ADVERTISEMENT

ಕುಂದಾಪುರ | 'ಸೈಬರ್, ಆನ್‌ಲೈನ್‌ ವಂಚನೆ: ಎಚ್ಚರ ವಹಿಸಿ'

ಗಂಗೊಳ್ಳಿ ಸೈಬರ್ ಅಪರಾಧ ಮಾಹಿತಿ ಕಾರ್ಯಗಾರದಲ್ಲಿ ಪಿಎಸ್‌ಐ ಹರೀಶ್ ಆರ್. ನಾಯಕ್ ಕರೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 13:28 IST
Last Updated 19 ಅಕ್ಟೋಬರ್ 2024, 13:28 IST
ಕುಂದಾಪುರ ಸಮೀಪದ ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ಚರ್ಚ್‌ನಲ್ಲಿ ನಡೆದ ಸೈಬರ್ ಕ್ರೈ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಹರೀಶ್ ಆರ್ ನಾಯಕ್ ಮಾತನಾಡಿದರು.
ಕುಂದಾಪುರ ಸಮೀಪದ ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ಚರ್ಚ್‌ನಲ್ಲಿ ನಡೆದ ಸೈಬರ್ ಕ್ರೈ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಹರೀಶ್ ಆರ್ ನಾಯಕ್ ಮಾತನಾಡಿದರು.   

ಕುಂದಾಪುರ: ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು, ವೃತ್ತಿಪರರೇ ಹೆಚ್ಚಾಗಿ ವಂಚನೆಗೆ ಒಳಗಾಗುತ್ತಿದ್ದು, ಸೈಬರ್ ಅಥವಾ ಆನ್‌ಲೈನ್‌ನಲ್ಲಿ ವ್ಯವಹರಿಸುವಾಗ ಹೆಚ್ಚು ಎಚ್ಚರದಿಂದ ಇರಬೇಕು ಎಂದು ಗಂಗೊಳ್ಳಿ ಠಾಣೆಯ ಉಪ ನಿರೀಕ್ಷಕ ಹರೀಶ್ ಆರ್. ನಾಯಕ್ ಸಲಹೆ ನೀಡಿದರು.

ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ಚರ್ಚ್‌ನ ಕಥೊಲಿಕ್ ಸಭಾ ಘಟಕ, ಮಾಧ್ಯಮ ಆಯೋಗ ಜಂಟಿಯಾಗಿ ಆಯೋಜಿಸಿದ್ದ ಸೈಬರ್ ಕ್ರೈಂ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ಸೈಬರ್ ಅಥವಾ ಆನ್‌ಲೈನ್ ಅಪರಾಧ ನಡೆದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರೆ ವಂಚನೆಗೆ ಒಳಗಾಗಿ ಕಳೆದುಕೊಂಡ ಹಣ ವಾಪಾಸ್ ಪಡೆಯಬಹುದು. ವಂಚನೆಗೆ ಒಳಗಾಗಿರುವುದು ಗಮನಕ್ಕೆ ಬಂದ ಕೂಡಲೇ 1930 ಸಹಾಯವಾಣಿಗೆ ಕರೆ ಮಾಡಬಹುದು ಅಥವಾ ಎನ್‌ಸಿಆರ್‌ಪಿ ಪೋರ್ಟಲ್ ಮೂಲಕ ದೂರು ದಾಖಲಿಸಬಹುದು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ವಿವಿಧ ತಾಂತ್ರಿಕ ಶೈಲಿಯ ಸೈಬರ್ ಅಪರಾಧಗಳು ನಡೆಯುತ್ತಿದ್ದು, ಹ್ಯಾಕರ್ಸ್ ಮೂಲಕ ಖಾಸಗಿ ಮಾಹಿತಿ ಕದಿಯಲಾಗುತ್ತದೆ. ಬ್ಯಾಂಕ್‌ನವರೆಂದು ಕರೆ ಮಾಡಿ ನಿಮ್ಮ ಬ್ಯಾಂಕ್ ಖಾತೆಯ ಒಟಿಪಿ ನಂಬರ್‌ ಕೇಳಿದರೆ ನೀಡಬೇಡಿ. ಸುಲಭದಲ್ಲಿ ಹಣ ಮಾಡುವ ಧಾವಂತದಲ್ಲಿ ಹಣ ಕಳೆದುಕೊಳ್ಳಬೇಡಿ. ಆ್ಯಪ್ ಮೂಲಕ ಸಾಲ ತೆಗೆಯಬೇಡಿ. ವಾಟ್ಸ್‌ಆ್ಯಪ್‌ ಸ್ಟೇಟಸ್, ಫೇಸ್‌ಬುಕ್, ಇನ್‌ಸ್ಟಾಗ್ರಾಂಗೆ ಫೋಟೊ ಹಾಕುವಾಗ ಜಾಗರೂಕರಾಗಿರಬೇಕು. ಕಸ್ಟಮ್ಸ್, ಆದಾಯ ತೆರಿಗೆ, ಪೊಲೀಸ್ ಅಥವಾ ಸಿಬಿಐ ಅಧಿಕಾರಿಗಳು ಫೋನ್ ಅಥವಾ ಇ–ಮೇಲ್ ಮೂಲಕ ಬ್ಯಾಂಕ್ ಖಾತೆಯ ಮಾಹಿತಿ ಕೇಳುವುದಿಲ್ಲ ಎಂದು ಅವರು ವಿವರಿಸಿದರು.

ADVERTISEMENT

ಎಂ.ಸಿ ಬ್ಯಾಂಕ್ ಬ್ರಹ್ಮಾವರ ಶಾಖೆ ಪ್ರಬಂಧಕ ಒವಿನ್ ರೆಬೆಲ್ಲೊ ಮಾತನಾಡಿ, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಬಳಸುವಾಗ ಎಚ್ಚರಿಕೆ ವಹಿಸಬೇಕು. ಸುಳ್ಳು ಹೇಳಿ ವೃದ್ಧರನ್ನು, ಹಿರಿಯ ನಾಗರಿಕರನ್ನು ವಂಚಿಸುವುದು ಹೆಚ್ಚಾಗುತ್ತಿದ್ದು, ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಅನಗತ್ಯವಾಗಿ ಡಿಜಿಟಲ್ ಪೇಮೆಂಟ್ ಮಾಡುವುದಕ್ಕೆ ಕಡಿವಾಣ ಹಾಕಬೇಕು. ನಗದು ಪಾವತಿ ಮಾಡುವುದರಿಂದ ವಂಚನೆಗೆ ಒಳಗಾಗುವುದನ್ನು ತಪ್ಪಿಸಬಹುದು ಎಂದು ತಿಳಿಸಿದರು. ಸೈಬರ್ ಕ್ರೈಂ, ಡಿಜಿಟಲ್ ಪಾವತಿ ಕುರಿತು ಮಾಹಿತಿ ನೀಡಿದರು.

ಕೊಸೆಸಾಂವ್ ಅಮ್ಮನವರ ಚರ್ಚ್‌ನ ಧರ್ಮಗುರು ಥೋಮಸ್ ರೋಶನ್ ಡಿಸೋಜ, ಕಥೊಲಿಕ್ ಸಭಾ ಗಂಗೊಳ್ಳಿ ಘಟಕದ ಅಧ್ಯಕ್ಷ ಎಡ್ವರ್ಡ್ ಫೆರ್ನಾಂಡಿಸ್, ಕಥೊಲಿಕ್ ಸಭಾ ಉಡುಪಿ ಪ್ರದೇಶ ಮಾಜಿ ಅಧ್ಯಕ್ಷ ಅಲ್‌ರಾಯ್ ಕಿರಣ್ ಕ್ರಾಸ್ತಾ ಇದ್ದರು. ಎಡ್ವರ್ಡ್ ಫೆರ್ನಾಂಡಿಸ್ ಸ್ವಾಗತಿಸಿದರು. ಕಿರಣ್ ಕ್ರಾಸ್ತಾ ವಂದಿಸಿದರು. ರೆನಿಟಾ ಬಾರ್ನೆಸ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.