ADVERTISEMENT

ವಿದ್ಯಾರ್ಥಿಗಳ ಆಸ್ಪತ್ರೆ ಭೇಟಿ: ರೋಗಿಗಳ ಆರೈಕೆ

ಕಂಡ್ಲೂರಿನ ಝಿಯಾ ಪಬ್ಲಿಕ್ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ವಿನೂತನ ಕಾರ್ಯಕ್ರಮ

ರಾಜೇಶ್‌ ಕೆ.ಸಿ
Published 3 ನವೆಂಬರ್ 2023, 4:35 IST
Last Updated 3 ನವೆಂಬರ್ 2023, 4:35 IST
ಕುಂದಾಪುರ ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆಗೆ ಗುರುವಾರ ಕಂಡ್ಲೂರಿನ ಝಿಯಾ ಪಬ್ಲಿಕ್ ಇಂಗ್ಲೀಷ್ ಮೀಡಿಯಂ ಸ್ಕೂಲ್‌ ವಿದ್ಯಾರ್ಥಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಕುಂದಾಪುರ ಉಪ ವಿಭಾಗೀಯ ಸರ್ಕಾರಿ ಆಸ್ಪತ್ರೆಗೆ ಗುರುವಾರ ಕಂಡ್ಲೂರಿನ ಝಿಯಾ ಪಬ್ಲಿಕ್ ಇಂಗ್ಲೀಷ್ ಮೀಡಿಯಂ ಸ್ಕೂಲ್‌ ವಿದ್ಯಾರ್ಥಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.   

ಕುಂದಾಪುರ: ಇಲ್ಲಿನ ಸರ್ಕಾರಿ ಉಪವಿಭಾಗೀಯ ಆಸ್ಪತ್ರೆಯಲ್ಲಿ ಗುರುವಾರ ಬೆಳಿಗ್ಗೆ ಅಚ್ಚರಿ ಕಾದಿತ್ತು. ಸಮವಸ್ತ್ರ ಧರಿಸಿದ್ದ ವಿದ್ಯಾರ್ಥಿಗಳ ಗುಂಪು ರೋಗಿಗಳಿಗೆ ಬಳಿಗೆ ತೆರಳಿ ಅವರ ಯೋಗಕ್ಷೇಮ ವಿಚಾರಿಸುವ, ಹಣ್ಣು ಹಂಪಲು ನೀಡಿ ಉಪಚರಿಸುತ್ತಿದ್ದ ದೃಶ್ಯಗಳು ಕಂಡು‌ ಬಂದವು.

ಇದಕ್ಕೆಲ್ಲಾ ಕಾರಣವಾಗಿದ್ದು ಕಂಡ್ಲೂರಿನ ಝಿಯಾ ಪಬ್ಲಿಕ್ ಇಂಗ್ಲೀಷ್ ಮೀಡಿಯಂ ಸ್ಕೂಲ್‌ ವಿದ್ಯಾರ್ಥಿಗಳ ಸರ್ಕಾರಿ ಆಸ್ಪತ್ರೆ ಭೇಟಿ ಕಾರ್ಯಕ್ರಮ. ವಿದ್ಯಾರ್ಥಿಗಳಿಗೆ ಸರ್ಕಾರಿ ಆಸ್ಪತ್ರೆ ಹಾಗೂ ಅಲ್ಲಿ ದೊರೆಯುವ ವೈದ್ಯಕೀಯ ಸೇವೆಯ ಅರಿವು ಆಗಬೇಕು ಎನ್ನುವುದಕ್ಕಾಗಿ ಹಮ್ಮಿಕೊಂಡ ವಿನೂತನ ಕಾರ್ಯಕ್ರಮದ ಫಲಶ್ರುತಿ.

ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದ ಜೊತೆಗೆ ಆಸ್ಪತ್ರೆಗೆ ಬಂದಿದ್ದ 100ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿನ ಕಾರ್ಯವೈಖರಿಗಳನ್ನು ವೀಕ್ಷಿಸಿದರು. ರೋಗಿಗಳ ಆರೋಗ್ಯ ವಿಚಾರಣೆ ನಡೆಸಿದರು. ವೈದ್ಯರು ಹಾಗೂ ಶುಶ್ರೂಷಕಿಯರಿಂದ ವೈದ್ಯಕೀಯ ಸೇವೆ ಮಾಹಿತಿ ಪಡೆದುಕೊಂಡರು.

ADVERTISEMENT

ಮುಖ್ಯ ಆಡಳಿತ ಶಸ್ತ್ರಚಿಕಿತ್ಸಕ ಡಾ.ರೊಬರ್ಟ್ ರೆಬೆಲ್ಲೊ ಮಾತನಾಡಿ, ‘ಸರ್ಕಾರಿ ಸೇವೆ ಜೀವನದಲ್ಲಿ ದೊರೆಯುವ ಉತ್ತಮ ಅವಕಾಶ. ಇದರ ಸದುಪಯೋಗ ಪಡಿಸಿಕೊಳ್ಳಬೇಕು. ವೈದ್ಯಕೀಯ ವೃತ್ತಿಯಲ್ಲಿರುವವರು ಹಣ ಹಾಗೂ ಹೆಸರಿನ ಹಿಂದೆ ಹೋಗಬಾರದು. ಸೇವಾ ಮನೋಭಾವ, ಜಾತಿ, ಮತ, ಬೇಧವಿಲ್ಲದ ಸಾಮಾಜಿಕ ಕಳಕಳಿ‌ಗಳು ಶೈಕ್ಷಣಿಕ ಆದ್ಯತೆ ಆಗಬೇಕು. ಸಹಬಾಳ್ವೆ ಮೂಲಕ ಪರಿಪೂರ್ಣ ಸಮಾಜ ನಿರ್ಮಾಣಕ್ಕೆ ಒಂದಾಗುವ ಎಲ್ಲರಲ್ಲಿಯೂ ಸರ್ಕಾರಿ ವೈದ್ಯಕೀಯ ವ್ಯವಸ್ಥೆಯ ಅರಿವಿರಬೇಕು’ ಎಂದರು.

ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್‌ನ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಹುಸೇನ್ ಹೈಕಾಡಿ, ಸದಸ್ಯ ಮನ್ಸೂರ್ ಮರವಂತೆ, ಸಮಾಜ ಸೇವಕ ಝುನೇದ್, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನಾಗೇಶ್, ಶುಶ್ರೂಷಕ ಪ್ರಭಾರ ಅಧೀಕ್ಷಕಿ ಮಂಜುಳಾ, ಶುಶ್ರೂಷಕಾಧಿಕಾರಿ ಶ್ಯಾಮಲಾ, ಆಪ್ತ ಸಮಾಲೋಚಕಿ ವೀಣಾ, ಐಟಿಡಿಪಿ ಸಂಯೋಜಕಿ ಸುಮಲತಾ, ಐಸಿಟಿಸಿ ಆಪ್ತ ಸಮಾಲೋಚಕಿ ನಳಿನಾಕ್ಷಿ, ಝಿಯಾ ಪಬ್ಲಿಕ್ ಇಂಗ್ಲೀಷ್ ಮೀಡಿಯಂ ಸ್ಕೂನ್‌ ಚೇರ್‌ಮನ್ ಉಬೇದುಲ್ಲಾ ನದ್ವಿ, ಟ್ರಸ್ಟಿ ಮೌಲಾನಾ ರಿಝ್ವಾನ ನದ್ವಿ, ಸಹಾಯಕ ಮುಖ್ಯಶಿಕ್ಷಕಿ ಕುಬ್ರಾ ನವಾಝ್, ಸಹಶಿಕ್ಷಕರಾದ ರುಝೈನಾ ಅಂಝುಮ್, ಆಲಿಯಾ, ಅಫಿಫಾ ಮರಿಯಮ್, ಆಯಿಷಾ ಹೀರಾ, ಪ್ರಮೀಳಾ ಎಸ್. ಅರಳಿಕಟ್ಟೆ, ನಾಝನಿನ್, ಕಚೇರಿ ಮುಖ್ಯಸ್ಥೆ ನಝೀಪಾ, ಸಿಬ್ಬಂದಿ ನಿಯಾಝ್ ಇದ್ದರು.

ವಿದ್ಯಾರ್ಥಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯಕೀಯ ಸೇವೆಯ ಬಗ್ಗೆ ಮಾಹಿತಿ ಇದ್ದಾಗ ಸಮಾಜಕ್ಕೂ ಉಪಯೋಗವಾಗುತ್ತದೆ

–ಡಾ.ನಾಗೇಶ್‌, ವೈದ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.