ADVERTISEMENT

ಹೆಬ್ರಿ: ಯುವತಿ ರಕ್ಷಣೆ– ಸರ್ಕಾರಿ ಬಸ್ ಸಿಬ್ಬಂದಿ ಕಾರ್ಯಕ್ಕೆ ಶ್ಲಾಘನೆ

ನೆರವಿಗೆ ಬಂದ ಮುಸ್ಲಿಂ ಸಹೋದರ– ಸಹೋದರಿಯರು

ಸುಕುಮಾರ್ ಮುನಿಯಾಲ್
Published 1 ಅಕ್ಟೋಬರ್ 2024, 7:04 IST
Last Updated 1 ಅಕ್ಟೋಬರ್ 2024, 7:04 IST
ಅಸ್ವಸ್ಥಗೊಂಡಿದ್ದ ಯುವತಿಯನ್ನು ಹೆಬ್ರಿ ಸರ್ಕಾರಿ ಆಸ್ಪತ್ರೆ ಎದುರು ಕರೆತಂದ ಬಸ್
ಅಸ್ವಸ್ಥಗೊಂಡಿದ್ದ ಯುವತಿಯನ್ನು ಹೆಬ್ರಿ ಸರ್ಕಾರಿ ಆಸ್ಪತ್ರೆ ಎದುರು ಕರೆತಂದ ಬಸ್   

ಹೆಬ್ರಿ: ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬರು ಅಸ್ವಸ್ಥಗೊಂಡ ಕಾರಣ ಚಾಲಕ ಮತ್ತು ನಿರ್ವಾಹಕ ಬಸ್ ಅನ್ನು ನೇರವಾಗಿ ಹೆಬ್ರಿ ಸರ್ಕಾರಿ ಸಮುದಾಯ ಕೇಂದ್ರಕ್ಕೆ ತಂದು ರೋಗಿಯ ಜೀವ ಉಳಿಸಿದ್ದಾರೆ. 

ಸೋಮವಾರ ಸಂಜೆ ಸರ್ಕಾರಿ ಬಸ್ ಶಿವಮೊಗ್ಗದಿಂದ ಉಡುಪಿಯತ್ತ ಬರುತ್ತಿತ್ತು. ಯುವತಿಯೊಬ್ಬರು ಮೇಗರವಳ್ಳಿಯಲ್ಲಿ ಬಸ್ ಹತ್ತಿದ್ದರು. ಆಗುಂಬೆ ಘಾಟಿಯಲ್ಲಿ ಅವರು ಅಸ್ವಸ್ಥಗೊಂಡಾಗ ನಿರ್ವಾಹಕ ವಾಸಿಂ ದೇಸಾಯಿ ನೆರವಿಗೆ ಬಂದಿದ್ದಾರೆ. ಅವರು ಇನ್ನಷ್ಟು ಅಸ್ವಸ್ಥಗೊಂಡ ಕಾರಣ ತಕ್ಷಣ ಸೋಮೇಶ್ವರದ ಉಪ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಒದಗಿಸಲಾಯಿತು. ಅಲ್ಲಿ ಚೇತರಿಕೆ ಕಾಣದ ಕಾರಣಕ್ಕೆ ನೇರವಾಗಿ ಹೆಬ್ರಿಯ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಬಂದು ಯುವತಿಯನ್ನು ದಾಖಲು ಮಾಡಿದ್ದಾರೆ. ಯುವತಿಯ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನೆರವು: ಚಾಲಕ ತಾರೇಶ್ ಹಾಗೂ ನಿರ್ವಾಹಕ ವಾಸಿಂ ದೇಸಾಯಿ ಯುವತಿಯ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ತೋರಿದರು. ಬಸ್‌ನಲ್ಲಿದ್ದ ಮಹಿಳೆಯರು ನೆರವು ನೀಡಲು ಹಿಂದೇಟು ಹಾಕಿದರು. ಮುಸ್ಲಿಂ ಯುವತಿಯೊಬ್ಬರು ಮುಂದೆ ಬಂದು, ಅಸ್ವಸ್ಥಗೊಂಡಿದ್ದ ಯುವತಿಯ ಶ್ವಾಸ ಸಹಜ ಸ್ಥಿತಿಗೆ ಮರಳುವಲ್ಲಿ ಸಹಕರಿಸಿದರು. ಇವರೆಲ್ಲರ ಶ್ರಮದಿಂದ ಯುವತಿ ಚೇತರಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಅಲ್ಲಾಡದ ಮಹಿಳೆಯರು: ‘ನನ್ನ ಸಹೋದ್ಯೋಗಿ ವಾಸಿಂ ಯಾವುದನ್ನೂ ಲೆಕ್ಕಿಸದೆ ಯುವತಿಗೆ ತುರ್ತಾಗಿ ಚಿಕಿತ್ಸೆ ಕೊಡಿಸಲು ಹೊತ್ತುಕೊಂಡು ಹೋದ ರೀತಿ ನೋಡಿ ಕಣ್ಣಲ್ಲಿ ನೀರು ಬಂತು. ಬಸ್‌ನಲ್ಲಿದ್ದ ಮಹಿಳೆಯರು ಸಹಾಯಕ್ಕೆ ಬರಲೇ ಇಲ್ಲ. ಮುಸ್ಲಿಂ ಸಹೋದರ –ಸಹೋದರಿಯಿಂದ  ಯುವತಿ ಚೇತರಿಸಿಕೊಳ್ಳುತ್ತಿದ್ದಾರೆ. ಇದು ಸಮಾಜಕ್ಕೆ ಮಾದರಿಯಾಗಬೇಕು. ಹೆಬ್ರಿ ಪೊಲೀಸರು ಕೂಡ ಸೋಮೇಶ್ವರದಿಂದ ಹೆಬ್ರಿಯ ಆಸ್ಪತ್ರೆಯ ತನಕ ಶೂನ್ಯ ಟ್ರಾಫಿಕ್ ವ್ಯವಸ್ಥೆ ಮಾಡಿ, ಯುವತಿಯ ಜೀವ ಉಳಿಸಲು ಸಹಕಾರ ನೀಡಿದ್ದಾರೆ’ ಎಂದು ಬಸ್ ಚಾಲಕ ತಾರೇಶ್ ಪ್ರತಿಕ್ರಿಯಿಸಿದರು.

ಸಾರ್ವಜನಿಕರಿಂದ ಪ್ರಶಂಸೆ

ಆಗುಂಬೆ ತಿರುವಿನಲ್ಲಿ ಹುಡುಗಿ ತೀವ್ರ ಅಸ್ವಸ್ಥಗೊಂಡರು. ಬಹಳಷ್ಟು ಮಹಿಳೆಯರಲ್ಲಿ ಸಹಾಯ ಮಾಡಲು ಬೇಡಿಕೊಂಡರೂ ಯಾರೂ ಮುಂದೆ ಬರಲಿಲ್ಲ. ಮುಸ್ಲಿಂ ಯುವತಿಯೊಬ್ಬಳು ಸಹಾಯ ಮಾಡಿ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪ್ರಯಾಣಿಕರ ಸಹಕಾರದೊಂದಿಗೆ ನೇರವಾಗಿ ಆಸ್ಪತ್ರೆಗೆ ಬಂದು ಜೀವವನ್ನು ಉಳಿಸಿದ್ದೇವೆ. ನಮ್ಮ ಕರ್ತವ್ಯಕ್ಕೆ ಬಹಳಷ್ಟು ಮಂದಿ ಕರೆ ಮಾಡಿ ಶ್ಲಾಘಿಸುತ್ತಿದ್ದಾರೆ ಎಂದು ಬಸ್ ನಿರ್ವಾಹಕ ವಾಸಿಂ ದೇಸಾಯಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.