ಪ್ರಜಾವಾಣಿ ವಾರ್ತೆ
ಉಡುಪಿ: ಹೆಬ್ರಿ ತಾಲ್ಲೂಕಿನ ಪೀತುಬೈಲ್ ಬಳಿ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ವಿಕ್ರಂ ಗೌಡನ ಹುಟ್ಟೂರು ಕೂಡ್ಲು ಮೂಲ ಸೌಕರ್ಯಗಳಿಲ್ಲದೆ ಇನ್ನೂ ಕುಗ್ರಾಮವಾಗಿಯೇ ಉಳಿದಿದೆ.
ದಟ್ಟಾರಣ್ಯದೊಳಗಿನ ಕೊರಕಲು ರಸ್ತೆಯಲ್ಲಿ ಸಾಗಿಯೇ ಅಲ್ಲಿನ ಜನರು ಅಗತ್ಯಗಳಿಗೆ ದೂರದ ಹೆಬ್ರಿಗೆ ಬರಬೇಕು.
ಅಪಾಯಕಾರಿ ರಸ್ತೆಯಲ್ಲಿ ನಿತ್ಯ ಸುಮಾರು 10 ಕಿ.ಮೀ. ದೂರದಲ್ಲಿರುವ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಾಡ್ಪಾಲು ಗ್ರಾಮ ಪಂಚಾಯಿತಿಯ ಕೂಡ್ಲುವಿನ ನಿವಾಸಿಗಳದ್ದು.
ಇಲ್ಲಿನ ಜನರು ಕೃಷಿಯನ್ನೇ ಆಧರಿಸಿ ಜೀವನ ಸಾಗಿಸುವವರು. ಇದೇ ಪ್ರದೇಶದಲ್ಲಿ ಕೂಡ್ಲು ತೀರ್ಥ ಜಲಪಾತವಿದ್ದು, ಅಲ್ಲಿಗೆ ಮಳೆಗಾಲದಲ್ಲಿ ಪ್ರವಾಸಿಗರು ಬರುತ್ತಾರೆ. ಆದರೆ ಜಲಪಾತದ ಬಳಿ ತಲುಪಬೇಕಾದರೆ ಅರಣ್ಯದ ದಾರಿ ಸವೆಸಬೇಕು.
ವಿಕ್ರಂ ಗೌಡನ ಮನೆಗೆ ತಲುಪಲು ತೊರೆಯೊಂದರ ಸೇತುವೆ ದಾಟಿ ಹೋಗಬೇಕು. ವರ್ಷವಿಡೀ ಈ ತೊರೆಯ ನೀರೆ ಇಲ್ಲಿನ ಜನರ ಕೃಷಿಗೆ ಆಸರೆಯಾಗಿದೆ. ಮಳೆಗಾಲದಲ್ಲಿ ಈ ತೊರೆಯು ಉಕ್ಕಿ ಹರಿಯುತ್ತದೆ.
‘ನಾವು ಕೃಷಿಯನ್ನೇ ನಂಬಿ ಬದುಕುವವರು. ವಿದ್ಯುತ್ ಸಂಪರ್ಕ ಬಿಟ್ಟರೆ ಬೇರೆ ಯಾವ ಸೌಲಭ್ಯಗಳೂ ನಮಗೆ ಸಿಕ್ಕಿಲ್ಲ’ ಎನ್ನುತ್ತಾರೆ ಕೂಡ್ಲು ನಿವಾಸಿ ಸಾಧು ಶೆಟ್ಟಿ.
‘ಮಕ್ಕಳನ್ನು ಶಾಲೆಗೆ ಕಳುಹಿಸುವುದೇ ಇಲ್ಲಿ ಸವಾಲಾಗಿದೆ. ಹಿಂದೆ ಕೂಡ್ಲುವಿನಿಂದ ಏಳು ಕಿ.ಮೀ ದೂರದ ಮೇಗದ್ದೆಯಲ್ಲಿ ಪ್ರಾಥಮಿಕ ಶಾಲೆ ಇತ್ತು. ಈಗ ಅದನ್ನು ಮುಚ್ಚಲಾಗಿದೆ. ಆ ಕಾರಣಕ್ಕೆ ಪ್ರತಿ ದಿನ 10 ಕಿ.ಮೀ. ದೂರದಲ್ಲಿರುವ ನೆಲ್ಲಿಕಟ್ಟೆ ಎಂಬಲ್ಲಿನ ಶಾಲೆಗೆ ಮಕ್ಕಳನ್ನು ಕರೆದೊಯ್ಯಬೇಕಾಗುತ್ತದೆ. ಹೈಸ್ಕೂಲ್ ಶಿಕ್ಷಣಕ್ಕೆ ಮಕ್ಕಳನ್ನು 22 ಕಿ.ಮೀ. ದೂರದ ಹೆಬ್ರಿಗೆ ಕಳುಹಿಸಬೇಕು’ ಎನ್ನುತ್ತಾರೆ ಸ್ಥಳೀಯ ನಿವಾಸಿ ಸುಧಾಕರ ಗೌಡ ನಾಡ್ಪಾಲ್.
ಮಳೆಗಾಲದಲ್ಲಿ ಇಲ್ಲಿನ ರಸ್ತೆಗಳ ಪರಿಸ್ಥಿತಿ ತೀರಾ ಹದಗೆಟ್ಟು ವಾಹನ ಸಂಚಾರ ದುಸ್ತರವಾಗುತ್ತದೆ. ಕೆಲವೆಡೆ ಕಾಡಾನೆಗಳ ಹಾವಳಿ ಇರುವುದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯವಾಗುತ್ತದೆ ಎಂದೂ ಅವರು ಅಳಲು ತೋಡಿಕೊಂಡರು.
ಕೂಡ್ಲುವಿಗೆ ತೆರಳುವ ದಾರಿಯಲ್ಲಿ ಬರುವ ಸೇತುವೆಗಳು ಹಳೆಯದಾಗಿದ್ದು, ಶಿಥಿಲಗೊಂಡಿವೆ. ರಸ್ತೆ ಕೂಡ ದುರಸ್ತಿ ಕಾಣದೆ ಹಲವು ವರ್ಷಗಳೇ ಕಳೆದಿವೆ ಎಂದರು.
ಕಾಡಿನೊಳಗಿನ ಗ್ರಾಮ ಪೀತುಬೈಲ್
ನಕ್ಸಲ್ ನಿಗ್ರಹ ಪಡೆಯು ಎನ್‌ಕೌಂಟರ್ ನಡೆಸಿರುವ ಕಬ್ಬಿನಾಲೆಯ ಪೀತುಬೈಲ್ ದಟ್ಟಾರಣ್ಯದೊಳಗಿನ ಗ್ರಾಮವಾಗಿದೆ. ಮೂರು ಕುಟುಂಬಗಳಷ್ಟೇ ಇಲ್ಲಿ ವಾಸವಾಗಿವೆ. ಕಲ್ಲು ಮಣ್ಣಿನ ರಸ್ತೆಯಲ್ಲಿ ಜೀಪ್ ಬಿಟ್ಟರೆ ಬೇರೆ ವಾಹನಗಳು ಹರಸಾಹಸಪಟ್ಟು ಸಾಗಬೇಕಾಗಿದೆ. ಈ ಕಾರಣಕ್ಕೆ ಇಲ್ಲಿನ ಕೆಲವರು ಸುಮಾರು ಏಳು ಕಿ.ಮೀ.ಗಳಷ್ಟು ದೂರ ನಡೆದೇ ಕೆಲಸಕ್ಕೆ ಹೋಗಬೇಕು. ವಿದ್ಯುತ್ ಸಂಪರ್ಕವಿಲ್ಲದ ಕಾರಣ ಪೀತುಬೈಲ್ ಗ್ರಾಮಸ್ಥರು ಸೋಲಾರ್ ಆಶ್ರಯಿಸಿಕೊಂಡಿದ್ದಾರೆ. ರಾತ್ರಿ ವೇಳೆ ದಟ್ಟಾರಣ್ಯದ ಈ ರಸ್ತೆಯಲ್ಲಿ ಸಾಗುವುದು ಅಪಾಯ ಆಹ್ವಾನಿಸಿದಂತೆ. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಕೂಡ ಕಷ್ಟವಾಗುತ್ತಿದೆ ಎಂಬುದು ಇಲ್ಲಿನ ನಿವಾಸಿಗಳ ಅಳಲು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.