ಕುಂದಾಪುರ: ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಪಿಸ್ತೂಲ್ ತೋರಿಸಿ, ಬೆದರಿಕೆ ಹಾಕಿದ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಗಂಗೊಳ್ಳಿ ಪೊಲೀಸರು, ಕೃತ್ಯಕ್ಕೆ ಬಳಸಿದ್ದ ಮಾರಕಾಯುಧ ವಶಪಡಿಸಿಕೊಂಡಿದ್ದಾರೆ.
ಪಡುಕೋಣೆ ನಿವಾಸಿ ಶ್ರೀಕಾಂತ ಪೂಜಾರಿ ಹಡವು ಗ್ರಾಮದ ಶ್ರೀಮಹಾವಿಷ್ಣು ದೇವಸ್ಥಾನಕ್ಕೆ ಹೋಗುವ ಕ್ರಾಸ್ ಬಳಿ, ಸ್ನೇಹಿತರಾದ ಅರವಿಂದ ಪೂಜಾರಿ, ಚಂದ್ರ ಪಡುಮನೆ, ಸುರೇಶ, ಶಿವ ಕುಮಾರ್ ಹೆಬ್ಬಾರ್ ಮತ್ತವರ ಮಗ ಮನು ಹೆಬ್ಬಾರ್, ಸುದೇಶ್ ಶೆಟ್ಟಿ ಜೊತೆಯಲ್ಲಿ ಮಾತನಾಡುತ್ತಾ ನಿಂತುಕೊಂಡಿದ್ದ ವೇಳೆ ಆರೋಪಿಗಳು ಏಕಾಏಕಿ ಬಂದು ಮಾರಕಾಯುಧಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ.
ಈ ವೇಳೆ ಶ್ರೀಕಾಂತ ಹಾಗೂ ಸ್ನೇಹಿತರು ಅಲ್ಲೆ ಸ್ವಲ್ಪ ದೂರ ಹೋಗಿ ನಿಂತಿದ್ದು, ಶಿವಕುಮಾರ್ ಹೆಬ್ಬಾರ್ ಹಾಗೂ ಅವರ ಮಗ ಮನು ಹಲ್ಲೆಕೋರರನ್ನು ಎದುರಿಸಲು ಹೋದಾಗ ಅವರ ಮೇಲೆ ವಿಶ್ವನಾಥ ಪಡುಕೋಣೆ, ರೋಶನ್ ಫೆರ್ನಾಂಡಿಸ್, ಪ್ರವೀಣ ಪಡುಕೋಣೆ ಹಲ್ಲೆ ಮಾಡಿದ ಪರಿಣಾಮ ಶಿವಕುಮಾರ್ ಹೆಬ್ಬಾರ್ ಅವರ ಕೈ–ಕಾಲು ಹಾಗೂ ಮನು ಹೆಬ್ಬಾರ್ ತಲೆಗೆ ಗಾಯಗಳಾಗಿದೆ.
ಸಮೀಪದಲ್ಲಿ ನಿಂತಿದ್ದ ಸುದೇಶ್ ಶೆಟ್ಟಿ ಹಾಗೂ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ ಅವರಿಗೂ ಆರೋಪಿ ಸಚಿನ್ ಪೂಜಾರಿ ಜೀವ ಬೆದರಿಕೆ ಹಾಕಿದ್ದಾನೆ. ಜೀವ ಭಯದಿಂದ ಶ್ರೀಕಾಂತ ಓಡಲೆತ್ನಿಸಿದಾಗ ಆರೋಪಿ ಸಚಿನ್ ಪೂಜಾರಿ ಅಡ್ಡಗಟ್ಟಿ ತನ್ನ ಕೈಯಲ್ಲಿದ್ದ ಪಿಸ್ತೂಲ್‌ನ್ನು ಶ್ರೀಕಾಂತ್ ತಲೆಗೆ ಗುರಿ ಹಿಡಿದು, ಬೆದರಿಕೆ ಹಾಕಿದ್ದಲ್ಲದೇ, ಕೈಯಿಂದ ಕೆನ್ನೆ ಹಾಗೂ ತಲೆಗೆ ಹೊಡೆದು ಹಲ್ಲೆ ಮಾಡಿದ್ದಾನೆ ಎಂದು ಶ್ರೀಕಾಂತ್ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಶ್ರೀಕಾಂತ್ ಹಾಗೂ ಆರೋಪಿ ವಿಶ್ವನಾಥ ಪಡುಕೋಣೆ ಮತ್ತು ಇತರರ ಮಧ್ಯೆ ಹಳೆ ದ್ವೇಷ ಇದ್ದು, ಅದೇ ಕೃತ್ಯ ಕಾರಣ ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿಗಳ ಬಂಧನ: ಪ್ರಕರಣಕ್ಕೆ ಸಂಬಂಧಿಸಿದಂತೆ ಆಲೂರು ಹೊಯ್ಯಾಣ ನಿವಾಸಿ ಸಚಿನ್, ಆಲೂರು ರಾಮೇಶ್ವರ ನಗರ ನಿವಾಸಿ ಶರತ್ ದೇವಾಡಿಗ, ಕೆಂಬೈಲು ನಿವಾಸಿಗಳಾದ ಕಾರ್ತಿಕ್ ಹಾಗೂ ಕೀರ್ತಿಕ್, ಪಡುಕೋಣೆಯ ನಿವಾಸಿ ಪ್ರಕಾಶ್, ಪಡುಕೋಣೆಯ ಹನುಮಂತನಗರ ನಿವಾಸಿ ಜಗದೀಶ್, ಪಡುಕೋಣೆಯ ರಾಮಮಂದಿರ ನಿವಾಸಿ ಗೌತಮ್, ಪಡುಕೋಣೆ ನಿವಾಸಿ ಮಹೇಂದ್ರ ಪೂಜಾರಿ, ಹಡವು ನಿವಾಸಿ ಸಂತೋಷ್ ಮೊಗವೀರ, ರೋಶನ್ ಫೆರ್ನಾಂಡೀಸ್, ಆಲೂರು ನಿವಾಸಿ ಪ್ರಸಾದ್ ಆಚಾರ್ಯ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾಗಿರುವ ಇಬ್ಬರು ಬಾಲಕರು ಸೇರಿದಂತೆ ಒಟ್ಟು 13 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 1 ಏರ್ ಪಿಸ್ತೂಲ್, 4 ಬೈಕ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಗಂಗೊಳ್ಳಿ ಠಾಣಾಧಿಕಾರಿ ಹರೀಶ್ ಆರ್ ನಾಯ್ಕ್, ಅಪರಾಧ ವಿಭಾಗದ ಪಿಎಸ್ಐ ಬಸವರಾಜ್ ಕನಶೆಟ್ಟಿ, ಸಿಬ್ಬಂದಿ ನಾಗರಾಜ, ಕೇಶವ, ಸಂದೀಪ, ರಾಘವೇಂದ್ರ, ರಾಷ್ಟ್ರಪತಿ, ಚಾಲಕ ಸುಧೀರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.