ADVERTISEMENT

ಕುಂದಾಪುರ ತಾಲ್ಲೂಕು ವಿಪ್ರ ಮಹಿಳಾ ಸಮಾವೇಶ

ವಿಭಿನ್ನ ಪರಿಕಲ್ಪನೆಯ ಸಮಾವೇಶ ಸಂಘಟನೆ ಬಲವರ್ಧನೆಗೆ ಸಹಕಾರಿ: ಕಾಂತಿರಾವ್

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 6:29 IST
Last Updated 22 ಅಕ್ಟೋಬರ್ 2024, 6:29 IST
ನಾಗೂರು ಶ್ರೀಕೃಷ್ಣಲಲಿತ ಕಲಾಮಂದಿರದಲ್ಲಿ ಭಾನುವಾರ ನಡೆದ ಕುಂದಾಪುರ ತಾಲೂಕು ವಿಪ್ರ ಮಹಿಳಾ ಸಮಾವೇಶ ಸದ್ಭಾವನಾ ಲಹರಿ-೨೦೨೪ ಅನ್ನು ಜಿಲ್ಲಾ ಬ್ರಾಹ್ಮಣ ಮಹಾಸಭಾ ಮಹಿಳಾ ವೇದಿಕೆ ಅಧ್ಯಕ್ಷೆ ಕಾಂತಿರಾವ್ ಉದ್ಘಾಟಿಸಿದರು.
ನಾಗೂರು ಶ್ರೀಕೃಷ್ಣಲಲಿತ ಕಲಾಮಂದಿರದಲ್ಲಿ ಭಾನುವಾರ ನಡೆದ ಕುಂದಾಪುರ ತಾಲೂಕು ವಿಪ್ರ ಮಹಿಳಾ ಸಮಾವೇಶ ಸದ್ಭಾವನಾ ಲಹರಿ-೨೦೨೪ ಅನ್ನು ಜಿಲ್ಲಾ ಬ್ರಾಹ್ಮಣ ಮಹಾಸಭಾ ಮಹಿಳಾ ವೇದಿಕೆ ಅಧ್ಯಕ್ಷೆ ಕಾಂತಿರಾವ್ ಉದ್ಘಾಟಿಸಿದರು.   

ಬೈಂದೂರು: ಮಹಿಳೆಯರಿಂದ ಮಹಿಳೆಯರಿಗಾಗಿ ಮಹಿಳೆಯರಿಗೋಸ್ಕರ ಆಯೋಜಿಸಿದ ಮಹಿಳಾ ಸಮಾವೇಶ ಒಂದು ವಿಭಿನ್ನ ಪರಿಕಲ್ಪನೆ. ಎಲ್ಲಾ ವರ್ಗದ ಮಹಿಳೆಯರ ಪಾಲ್ಗೊಳ್ಳುವಿಕೆ, ಉಚಿತ ಆರೋಗ್ಯ ಶಿಬಿರ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡ ಈ ಸಮಾವೇಶವು ಸಂಘಟನೆ ಬಲವರ್ಧನೆಗೆ ಸಹಕಾರಿಯಾಗಿದೆ ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾ ಮಹಿಳಾ ವೇದಿಕೆ ಅಧ್ಯಕ್ಷೆ ಕಾಂತಿರಾವ್ ಹೇಳಿದರು.

ನಾಗೂರು ಶ್ರೀಕೃಷ್ಣಲಲಿತ ಕಲಾಮಂದಿರದಲ್ಲಿ ಭಾನುವಾರ ನಡೆದ ಕುಂದಾಪುರ ತಾಲ್ಲೂಕು ವಿಪ್ರ ಮಹಿಳಾ ಸಮಾವೇಶ ‘ಸದ್ಭಾವನಾ ಲಹರಿ– 2024’ ಉದ್ಘಾಟಿಸಿ ಅವರು ಮಾತನಾಡಿದರು.

ದಿಕ್ಸೂಚಿ ಭಾಷಣ ಮಾಡಿದ ಉಪನ್ಯಾಸಕಿ ಅಕ್ಷಯಾ ಗೋಖಲೆ, ಬ್ರಾಹ್ಮಣತ್ವ ಎನ್ನುವುದು ಜಾತಿಯಲ್ಲ, ಅರ್ಹತೆ. ಶ್ರೇಷ್ಠ ವಿಚಾರಗಳು ಜಗತ್ತಿನ ಎಲ್ಲೆಡೆಯಿಂದ ಇಲ್ಲಿ ಹರಿದು ಬರಲಿ ಎನ್ನುವಂಥ ರಕ್ತ ನಮ್ಮದು. ಯಾರಿಗೆ ತನ್ನ ಬದುಕಿನ ಸೀಮಿತತೆಯನ್ನು ಮೀರಿ ಯೋಚನೆ ಮಾಡುವ ಅರ್ಹತೆ ಇದೆಯೋ ಅವನು ಬ್ರಾಹ್ಮಣನಾಗಬಲ್ಲ ಎಂದರು.

ADVERTISEMENT

ತಾಯಿ– ತಂದೆ ಅಧರ್ಮದ ದಾರಿಯಲ್ಲಿ ನಡೆಯುತ್ತಿದ್ದರೆ, ಬದುಕುವ ವಿಚಾರಕ್ಕಾಗಿ ಅನ್ಯಾಯ ಮಾಡಿದರೆ ಅಂಥವರ ಮಕ್ಕಳು ಪಾಂಡವರಾಗಲು ಸಾಧ್ಯವಿಲ್ಲ. ಇದನ್ನು ಸರಿಪಡಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕೌರವರಂತೆ ನೂರೂ ಜನ ಮಕ್ಕಳನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಬಹುದು. ನಮ್ಮ ಮನೆಯ ಹೆಣ್ಣುಮಕ್ಕಳ ಬಗ್ಗೆ ಜಾಗೃತೆ ವಹಿಸಿ. ಇಲ್ಲವಾದರೆ ಅನ್ಯಮತೀಯರ ಪಾಲಾಗುವ ಸ್ಥಿತಿ ಬರಬಹುದು ಎಂದರು.

ದ್ರಾವಿಡ ಬ್ರಾಹ್ಮಣ ಪರಿಷತ್ ತಾಲ್ಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಸಂಧ್ಯಾ ಉಡುಪ ಅಧ್ಯಕ್ಷತೆ ವಹಿಸಿದ್ದರು. ಭಗವದ್ಗೀತೆ ಕಂಠಪಾಠ ಸ್ಪರ್ಧೆಯಲ್ಲಿ ಸತತ 4 ಬಾರಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಯುಕ್ತ ಹೊಳ್ಳ ಕುಂದಾಪುರ, ಮೊಗೇರಿ ಪಂಚಾಂಗಕರ್ತೆ ಅನುಪಮಾ ಅಡಿಗ ಮೊಗೇರಿ, ಉಪನ್ಯಾಸಕಿ ಅಕ್ಷಯಾ ಗೋಖಲೆ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಂದೀಪ್ ಕುಮಾರ್ ಮಂಜ, ತಾಲ್ಲೂಕು ಬ್ರಾಹ್ಮಣ ಪರಿಷತ್ ಅಧ್ಯಕ್ಷ ಶುಭಚಂದ್ರ ಹತ್ವಾರ್, ಪ್ರಧಾನ ಕಾರ್ಯದರ್ಶಿ ರತ್ನಾಕರ ಉಡುಪ, ಜಿಲ್ಲಾ ಬ್ರಾಹ್ಮಣ ಮಹಾಸಭಾ ಯುವವೇದಿಕೆ ಅಧ್ಯಕ್ಷೆ ಪವಿತ್ರಾ ಆರ್. ಅಡಿಗ, ಉಪ್ಪುಂದ ವಲಯ ಮಹಿಳಾ ವೇದಿಕೆ ಅಧ್ಯಕ್ಷೆ ವೀಣಾ ಹೆಬ್ಬಾರ್, ತಾಲ್ಲೂಕು ಮಹಿಳಾ ಕಾರ್ಯದರ್ಶಿ ಜ್ಯೋತಿ ಐತಾಳ್, ಖಜಾಂಚಿ ರಘುರಾಮ ರಾವ್ ಇದ್ದರು. ಗೌರವಾಧ್ಯಕ್ಷೆ ಭಾವನಾ ಎಂ. ಭಟ್ ಹರೇಗೋಡು ಪ್ರಾಸ್ತಾವಿಕ ಮಾತನಾಡಿದರು. ವೀಣಾ ಮೂರ್ತಿ ಸ್ವಾಗತಿಸಿದರು. ಸುಪ್ರಿತಾ ಪುರಾಣಿಕ್ ನಿರೂಪಿಸಿದರು. ಲಕ್ಷ್ಮೀ ಐತಾಳ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.