೆಯಾದರೆ ವಿದ್ಯುತ್ ಬಿಲ್ ಬಾಕಿ ಸಮಸ್ಯೆ ನಿವಾರಣೆಯಾಗಲಿದೆ. ಪಂಚಾಯಿತಿಗಳು ಉತ್ಪಾದಿಸುವ ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್‌ಗಳಿಗೆ ಮಾರಾಟ ಮಾಡಬಹುದು. ಸಾರ್ವಜನಿಕರಿಗೆ ಸರ್ಕಾರದ ಸೇವೆಗಳು ತ್ವರಿತವಾಗಿ ಸಿಗಲಿವೆ ಎಂದು ತಿಳಿಸಿದ ಈಶ್ವರಪ್ಪ, ಪಂಚಾಯಿತಿ ಸದಸ್ಯರ ಗೌರವಧನವನ್ನು ₹ 1 ಸಾವಿರದಿಂದ ₹ 2 ಸಾವಿರಕ್ಕೆ ಹೆಚ್ಚಿಸಲು ಮುಂದಿನ ಬಜೆಟ್‌ನಲ್ಲಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ADVERTISEMENT

ಕಾಂಗ್ರೆಸ್‌ಗೆ ಗೋಶಾಪ:ಹಿಂದೆ, ಸದನದಲ್ಲಿ ಗೋಕಳ್ಳರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದಾಗ ಕೋಮುವಾದಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಗೋಶಾಪ ತಟ್ಟಿದ ಪರಿಣಾಮ ಚಾಮುಂಡೇಶ್ವರಿ ಕ್ಷೇತ್ರದಿಂದ ಸೋತರು. ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡರು. ಕಾಂಗ್ರೆಸ್‌ಗೂ ಗೋಶಾಪ ತಟ್ಟಿರುವುದರಿಂದ ಎಲ್ಲ ಸ್ತರಗಳಲ್ಲಿ ಅಧಿಕಾರ ಕಳೆದುಕೊಂಡಿದೆ ಎಂದು ಈಶ್ವರಪ್ಪ ಹೇಳಿದರು.

‘ಗೋವುಗಳ ವಿರುದ್ಧ ಹಗುರವಾಗಿ ಮಾತನಾಡಿದರೆ, ಪಾಕಿಸ್ತಾನ ಜಿಂದಾಬಾದ್‌ ಎಂದು ಕೂಗಿದವರ ವಿರುದ್ಧ ಮಾತನಾಡಿದರೆ ಮುಸ್ಲಿಮರು ಮತ ಹಾಕುವುದಿಲ್ಲ ಎಂಬ ಭ್ರಮೆಯಲ್ಲಿ ಕಾಂಗ್ರೆಸ್‌ ಇದೆ. ದೇಶದ್ರೋಹಿ ಘೋಷಣೆ ಕೂಗಿದವರ ವಿರುದ್ಧ ಕಾಂಗ್ರೆಸ್‌ ಮೌನವಾಗಿದ್ದರೂ ರಾಜ್ಯ ಸರ್ಕಾರ ದೇಶವಿರೋಧಿಗಳ ಸೊಕ್ಕು ಮುರಿಯಲಿದೆ’ ಎಂದು ಈಶ್ವರಪ್ಪ ಹೇಳಿದರು.‌

ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲಿ:ಸಂಪುಟ ವಿಸ್ತರಣೆ ಬಳಿಕ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಳ್ಳಲಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ಬಾಲಿಶ. ಮೊದಲು ಅವರು ವಿರೋಧ ಪಕ್ಷದ ಕುರ್ಚಿ ಉಳಿಸಿಕೊಳ್ಳಲಿ. ಡಿ.ಕೆ.ಶಿವಕುಮಾರ್ ಸ್ಥಾನ ಕಿತ್ತುಕೊಳ್ಳಲು ಕಾಯುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ಹಗಲು ಗನಸು ಕಾಣುತ್ತಿದ್ದಾರೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.