ADVERTISEMENT

‘ಅರ್ಜಿಗಳನ್ನು ಅನಗತ್ಯವಾಗಿ ತಿರಸ್ಕರಿಸಬೇಡಿ’

‌ಜಿಲ್ಲಾ ಲೀಡ್‌ ಬ್ಯಾಂಕ್‌ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿ.ಪಂ. ಸಿಇಒ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 5:46 IST
Last Updated 26 ಜೂನ್ 2024, 5:46 IST
‌ಜಿಲ್ಲಾ ಲೀಡ್‌ ಬ್ಯಾಂಕ್‌ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್  ಮಾತನಾಡಿದರು
‌ಜಿಲ್ಲಾ ಲೀಡ್‌ ಬ್ಯಾಂಕ್‌ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್  ಮಾತನಾಡಿದರು   

ಉಡುಪಿ: ವಿವಿಧ ಯೋಜನೆಗಳ ಅಡಿಯಲ್ಲಿ ಸಾಲ ಪಡೆಯಲು ಸಲ್ಲಿಸುವ ಅರ್ಜಿಗಳನ್ನು ಅನಗತ್ಯವಾಗಿ ತಿರಸ್ಕರಿಸಬೇಡಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಅವರು ವಿವಿಧ ಬ್ಯಾಂಕ್‌ಗಳ ಪ್ರತಿನಿಧಿಗಳಿಗೆ ಸೂಚಿಸಿದರು.

ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾ ಪಂಚಾಯಿತಿಯ ಡಾ. ವಿ.ಎಸ್‌.ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಲೀಡ್‌ ಬ್ಯಾಂಕ್‌ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ನಮ್ಮ ಇಲಾಖೆಯಿಂದ ಶಿಫಾರಸು ಮಾಡುವ ಅರ್ಜಿಗಳು ಅನುಮೋದನೆಗೊಳ್ಳುತ್ತವೆಯೋ ಅಥವಾ ತಿರಸ್ಕೃತವಾಗುತ್ತಿವೆಯೊ ಎಂಬುದು ತಿಳಿಯುತ್ತಿಲ್ಲ. ಅರ್ಜಿಗಳನ್ನು ತಿರಸ್ಕರಿಸಿದರೆ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಿ ಎಂದೂ ಅವರು ಹೇಳಿದರು.

ADVERTISEMENT

ಅರ್ಜಿಗಳು ಯಾಕೆ ತಿರಸ್ಕೃತವಾಗುತ್ತಿವೆ ಎಂಬುದರ ಬಗ್ಗೆ ಬ್ಯಾಂಕ್‌ಗಳು ಪರಿಶೀಲನೆ ನಡೆಸಬೇಕು. ಮತ್ತು ಯಾವ ಕಾರಣಕ್ಕೆ ತಿರಸ್ಕರಿಸಲಾಗಿದೆ ಎಂಬ ಕಾರಣವನ್ನು ನೀಡಬೇಕು ಎಂದು ಸೂಚಿಸಿದ ಅವರು, ಅರ್ಜಿಗಳು ನಿಗದಿತ ಸಮಯದೊಳಗೆ ಯಾಕೆ ಅನುಮೋದನೆಗೊಳ್ಳುತ್ತಿಲ್ಲ ಎಂದೂ ಪ್ರಶ್ನಿಸಿದರು.

ಎನ್‌ಆರ್‌ಎಲ್‌ಎಂ ಯೋಜನೆಯ ಅಡಿ ಒಕ್ಕೂಟಗಳು ಠೇವಣಿ ಇರಿಸುವ ಹಣಕ್ಕೆ ಸೇವಾ ಶುಲ್ಕ ವಿಧಿಸುವಂತಿಲ್ಲ. ಆದರೆ ಹಲವು ಬ್ಯಾಂಕ್‌ಗಳು ಶೇವಾ ಶುಲ್ಕ ವಿಧಿಸಿವೆ. ಇದು ಸರಿಯಲ್ಲ. ಸೇವಾ ಶುಲ್ಕದ ಹೆಸರಿನಲ್ಲಿ ಕಡಿತ ಮಾಡಿರುವ ಹಣವನ್ನು ಶೀಘ್ರ ಮರಳಿ ನೀಡಬೇಕು. ಇಲ್ಲದಿದ್ದರೆ ಒಂಬುಡ್ಸಮನ್‌ಗೆ ದೂರು ಸಲ್ಲಿಸಲಾಗುವುದು ಎಂದು ಪ್ರತೀಕ್‌ ಬಾಯಲ್‌ ಅವರು ಬ್ಯಾಂಕ್‌ ಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದರು.

ಕಡಿತ ಮಾಡಿರುವ ಸೇವಾಶುಲ್ಕವನ್ನು ಮರಳಿ ನೀಡಿ ಎಂದರೂ ಕೆಲವು ಬ್ಯಾಂಕ್‌ಗಳು ಸ್ಪಂದಿಸಿಲ್ಲ. ಹೀಗಾದರೆ ಎನ್‌ಆರ್‌ಎಲ್‌ಎಂ ಯೋಜನೆಯ ಅಡಿ ವಿವಿಧ ಬ್ಯಾಂಕ್‌ಗಳಲ್ಲಿರಿಸಿರುವ ಹಣವನ್ನು ಬೇರೆ ಬ್ಯಾಂಕ್‌ಗಳಿಗೆ ವರ್ಗಾವಣೆ ಮಾಡಲಾಗುವುದು ಎಂದರು.

ಒಕ್ಕೂಟಗಳ ಖಾತೆಗಳಲ್ಲಿರುವ ಹಣವು ಸಮುದಾಯಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಬಳಸುವ ಹಣವಾಗಿದೆ. ಈ ಖಾತೆಗಳನ್ನು ಸರ್ಕಾರಿ ಖಾತೆಗಳ ವಿಭಾಗಕ್ಕೆ ಸೇರಿಸಬೇಕು ಎಂದೂ ಸಲಹೆ ನೀಡಿದರು.

ಸಾಲ ಠೇವಣಿ ಅನುಪಾತ ಏರಿಕೆ: ಈ ವರ್ಷ ಸಾಲ ಠೇವಣಿ ಅನುಪಾತವು 46.94ಕ್ಕೆ ಏರಿಕೆಯಾಗಿದೆ. 2022–23ನೇ ಸಾಲಿನಲ್ಲಿ ಇದು 46.06 ಆಗಿತ್ತು. ಸಾಲ ಠೇವಣಿ ಅನುಪಾತವು ಶೇ0.88 ರಷ್ಟು ಪ್ರಗತಿ ಸಾಧಿಸಿದೆ ಎಂದು ಕೆನರಾ ಬ್ಯಾಂಕ್‌ನ ಪ್ರಾದೇಶಿಕ ಮ್ಯಾನೇಜರ್ ಶೀಬಾ ಶೆಹಜಾನ್ ತಿಳಿಸಿದರು.

ಜಿಲ್ಲೆಯ ಸಾಲ ಠೇವಣಿ ಅನುಪಾತವು ಶೇ 50ಕ್ಕಿಂತ ಕಡಿಮೆ ಇದ್ದು, ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕೊನೆಯ ಸ್ಥಾನದಲ್ಲಿದೆ ಇದು ಕಳವಳಕಾರಿ ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ ಇದನ್ನು ಹೆಚ್ಚಳ ಮಾಡಲು ಎಲ್ಲಾ ಬ್ಯಾಂಕ್‌ಗಳ ಅಧಿಕಾರಿಗಳು ಕ್ರಿಯಾ ಯೋಜನೆಗಳನ್ನು ರೂಪಿಬೇಕು ಎಂದೂ ಸಲಹೆ ನೀಡಿದರು.‌

ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಬ್ಯಾಂಕ್‌ಗಳು 679 ಅರ್ಜಿಗಳಿಗೆ ₹50.53 ಕೋಟಿ ಸಾಲ ಮಂಜೂರು ಮಾಡಿವೆ. 595 ಅರ್ಜಿದಾರರಿಗೆ ₹39.98 ಕೋಟಿ ವಿತರಿಸಲಾಗಿದೆ. ದುರ್ಬಲ ವರ್ಗದವರಿಗೆ ಬ್ಯಾಂಕ್‌ಗಳು ₹1793 ಕೋಟಿ ಸಾಲ ವಿತರಿಸಿದೆ. ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ₹158.72 ಕೋಟಿ ಹಾಗೂ ಗೃಹ ವಲಯಕ್ಕೆ ₹1078 ಕೋಟಿ ಸಾಲ ವಿತರಿಸಲಾಗಿದೆ ಎಂದು ವಿವರಿಸಿದರು.

ಆರ್.ಬಿ.ಐ ನ ಎಕ್ಸಿಕ್ಯುಟಿವ್ ಈಲ್ಲಾ ಸಾಹು, ನಬಾರ್ಡ್‍ನ ಡಿಡಿಎಂ ರಮೇಶ್‌, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್‌ನ ಸಹಾಯಕ ಉಪ ಪ್ರಬಂಧಕ ನಿತ್ಯಾನಂದ ಶೇರಿಗಾರ್ ಇದ್ದರು.

ಬ್ಯಾಂಕ್‌ ಪ್ರತಿನಿಧಿಗಳ ಗೈರು:

ಸಿಇಒ ಗರಂ ಜಿಲ್ಲಾ ಲೀಡ್‌ ಬ್ಯಾಂಕ್‌ ಪ್ರಗತಿ ಪರಿಶೀಲನಾ ಸಭೆಗೆ ವಿವಿಧ ಬ್ಯಾಂಕ್‌ಗಳ ಪ್ರತಿನಿಧಿಗಳು ಗೈರು ಹಾಜರಾಗಿದ್ದಕ್ಕೆ ಪ್ರತೀಕ್‌ ಬಾಯಲ್‌ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಬ್ಯಾಂಕ್‌ಗಳ ಪ್ರಾದೇಶಿಕ ಮಟ್ಟದ ಪ್ರತಿನಿಧಿಗಳು ಭಾಗವಹಿಸದಿರುವ ವಿಚಾರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಬ್ಯಾಂಕ್‌ ಪ್ರತಿನಿಧಿಗಳಲ್ಲಿ ಸಮಸ್ಯೆಗಳ ಕುರಿತು ಮಾತನಾಡಲು ಸೂಚಿಸಿದಾಗ ಬ್ಯಾಂಕೊಂದರ ಪ್ರತಿನಿಧಿಯೊಬ್ಬರು ನಾನು ಎರಡು ತಿಂಗಳ ಹಿಂದಷ್ಟೇ ಬಂದಿದ್ದಾನೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ ಎಂದರು. ಆಗ ಬಾಯಲ್‌ ಅವರು ಯಾವುದೇ ಸಭೆಗೆ ಬರುವಾಗ ವಿಷಯದ ಬಗ್ಗೆ ಅರಿತುಕೊಂಡು ಬರಬೇಕು. ಸಾಬೂಬು ನೀಡಬಾರದು ಎಂದು ಗದರಿದರು. ಮೀನುಗಾರಿಕಾ ಇಲಾಖೆಯ ಪ್ರತಿನಿಧಿ ಭಾಗವಹಿಸದಿದ್ದುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.