ADVERTISEMENT

ಕುಂದಾಪುರ | 'ಯುಜಿಡಿ ಸಮಸ್ಯೆ ಪರಿಹರಿಸಿ'

ಕುಂದಾಪುರ ಪುರಸಭೆ ವಿಶೇಷ ಸಭೆಯಲ್ಲಿ ಸದಸ್ಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 5:15 IST
Last Updated 26 ನವೆಂಬರ್ 2024, 5:15 IST
ಕುಂದಾಪುರ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಭವನದಲ್ಲಿ ಸೋಮವಾರ ಪುರಸಭೆಯ ವಿಶೇಷ ಸಭೆ ನಡೆಯಿತು
ಕುಂದಾಪುರ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಭವನದಲ್ಲಿ ಸೋಮವಾರ ಪುರಸಭೆಯ ವಿಶೇಷ ಸಭೆ ನಡೆಯಿತು   

ಕುಂದಾಪುರ: ಸುಂದರ ಕುಂದಾಪುರದ ಕನಸು ಕಂಡಿದ್ದ ಖಾರ್ವಿಕೇರಿ ನಿವಾಸಿಗಳು 30 ವರ್ಷಗಳಿಂದ ನಗರದ ಕೊಳಚೆಯನ್ನೇ ಉಣ್ಣುತ್ತಿದ್ದೇವೆ. ಈ ರೀತಿಯ ನಿರ್ಲಕ್ಷ್ಯ ಸರಿಯಲ್ಲ. ಒಳಚರಂಡಿ ಯೋಜನೆ ಜಾರಿ ಮಾಡಿ, ನಂತರ ರಿಂಗ್‌ರೋಡ್ ಕಾಮಗಾರಿ ಮಾಡಿ ವಿಪಕ್ಷ ನಾಯಕ ಚಂದ್ರಶೇಖರ್ ಖಾರ್ವಿ ಎಂದು ಆಗ್ರಹಿಸಿದರು.

ಇಲ್ಲಿನ ಪುರಸಭೆಯಲ್ಲಿ ಸೋಮವಾರ ನಡೆದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.

ಯುಜಿಡಿ ಕುರಿತು ಉತ್ತರಿಸಿದ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಜಯ್ ಹಾಗೂ ಎಂಜಿನಿಯರ್ ರಕ್ಷಿತ್, ಖಾರ್ವಿಕೇರಿಯ ರಿಂಗ್‌ರೋಡ್ ಮೂಲಕ ಹಳೆ ಮಾದರಿಯ ಯುಜಿಡಿ ಸಾಧ್ಯವಿಲ್ಲ. ಭೌಗೋಳಿಕ, ತಾಂತ್ರಿಕ ಸಮಸ್ಯೆ ಇರುವ ಕಾರಣ ಕಾಮಗಾರಿ ನಡೆಸಿದರೆ ತೊಂದರೆ ಎದುರಾಗಬಹುದು. ಹಾಗಾಗಿ ಸ್ವಚ್ಛ ಭಾರತ್ ಮಿಶನ್‌ ಮೂಲಕ ಕೇಂದ್ರದಿಂದ ಬಂದಿರುವ ₹7.04 ಕೋಟಿ ಅನುದಾನದಲ್ಲಿ ಹೊಸ ಮಾದರಿಯ ತ್ಯಾಜ್ಯ ವಿಲೇವಾರಿ ಪದ್ಧತಿ ಅನುಷ್ಠಾನ ಮಾಡಲಾಗುವುದು ಎಂದರು.

ADVERTISEMENT

ಖಾರ್ವಿಕೇರಿ ಸಮಸ್ಯೆ ಬಗೆಹರಿಸಿ ಎಂದು ಗಿರೀಶ್, ಪ್ರಭಾಕರ್, ಶ್ರೀಧರ್ ಶೇರುಗಾರ್, ಸಂದೀಪ್ ಖಾರ್ವಿ ಆಗ್ರಹಿಸಿದಾಗ, ಸ್ಪಂದಿಸಿದ ಅಧ್ಯಕ್ಷ ಮೋಹನದಾಸ ಶೆಣೈ, ಹೊಸ ಪದ್ಧತಿ ಮೂಲಕವಾದರೂ ಖಾರ್ವಿಕೇರಿಯ ತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆ ಮಾಡಿ ಎಂದು ಸೂಚನೆ ನೀಡಿದರು.

ಮದ್ದುಗುಡ್ಡೆಯ ಯುಜಿಡಿ ಸಮಸ್ಯೆ ಬಗೆಹರಿಸಿ, ರಿಂಗ್‌ರೋಡ್ ಕಾಮಗಾರಿಯನ್ನು ಗುಣಮಟ್ಟದಲ್ಲಿ ನಿರ್ವಹಿಸಿ ಎಂದು ರಾಘವೇಂದ್ರ ಖಾರ್ವಿ ಹೇಳಿದರು. ‘ಕೋಡಿ ಭಾಗದ 4 ವಾರ್ಡ್‌ಗಳಿಗೆ ನೆರವಾಗುವಂತೆ ರಿಂಗ್‌ರೋಡ್ ಮಾಡಿ ಕೊಡಿ. ಇಲ್ಲಿನ ಕೃಷಿಭೂಮಿಗೆ ಉಪ್ಪುನೀರು ನುಗ್ಗಿ ಕೃಷಿ ಹಾಳಾಗುತ್ತಿದೆ’ ಎಂದು ಲಕ್ಷ್ಮಿಬಾಯಿ ಹಾಗೂ ಅಶ್ಪಕ್ ಕೋಡಿ ಹೇಳಿದರು.

ನೆಹರೂ ಮೈದಾನ ಹಸ್ತಾಂತರ ಬಗ್ಗೆ ಮಾತನಾಡಿದ ಗಿರೀಶ್ ಜಿ.ಕೆ ಅವರು, 1985ರಲ್ಲಿ ಗೆಜೆಟ್ ನೋಟಿಫಿಕೇಷನ್ ಆಗಿದ್ದರೂ, ಈವರೆಗೂ ಮೈದಾನ ಪುರಸಭೆಯ ಅಧೀನಕ್ಕೆ ಬಂದಿಲ್ಲ. ಕಂದಾಯ ಇಲಾಖೆ ಇದೇರೀತಿ ನೆಪಗಳನ್ನು ಮುಂದುವರಿಸಿದರೆ, ನ್ಯಾಯಾಲಯಕ್ಕೆ ಹೋಗುವುದಾಗಿ ಹೇಳಿದರು.

ಯುವಜನ ಸೇವಾ ಇಲಾಖೆ ಕಟ್ಟಡದ ಕುರಿತು ಸಂತೋಷ್ ಶೆಟ್ಟಿ ಆಕ್ಷೇಪ ಎತ್ತಿದರು. ಆರ್‌ಟಿಸಿಯಲ್ಲಿ ಕ್ರಿಕೆಟ್ ಮೈದಾನ ಎಂದು ದಾಖಲಿಸಿ ಹಳೆ ಆರ್‌ಟಿಸಿ ದೊರೆಯದಂತೆ ಮಾಡಲಾಗಿದೆ ಎಂದು ಗಿರೀಶ್ ಆರೋಪಿಸಿದರು. ತಹಶೀಲ್ದಾರ್ ಮಲ್ಲಿಕಾರ್ಜುನ, ಈ ಬಗ್ಗೆ ಇಲಾಖಾಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದ್ದನ್ನು ಕಡತದಲ್ಲಿ ದಾಖಲಿಸುವಂತೆ ಶ್ರೀಧರ್ ಶೇರುಗಾರ್ ಆಗ್ರಹಿಸಿದರು. ಮೈದಾನ ಹಸ್ತಾಂತರ ಮಾಡಲು ಸರ್ವಸದಸ್ಯರ ಒಮ್ಮತ ಇದೆ ಎಂದು ದೇವಕಿ ಸಣ್ಣಯ್ಯ ಹೇಳಿದರು.

ನಗರದ ಪಾರ್ಕಿಂಗ್ ಸಮಸ್ಯೆ ಕುರಿತು ಪ್ರಾಸ್ತಾಪಿಸಿದ ಗಿರೀಶ್ ಜಿ.ಕೆ ಅವರು, ಪಾರ್ಕಿಂಗ್‌ ಮಾಡಲು ಜಾಗ ಗುರುತಿಸಿ, ನಕ್ಷೆ ಮಾಡಿ ಪೊಲೀಸ್ ಇಲಾಖೆ, ಕಂದಾಯ ಇಲಾಖೆಗೆ ನೀಡಿದರೂ ಈವರೆಗೂ ಕ್ರಮ ಕೈಗೊಳ್ಳಲಿಲ್ಲ ಎಂದರು.

ಸಂಚಾರ ಠಾಣೆ ಎಎಸ್‌ಐ ನಾಗರಾಜ ಕುಲಾಲ್, ‘ಈ ಬಗ್ಗೆ ಮಾಹಿತಿ ಇಲ್ಲ’ ಎಂದಾಗ,‌ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಡಿವೈಎಸ್‌ಪಿ ಜೊತೆ ಸಭೆ ನಡೆಸುವುದಾಗಿ ಅಧ್ಯಕ್ಷರು ತಿಳಿಸಿದರು. ಉಪಾಧ್ಯಕ್ಷೆ ವನಿತಾ ಬಿಲ್ಲವ, ಮುಖ್ಯಾಧಿಕಾರಿ ಆನಂದ ಜೆ ಇದ್ದರು.

ಹಬ್ಬಗಳ ಆಚರಣೆಗೆ ದೇಣಿಗೆ ಬಿಲ್’ ಹಂಪ್ಸ್ ತೆರವು ವಾಹನಗಳ ವೇಗಕ್ಕೆ ಕಡಿವಾಣ ಟ್ರಾಫಿಕ್ ಸಿಗ್ನಲ್ ಅಳವಡಿಕೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯಿತು. ಕಂದಾಯ ಇಲಾಖೆಯ ಕೆಲ ಅಧಕಾರಿಗಳು ಪೌರ ಕಾರ್ಮಿಕರನ್ನು ಕೀಳಾಗಿ ಕಾಣುತ್ತಾರೆ. ರಾಷ್ಟ್ರೀಯ ಹಬ್ಬಗಳ ಆಚರಣೆ ದೇಣಿಗೆಗೆ ಬಿಲ್ ಕಳುಹಿಸುತ್ತಾರೆ. ಆದರೆ ಜನಪ್ರತಿನಿಧಿಗಳಿಗೆ ಆಹ್ವಾನವೇ ಇರುವುದಿಲ್ಲ ಎಂದು ಅಧ್ಯಕ್ಷ ಮೋಹನದಾಸ ಶೆಣೈ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.