ಕುಂದಾಪುರ: ನಾಲ್ಕು ದಶಕ ಕಳೆದರೂ ‘ವಾರಾಹಿ’ ಯೋಜನೆ ಪೂರ್ಣಗೊಳ್ಳದಿರುವುದಕ್ಕೆ ಹಲವು ಕಾರಣಗಳಿವೆ. ಮೊದಲನೆಯದ್ದು ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ವಿಳಂಬ. ಯೋಜನೆಗೆ ಬರೋಬ್ಬರಿ 1,249 ಎಕರೆ 18 ಗುಂಟೆ ಪಟ್ಟಾ ಜಮೀನು ಅವಶ್ಯಕತೆ ಇದ್ದು, ಇದುವರೆಗೂ ಭೂಸ್ವಾಧೀನವಾಗಿರುವುದು 694 ಎಕರೆ 12 ಗುಂಟೆ ಮಾತ್ರ.
ಸ್ವಾಧೀನಪಡಿಸಿಕೊಂಡ ಭೂಮಿಗೆ ₹ 109 ಕೋಟಿ ಪರಿಹಾರ ನೀಡಲಾಗಿದೆ. 555 ಎಕರೆ 6 ಗುಂಟೆ ಸ್ವಾಧೀನಕ್ಕೆ ಬಾಕಿ ಇದೆ. 227 ಎಕರೆ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ ಎನ್ನುತ್ತಾರೆ ಅಧಿಕಾರಿಗಳು.
ಯೋಜನೆ ವಿಳಂಬಕ್ಕೆ ಕಾರಣ
ಕುಮ್ಕಿ ಹಕ್ಕು ಸೇರಿದಂತೆ ಹಲವು ವಿಚಾರಗಳು ಭೂಸ್ವಾಧೀನ ಪ್ರಕ್ರಿಯೆಗೆ ಅಡ್ಡಿಯಾಗಿದ್ದು, ಖಾತಾ ಜಮೀನುಗಳ ಭೂಸ್ವಾಧೀನಕ್ಕಾಗಿ ಪ್ರತ್ಯೇಕ ಭೂ ಸ್ವಾಧೀನಾಧಿಕಾರಿಗಳ ನೇಮಕವಾಗದಿರುವುದು ವಿಳಂಬಕ್ಕೆ ಕಾರಣವಾಗಿದೆ. ಯೋಜನೆಯಡಿಯಲ್ಲಿ 129.60 ಹೆಕ್ಟೇರ್ ರಕ್ಷಿತಾರಣ್ಯ ಬರಲಿದ್ದು, ಅದರಲ್ಲಿ 39 ಹೆಕ್ಟೇರ್ ಡೀಮ್ಡ್ ಅರಣ್ಯವಾಗಿರುವುದರಿಂದ ಈ ಭಾಗದಲ್ಲಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.
ಜತೆಗೆ, ಕರಾವಳಿ ಹಾಗೂ ಮಲೆನಾಡಿನಲ್ಲಿ ಸುರಿಯುವ ಭಾರಿ ಮಳೆಯಿಂದಾಗಿ ಕಾಮಗಾರಿ ಪ್ರದೇಶಗಳಲ್ಲಿ ಜೂನ್‌ನಿಂದ ಡಿಸೆಂಬರ್‌ವರೆಗೂ ಅಂತರ್ಜಲ ಮಟ್ಟವು ನೆಲಮಟ್ಟಕ್ಕೆ ಹತ್ತಿರವಾಗಿರುವುದರಿಂದ, ವರ್ಷದಲ್ಲಿ 5 ರಿಂದ 6 ತಿಂಗಳು ಮಾತ್ರ ಪೂರ್ಣ ಪ್ರಮಾಣದ ಕಾಮಗಾರಿ ಮಾಡಬೇಕಾಗಿದೆ ಎನ್ನುವುದು ತಾಂತ್ರಿಕ ಪರಿಣಿತರ ಅಭಿಪ್ರಾಯ.
ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಹಾದು ಹೋಗುವ ನೀರಾವರಿ ಯೋಜನೆಯಾಗಿರುವುದರಿಂದ ಇಲ್ಲಿನ ವಿಶಿಷ್ಟ ಭೌಗೋಳಿಕ ಪರಿಸರ ಹಾಗೂ ಮಣ್ಣಿನ ಗುಣಧರ್ಮಗಳನ್ನು ಯೋಜನೆ ಅನುಷ್ಠಾನಕ್ಕೂ ಮುನ್ನವೇ ಅಂದಾಜಿಸಬೇಕಿತ್ತು. ಆದರೆ, ಈ ಪ್ರಕ್ರಿಯೆಯಲ್ಲಿನ ವೈಫಲ್ಯಗಳು ಕಾಮಗಾರಿ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ.
ಕಾಲುವೆಗಳು, ಕಡಿದಾದ ಬೆಟ್ಟ-ಗುಡ್ಡಗಳಲ್ಲಿ ದುರ್ಬಲ ಮಣ್ಣಿನ ಪದರಗಳಿರುವುದರಿಂದಾಗಿ ಸುರಂಗ ಹಾಗೂ ಎತ್ತರದ ಮೇಲ್ಗಾವೆಗಳನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ.
ಕರ್ನಾಟಕ ನೀರಾವರಿ ನಿಗಮದ ಅಡಿಯಲ್ಲಿ ನಡೆಯುತ್ತಿರುವ ವಾರಾಹಿ ನೀರಾವರಿ ಯೋಜನೆಯ ಜೊತೆಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ ಇತರ ನೀರಾವರಿ ಯೋಜನೆಗಳ ಮೇಲುಸ್ತುವಾರಿಯನ್ನು ವಾರಾಹಿ ಯೋಜನಾ ನಿರ್ವಹಣಾ ಕಚೇರಿಗೆ ವಹಿಸಿರುವುದರಿಂದ ಕೆಲಸದ ಒತ್ತಡಗಳು ಹೆಚ್ಚಾಗಿದ್ದು, ಯೋಜನೆಯ ಅನುಷ್ಠಾನದ ವೇಗವನ್ನು ತಗ್ಗಿಸಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ವಾರಾಹಿ ಹರಿದಿದ್ದು ಎಲ್ಲಿ
ನಾಲ್ಕು ದಶಕಗಳ ಸುಧೀರ್ಘ ಅವಧಿಯಲ್ಲಿ ವಾರಾಹಿ ಹರಿದಿದ್ದು ಎಲ್ಲಿ ಎಂಬುದನ್ನು ನೋಡುವುದಾದರೆ, ಯೋಜನೆಯ ಎಡದಂಡೆಯ 38 ಕಿ.ಮೀ ಹಾಗೂ ಬಲದಂಡೆಯ 19ನೇ ಕಿ.ಮೀವರೆಗಿನ ಕಾಲುವೆಗಳಲ್ಲಿ ನೀರು ಹರಿದಿದೆ. 6,110 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಸಿಕ್ಕಿದೆ. ಜತೆಗೆ ವಾರಾಹಿ ಹರಿವಿನ ಕಡೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ.ಯೋಜನೆಗೆ 2021ರ ಡಿಸೆಂಬರ್‌ವರೆಗೆ ₹ 997.13 ಕೋಟಿ ಅನುದಾನ ಹಂಚಿಕೆಯಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ರೈತರ ಆಗ್ರಹ
ಈಗಾಗಲೇ ಎರಡನೇ ತಲೆಮಾರು ಕಾಣುತ್ತಿರುವ ‘ವಾರಾಹಿ’ ಶೀಘ್ರ ಮುಕ್ತಾಯವಾಗಲಿ ಎಂದು ರೈತರು ಹಾತೊರೆಯುತ್ತಿದ್ದಾರೆ. ರೈತರ ಬಾಳಿಗೆ ವರವಾಗಲಿ ಎಂದು ಆಶಿಸುತ್ತಿದ್ದಾರೆ ಅನ್ನದಾತರು. ರೈತರ ಭರವಸೆಗಳು ಈಡೇರಬೇಕಾದರೆ, ಯೋಜನೆಯ ನಿರ್ವಹಣೆಯ ಹೊಣೆ ಹೊತ್ತಿರುವವರು ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಯೋಜನೆಯ ಅನುಷ್ಠಾನಕ್ಕೆ ಅಡ್ಡಿಯಾಗಿರುವ ತಾಂತ್ರಿಕ ಹಾಗೂ ಇತರ ತೊಡರುಗಳನ್ನು ನಿವಾರಿಸಬೇಕಿದೆ. ಯೋಜನೆ ಅನುಷ್ಠಾನಕ್ಕೆ ಅಗತ್ಯವಾಗಿರುವ ಭೂಸ್ವಾಧೀನ ಪ್ರಕ್ರಿಯೆ, ಭೂಮಿ ಪರಿಹಾರ ವಿತರಣೆ, ಅರಣ್ಯ ಇಲಾಖೆಯ ಸಮಸ್ಯೆಗಳಿಗೆ ತಾತ್ವಿಕ ಪರಿಹಾರ ಕಂಡುಕೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.
ಕಾಮಗಾರಿಯ ವಿವರ
ವಾರಾಹಿ ನೀರಾವರಿ ಯೋಜನೆಯಡಿಯಲ್ಲಿ ಅನುಮೋದಿತ ವರದಿಯನ್ವಯ ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು, ಅಂದಾಜು ₹ 208.50 ಕೋಟಿ ವೆಚ್ಚದಲ್ಲಿ ರಸ್ತೆ, ಸೇತುವೆ, ಸಮುದಾಯ ಭವನ, ಹಟ್ಟಿಕುದ್ರು ದ್ವೀಪಕ್ಕೆ ಸೇತುವೆ, ದಾಸನಕಟ್ಟೆ ಏತ ನೀರಾವರಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ₹ 104.80 ಕೋಟಿ ಹಾಗೂ ₹163.93 ಕೋಟಿ ವೆಚ್ಚದ ಕಾಮಗಾರಿಗಳನ್ನು ಕೆ.ಆರ್.ಐ.ಡಿ.ಎಲ್ ಇಲಾಖೆ ಹಾಗೂ ನಿರ್ಮಿತಿ ಕೇಂದ್ರದಿಂದ ಕೈಗೊಳ್ಳಲಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.