ADVERTISEMENT

ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಿ

ಕುಂದಾಪುರ: ಹೆದ್ದಾರಿ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಸಂಸದ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 6:31 IST
Last Updated 10 ಜುಲೈ 2024, 6:31 IST
ಕುಂದಾಪುರ ನಗರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿನ ರಸ್ತೆಗಳಿಗೆ ಸೋಮವಾರ ಭೇಟಿ ನೀಡಿದ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಸಮಸ್ಯೆಗಳ ಕುರಿತು ವಿಚಾರ-ವಿಮರ್ಶೆ ನಡೆಸಿದರು. ಶಾಸಕ ಎ.ಕಿರಣ್‌ಕುಮಾರ ಕೊಡ್ಗಿ ಇದ್ದರು.
ಕುಂದಾಪುರ ನಗರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿನ ರಸ್ತೆಗಳಿಗೆ ಸೋಮವಾರ ಭೇಟಿ ನೀಡಿದ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಸಮಸ್ಯೆಗಳ ಕುರಿತು ವಿಚಾರ-ವಿಮರ್ಶೆ ನಡೆಸಿದರು. ಶಾಸಕ ಎ.ಕಿರಣ್‌ಕುಮಾರ ಕೊಡ್ಗಿ ಇದ್ದರು.   

ಕುಂದಾಪುರ : ರಾಷ್ಟ್ರೀಯ ಹೆದ್ದಾರಿಯಲ್ಲಿನ ಅವ್ಯವಸ್ಥೆ ಹಾಗೂ ಸಮಸ್ಯೆಗಳ ಕುರಿತು ಅದೆಷ್ಟು ಬಾರಿ ಹೇಳಿದರೂ ಸಂಬಂಧಪಟ್ಟವರು ಪ್ರಾಮಾಣಿಕವಾಗಿ ಸರಿಪಡಿಸುವ ಪ್ರಯತ್ನ ಮಾಡುತ್ತಿಲ್ಲ. ಪರಿಹಾರ ಕಾರ್ಯಗಳಿಗೆ ಕೇಂದ್ರ ಸರ್ಕಾರದಲ್ಲಿ ಯಾವುದೇ ಹಣಕಾಸಿನ ತೊಂದರೆ ಇಲ್ಲ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಸೋಮವಾರ ಹೆದ್ದಾರಿ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

ಜನರಿಗೆ ತೊಂದರೆಯಾಗುವ ಹಾಗೂ ಸುಗಮ ಸಂಚಾರಕ್ಕೆ ತೊಡಕಾಗುವ ಸಮಸ್ಯೆಗಳನ್ನು ಆದ್ಯತೆಯ ನೆಲೆಯಲ್ಲಿ ಪರಿಗಣಿಸಿ ಪರಿಹಾರ ಕಂಡುಕೊಳ್ಳಬೇಕು. ಕುಂದಾಪುರ ಪುರಸಭಾ ವ್ಯಾಪ್ತಿಯ ದೀರ್ಘಾವಧಿಯ ಸಮಸ್ಯೆಗಳು, ಕೋಟ ಹೈಸ್ಕೂಲ್ ಬಳಿ ಮಕ್ಕಳು ದಾಟಲು ಹೆದ್ದಾರಿ ಮೇಲ್ಸೇತುವೆ ನಿರ್ಮಾಣ, ಡಿವೈಡರ್ ಮೂಲಕ ಒಂದು ರಸ್ತೆಯಿಂದ ಇನ್ನೊಂದು ರಸ್ತೆಗೆ ದ್ವಿಚಕ್ರ ವಾಹನಗಳು ಚಲಿಸದಂತೆ ತಡೆಬೇಲಿ ರಚನೆ, ಅಪಘಾತ ತಾಣ ಗುರುತಿಸಿ ಸರಿಯಾದ ಕ್ರಮ ಕೈಗೊಳ್ಳುವುದು, ಸಾಲಿಗ್ರಾಮದಿಂದ ಕೋಟೇಶ್ವರವರೆಗೆ ಬಾಕಿ ಇರುವ ಸರ್ವಿಸ್ ರಸ್ತೆ ನಿರ್ಮಾಣವೂ ಸೇರಿದಂತೆ ಜಿಲ್ಲೆಯಲ್ಲಿನ ಅಗತ್ಯ ಬೇಡಿಕೆಗಳ ಕುರಿತು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಇಲಾಖೆಯೊಂದಿಗೆ ಪತ್ರ ವ್ಯವಹಾರ ಮಾಡುವುದಾಗಿ ತಿಳಿಸಿದರು.

ADVERTISEMENT

ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಸರ್ವಿಸ್ ರಸ್ತೆಗಳ ಬದಿಗಳಲ್ಲಿ ನಿರ್ಮಿಸಲಾಗಿರುವ ಚರಂಡಿಗಳು ಅವೈಜ್ಞಾನಿಕವಾಗಿದ್ದು, ಹೆದ್ದಾರಿಯ ಮೇಲ್ಪದರು ಸಮತಟ್ಟಾಗಿ ಇಲ್ಲದೆ ಇರುವುದರಿಂದ ಸರ್ವಿಸ್ ರಸ್ತೆಗಳಲ್ಲಿ ನೀರು ನಿಲ್ಲುತ್ತದೆ. ಭಾರಿ ಪ್ರಮಾಣದಲ್ಲಿ ನೀರು ನಿಲ್ಲುವುದರಿಂದ ವಾಹನಗಳ ಸಂಚಾರಕ್ಕೆ ತೊಡಕುಂಟಾಗುತ್ತದೆ. ಶಾಸ್ತ್ರಿ ಸರ್ಕಲ್‌ನಿಂದ ಬಸ್ರೂರು ಮೂರುಕೈವರೆಗೆ ಸರ್ವಿಸ್ ರಸ್ತೆಯಲ್ಲಿ ಸಮಸ್ಯೆಗಳಿವೆ. ಬಸ್ರೂರು ಮೂರುಕೈ ಜಂಕ್ಷನ್ ಅಭಿವೃದ್ಧಿಗೊಳಿಸಬೇಕು. ವಾಹನಗಳ ಸುಗಮ ಓಡಾಟಕ್ಕೆ ಅವಕಾಶ ಮಾಡಿಕೊಡಬೇಕು. ತೆಕ್ಕಟ್ಟೆಯಲ್ಲಿ ರಸ್ತೆ ಬದಿ ಕೆಸರಿನ  ಸಮಸ್ಯೆಯನ್ನು ಎರಡೆರಡು ಬಾರಿ ಹೇಳಿದರೂ ಸರಿಪಡಿಸಿಲ್ಲ. ಸಾಸ್ತಾನದಿಂದ ಕುಂದಾಪುರವರೆಗೆ ಮರು ಡಾಮರೀಕರಣವೂ ಆಗಿಲ್ಲ ಎಂದರು.

ಗೋಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಮಾತನಾಡಿ, ಹೆದ್ದಾರಿ ಬಳಿ ಚರಂಡಿ ತೆರೆದ ಕೂಡಲೇ ನಿಲ್ಲುವ ನೀರು ಪರಿಸರದ ಮನೆಗಳಿಗೆ ನುಗ್ಗುತ್ತದೆ. ಈ ಬಗ್ಗೆ ಪಂಚಾಯಿತಿಯಿಂದ 5 ಬಾರಿ ಪತ್ರ ಬರೆದರೂ, ಹೆದ್ದಾರಿ ಇಲಾಖೆಯಿಂದ ಸ್ಪಂದನಗಳಿಲ್ಲ. ಗೋಪಾಡಿ ಸಂಪರ್ಕ ರಸ್ತೆ ನಿರ್ಮಾಣ ಕುರಿತು ಸಾಕಷ್ಟು ಸಾರ್ವಜನಿಕ ಹೋರಾಟ ನಡೆದಿದ್ದರೂ, ಅದು ಇನ್ನೂ ಆಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಹೆದ್ದಾರಿ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ, ಕೋಟೇಶ್ವರದಿಂದ ಕುಂದಾಪುರದ ವರೆಗೆ ಸರ್ವಿಸ್ ರಸ್ತೆಯಲ್ಲಿ ಹಂಪ್ಸ್‌ಗಳ ನಿರ್ಮಾಣ ಮಾಡಲಾಗಿದೆ. ಅಂತರ ಕಡಿಮೆ ಮಾಡಿ ವೇಗ ನಿಯಂತ್ರಕಗಳನ್ನು ಹಾಕಿರುವುದರಿಂದ ಸರಕು ವಾಹನಗಳ ಸುಗಮ ಸಾಗಟಕ್ಕೆ ತೊಂದರೆಯಾಗುತ್ತಿದೆ. ಬಸ್ರೂರು ಮೂರುಕೈ ಬಳಿಯ ಅವೈಜ್ಞಾನಿಕ ಸಮಸ್ಯೆಯಿಂದಾಗಿ ಸಣ್ಣ ಮಳೆಗೂ ನೀರು ನಿಲ್ಲುವ ಪರಿಸ್ಥಿತಿ ಇದೆ ಎಂದರು.

ನವಯುಗ ಸಂಸ್ಥೆಯ ತಿಮ್ಮಯ್ಯ ಮಾತನಾಡಿ, ಅಕ್ಟೋಬರ್ ನಂತರ ಮರುಡಾಮರೀಕರಣ ನಡೆಯುತ್ತದೆ. ಅವಶ್ಯಕತೆ ಇರುವ ಕಡೆ ತಡೆಬೇಲಿ ಹಾಕಲಾಗುವುದು. ಸರ್ವಿಸ್ ರಸ್ತೆಯ ಹಂಪ್‌ಗಳನ್ನು ಡಾಮರೀಕರಣ ವೇಳೆ ಸರಿಪಡಿಸಲಾಗುವುದು. ಡ್ರೈನೇಜ್ ಸರಿಪಡಿಸಿ ಸರ್ವಿಸ್ ರಸ್ತೆಯಲ್ಲಿ ಸಂಚಾರ ಸುಗಮಗೊಳಿಸಲಾಗುವುದು ಎಂದರು.

ಕೆಎಸ್‌ಆರ್‌ಟಿಸಿ ಬಳಿ ಸರ್ವಿಸ್ ರಸ್ತೆ ಇನ್ನೂ ಆಗದ ಕುರಿತು ಶಾಸಕರು ಸಂಸದರ ಗಮನ ಸೆಳೆದರಾದರೂ, ಅದಕ್ಕೆ ಉತ್ತರಿಸಬೇಕಾದ ಐಆರ್‌ಬಿ ಗುತ್ತಿಗೆದಾರ ಸಂಸ್ಥೆಯ ಪ್ರತಿನಿಧಿಗಳು ಮಳೆಯ ಕಾರಣ ನೀಡಿ ಸಭೆಗೆ ಗೈರಾಗಿದ್ದರಿಂದ ಸಮಂಜಸ ಉತ್ತರ ದೊರಕಲಿಲ್ಲ.

ಹೆದ್ದಾರಿ ಇಲಾಖೆ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಶಿಧರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಧೀರ್‌ ಕೆ.ಎಸ್., ಜಿಲ್ಲಾ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು, ಮಂಡಲ ಸಮಿತಿ ಮಾಜಿ ಅಧ್ಯಕ್ಷ ಶಂಕರ ಅಂಕದಕಟ್ಟೆ, ಪುರಸಭೆ ಸದಸ್ಯ ಸಂತೋಷ್ ಕುಮಾರ್ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.