ಕುಂದಾಪುರ: ಪರಶುರಾಮ ಸೃಷ್ಟಿಯ ಸಪ್ತ ಮೋಕ್ಷದಾತಕ ಕ್ಷೇತ್ರಗಳಲ್ಲಿ ಒಂದಾಗಿರುವ ಧ್ವಜಪುರವೆಂದು ಪುರಾಣ ಪ್ರಸಿದ್ದಿ ಹೊಂದಿರುವ ಕೋಟೇಶ್ವರದ ಕೋಟಿಲಿಂಗೇಶ್ವರ ದೇವರಿಗೆ ಇಂದು ನಡೆಯುವ ಬ್ರಹ್ಮರಥೋತ್ಸವ, ‘ಕೊಡಿ’ ಹಬ್ಬ ಕಣ್ತುಂಬಕೊಳ್ಳಲು ದೇಶ ವಿದೇಶಗಳಿಂದ ಭಕ್ತರು ಆಗಮಿಸಿದ್ದಾರೆ.
ವೃಶ್ಚಿಕ ಮಾಸದಂದು ನಡೆಯುವ ಇಲ್ಲಿನ ಬ್ರಹ್ಮರಥೋತ್ಸವಕ್ಕೆ ಶತಮಾನಗಳ ಇತಿಹಾಸವಿದೆ. ರಾಜ್ಯದ ದೊಡ್ಡ ಗಾತ್ರದ ರಥಗಳಲ್ಲಿ ಒಂದಾಗಿರುವ ಕೋಟೇಶ್ವರದ ಬ್ರಹ್ಮರಥದಲ್ಲಿ ವಿವಿಧ ಶಿಲ್ಪ ಕಲೆಯ ಕೆತ್ತನೆಗಳು ಇದೆ. ಧ್ವಜ ಸ್ತಂಭಕ್ಕೆ ಗರ್ನಪಠಾರೋಹಣ (ಗರ್ನ ಕಟ್ಟುವುದು) ಮಾಡುವ ಮೂಲಕ 7 ದಿನಗಳ ಕಾಲ ವೈಭವದಿಂದ ನಡೆಯುವ ಉತ್ಸವದ ಧಾರ್ಮಿಕ ವಿಧಿ ಪ್ರಾರಂಭವಾಗುತ್ತದೆ. ಜಾತ್ರೆಯ ಪೂರ್ವಭಾವಿಯಾಗಿ ಕಟ್ಟಕಟ್ಟಳೆ ಕಟ್ಟೆ ಸೇವೆಗಾಗಿ ಕುಂದಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮನೆ ಬಾಗಿಲಿಗೆ ಬರುವ ದೇವರನ್ನು ಶ್ರದ್ಧೆಯಿಂದ ಬರಮಾಡಿಕೊಂಡು ಪೂಜೆ ಸಲ್ಲಿಸುವ ವಾಡಿಕೆ ಇದೆ.
ಶುಕ್ರವಾರ ರಂಗೋತ್ಸವ, ಶತರುದ್ರಾಭಿಷೇಕ, ಕುಂಜರವಾಹನೋತ್ಸವ, ಶನಿವಾರ ಅಶ್ವವಾಹನೋತ್ಸವ ನಡೆದವು. ಭಾನುವಾರ ಸಿಂಹವಾಹನೋತ್ಸವ ನಡೆದಿದ್ದು, ನ.27ರಂದು ಮಕರ ಲಗ್ನ ಸುಮೂಹರ್ತದಲ್ಲಿ ಮನ್ಮಹಾರಥೋತ್ಸವ ನಡೆಯಲಿದೆ. 28ರಂದು ಚೂರ್ಣೋತ್ಸವ, ಅವಭೃತ ಸ್ನಾನ ಕಾರ್ಯಕ್ರಮಗಳು ನಡೆಯಲಿವೆ.
ಉತ್ಸವದ ಅಂಗವಾಗಿ ಪ್ರತಿದಿನ ಸಂಜೆ 6ರಿಂದ ಸ್ಥಳೀಯ ವಿವಿಧ ಭಜನಾ ಮಂಡಳಿಗಳ ನೇತೃತ್ವದಲ್ಲಿ ಭಜನೆ, ಮಂಗಲೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಇಂದು ಬೆಂಗಳೂರು ಗೋಪಿ ಮತ್ತು ಬಳಗದವರಿಂದ ನಗೆಹಬ್ಬ, ನ.27 ರಂದು ಅರೆಹೊಳೆ ನಂದಗೋಕುಲ ಕಲಾವಿದರಿಂದ ನೃತ್ಯವರ್ಷಾ, ನ.28ರಂದು ವಿದುಷಿ ಭಾಗೀರಥಿ ಎಂ.ರಾವ್ ಅವರ ಶಿಷ್ಯರಿಂದ ನೃತ್ಯ ಸೌರಭ (ಚಿಣ್ಣರ ಚಿಲಿಪಿಲಿ) ಕಾರ್ಯಕ್ರಮಗಳು ದೇವಳದ ಶಾಂತಾರಾಮ ರಂಗಮಂಟಪದಲ್ಲಿ ನಡೆಯಲಿವೆ.
ಕೊಡಿ ಹಬ್ಬ: ಕರಾವಳಿಯ ಜನರ ಆಡುಭಾಷೆಯಲ್ಲಿ ಜನಜನಿತವಾಗಿರುವ ‘ಕೊಡಿ ಹಬ್ಬ’ ಎನ್ನುವ ಹೆಸರು ಹುಟ್ಟಿಕೊಳ್ಳಲು ಹಲವು ಕಾರಣಗಳನ್ನು ಹೇಳಲಾಗುತ್ತಿದೆ. ಕೋಟಿಲಿಂಗೇಶ್ವರನಿಗೆ ಬ್ರಹ್ಮರಥ ಅರ್ಪಣೆ ಮಾಡಲು ನಿಶ್ಚಯಿಸಿದ್ದ ಮಾಹಿಷ್ಮತಿ ರಾಜ ವಸು ಮಹಾರಾಜನಿಗೆ ಜಾತ್ರೆಯ ದಿನದಂದು ರಥ ನಿರ್ಮಾಣ ಸಾಧ್ಯವಾಗದೆ ಇದ್ದುದರಿಂದ, ಕೊಡಿ (ಬಿದಿರು)ಯಿಂದ ನಿರ್ಮಿಸಿದ ರಥದಲ್ಲಿ ಮೊದಲ ಉತ್ಸವ ನಡೆಯಿತು ಎನ್ನುವುದಕ್ಕಾಗಿ ಈ ಹೆಸರು ಚಲಾವಣೆಗೆ ಬಂದಿದೆ ಎನ್ನುವ ನಂಬಿಕೆ ಇದೆ. ಪ್ರತಿವರ್ಷವೂ ಜಾತ್ರೆಗೆ ಆಗಮಿಸುವ ನವ ದಂಪತಿ ದೇವರ ದರ್ಶನ ಮಾಡಿದ ಬಳಿಕ ಕೊಡಿ (ಕಬ್ಬಿನ ಜಲ್ಲೆ) ತೆಗೆದುಕೊಂಡು ಹೋದರೆ, ಅವರಿಗೆ ಸಂತಾನದ ಕುಡಿ ಅರಳುತ್ತದೆ ಎನ್ನುವ ನಂಬಿಕೆ ಇದೆ.
ಸುತ್ತಕ್ಕಿ ಸೇವೆ: ಕೋಟಿ ಋಷಿಗಳು ಒಂದಾಗಿ ತಪ್ಪಸ್ಸು ಮಾಡಿದ ಮೋಕ್ಷ ಕ್ಷೇತ್ರ ಎಂದು ಪುರಾಣದಲ್ಲಿ ಉಲ್ಲೇಖವಾಗಿರುವ ಕೋಟಿಲಿಂಗೇಶ್ವರ ದೇವಸ್ಥಾನ ಚಾವಣಿಯತ್ತ ದೃಷ್ಟಿ ಹಾಯಿಸಿದರೆ, ಅಲ್ಲಿ ಜೋಡಿಸಿರುವ ಬೃಹದಾಕಾರದ ಕಲ್ಲುಗಳು ನೋಡುಗರಿಗೆ ಭಯ ಹುಟ್ಟಿಸುವಂತೆ ರಚನೆಯಾಗಿವೆ. ಅಂದಾಜು 4.5 ಎಕರೆ ವಿಸ್ತಿರ್ಣ ಹೊಂದಿರುವ ಇಲ್ಲಿನ ಕೋಟಿತೀರ್ಥ ಪುಷ್ಕರಣಿಗೆ ಜಾತ್ರೆಯಂದು ನಸುಕಿನಲ್ಲಿ ಆಗಮಿಸುವ ಭಕ್ತರು ಪುಷ್ಕರಣಿಯಲ್ಲಿ ಸ್ನಾನ ಮಾಡಿ, ಸರೋವರದ ಸುತ್ತು ಬಿಳಿ ಬಟ್ಟೆ ಹಾಸಿರುವ ಅಪೇಕ್ಷಿತರಿಗೆ, ಮುಷ್ಠಿ ಅಕ್ಕಿ ಹಾಕಿ, ದೇವರ ದರ್ಶನ ಪಡೆಯುತ್ತಾರೆ. ಈ ರೀತಿ ನಡೆಯುವ ಸೇವೆಗೆ ‘ಸುತ್ತಕ್ಕಿ’ ಸೇವೆ ಎನ್ನುತ್ತಾರೆ. ಈಚಿನ ವರ್ಷಗಳಲ್ಲಿ ಅಕ್ಕಿ ಅಪೇಕ್ಷಿತರ ಸಂಖ್ಯೆ ಕಡಿಮೆ ಆಗುತ್ತಿರುವುದರಿಂದ ಹರಕೆ ಸೇವೆ ಪೂರೈಕೆಗಾಗಿ ಬರುವ ಭಕ್ತರು ಸರೋವರಕ್ಕೆ ಎಸೆಯುವ ಅಕ್ಕಿ ಮೀನುಗಳ ಜೀವಕ್ಕೆ ಸಂಚಕಾರ ತರುತ್ತಿವೆ.
ಕೊಡಿಹಬ್ಬದಲ್ಲಿ ಎಲ್ಲ ಧರ್ಮದವರು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಹಬ್ಬದ 3-4 ದಿನಗಳ ಮೊದಲೇ ಪೇಟೆಯನ್ನು ದೀಪಾಲಂಕಾರಗಳಿಂದ ಸಿಂಗರಿಸುತ್ತಾರೆ. ಪರಿಸರದ ವಿವಿಧ ಸಂಘಟನೆಗಳು, ಯುವಕರ ಉತ್ಸಾಹದ ಗುಂಪುಗಳು ಆಕರ್ಷಕ ದೃಶ್ಯ ಸಂಯೋಜನೆ, ದೀಪಾಲಂಕಾರ, ಮನೋರಂಜನಾ ಕಾರ್ಯಕ್ರಮ ಮೂಲಕ ಜಾತ್ರೆಗೆ ಮೆರುಗು ನೀಡುತ್ತಾರೆ. ರಥೋತ್ಸವ ಮಾರನೇ ದಿನ ಮಧ್ಯರಾತ್ರಿಯಿಂದ ನಸುಕಿನ ತನಕ ನಡೆಯುವ ಪಾರಂಪರಿಕ ಓಕುಳಿಯಾಟಕ್ಕೂ ಸಾಕಷ್ಟು ಹಿನ್ನೆಲೆ ಇದೆ. ಕೋಟೇಶ್ವರ, ಸುತ್ತಮುತ್ತಲಿನ ಗ್ರಾಮದ ಬಂಟ ಸಮುದಾಯದವರು ಪಾಲ್ಗೊಂಡು ದೇವರೊಂದಿಗೆ ನಡೆಸುವ ಓಕುಳಿಯಾಟವನ್ನು ನೋಡಲು ಕೊರೆಯುವ ಚಳಿ ನಡುವೆಯೂ ಸಾವಿರಾರು ಜನರು ಕಾದಿರುತ್ತಾರೆ.
ಪಾರ್ಕಿಂಗ್ ಸಮಸ್ಯೆ: ಕೋಟೇಶ್ವರ ಒಳಭಾಗದ ರಸ್ತೆಗಳು ಇಕ್ಕಟ್ಟಾಗಿರುವುದರಿಂದ, ಜಾತ್ರೆ ಸಂದರ್ಭದಲ್ಲಿ ದೇಶದೆಲ್ಲೆಡೆಯಿಂದ ಬರುವ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಈಚೀನ ವರ್ಷಗಳಲ್ಲಿ ಹೆಚ್ಚಾಗುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಕಿ.ಮೀ ದೂರ ಪಾರ್ಕಿಂಗ್ ಮಾಡಿ ಜಾತ್ರೆಗೆ ಸ್ಥಳ ಸೇರಬೇಕಾದ ಅನೀವಾರ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.