ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಡಿಸೆಂಬರ್ 2ರಿಂದ 5ರ ತನಕ ನಡೆಯಲಿರುವ ಶೈಕ್ಷಣಿಕ ಮಾಹಿತಿ, ವಸ್ತು ಪ್ರದರ್ಶನದ ಬಗ್ಗೆ ಇಲ್ಲಿನ ತಾಲ್ಲೂಕು ಪಂಚಾಯಿತಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಶಾಸಕ ಕಿರಣ್ ಮಾತನಾಡಿ, ಕುಂದಾಪುರ– ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ, ಶೈಕ್ಷಣಿಕ ಮಾಹಿತಿ, ವಸ್ತು ಪ್ರದರ್ಶನ, ವೃತ್ತಿ ಮಾರ್ಗದರ್ಶನ ನೀಡಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳಿಗೆ ಬಹಳಷ್ಟು ವಿಷಯಗಳ ಬಗ್ಗೆ ಮಾಹಿತಿ ಕೊರತೆ ಇದ್ದು, ಅವರ ಭವಿಷ್ಯದ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಎಲ್ಲರ ಸಹಕರಿಸಬೇಕು ಎಂದರು.
ಭಂಡಾರ್ಕಾರ್ಸ್ ಕಾಲೇಜಿನ ಸಸ್ಯ ವಿಜ್ಞಾನ, ಪ್ರಾಣಿ ವಿಜ್ಞಾನ, ರಸಾಯನ ವಿಜ್ಞಾನ, ಕಂಪ್ಯೂಟರ್ ವಿಜ್ಞಾನ, ಪತ್ರಿಕೋದ್ಯಮ, ಇತಿಹಾಸ, ವಾಣಿಜ್ಯ ವ್ಯವಹಾರ, ಜನಪದ ಕಲೆ, ಕುಂಚ ಕಲೆ, ಕ್ರೀಡೆ, ಗ್ರಂಥಾಲಯ, ಸಮುದಾಯ ಬಾನುಲಿ ವಿಷಯಗಳ ಮಾಹಿತಿ ಮತ್ತು ವಸ್ತು ಪ್ರದರ್ಶನ ನಡೆಸಲು ನಿರ್ಧರಿಸಲಾಗಿದೆ ಎಂದು ಕಾಲೇಜಿನ ವಿಶ್ವಸ್ಥ ಮಂಡಳಿ ಸದಸ್ಯರಾದ ರಾಜೇಂದ್ರ ತೋಳಾರ್, ಯು.ಎಸ್.ಶೆಣೈ ಹೇಳಿದರು.
ತಹಶೀಲ್ದಾರ್ ಎಚ್.ಎಸ್. ಶೋಭಾಲಕ್ಷ್ಮಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ.ರವಿಕುಮಾರ್, ಭಂಡಾರ್ಕಾರ್ಸ್ ಕಾಲೇಜು ಪ್ರಾಂಶುಪಾಲ ಶುಭಕರಾಚಾರಿ, ಆರೋಗ್ಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಸಂಗೋಪನೆ ಇಲಾಖೆ, ಅರಣ್ಯ ಇಲಾಖೆ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಕಂದಾಯ ಇಲಾಖೆಗಳ ಅಧಿಕಾರಿಗಳು ಇದ್ದರು. ಕಾಲೇಜು ವ್ಯವಸ್ಥಾಪಕ ಗೋಪಾಲ ನಾಯ್ಕ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.