ADVERTISEMENT

ಪೇಜಾವರ ಶ್ರೀಗಳ ಕೈಂಕರ್ಯ ನಿರಂತರವಾಗಿರಲಿ

ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಂದ ವಿಶ್ವೇಶತೀರ್ಥ ಶ್ರೀಗಳಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2018, 13:25 IST
Last Updated 27 ಡಿಸೆಂಬರ್ 2018, 13:25 IST
ಪೇಜಾವರ ಶ್ರೀಗಳನ್ನು ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಶಾಲು ಹೊದಿಸಿ ಸನ್ಮಾನಿಸಿದರು.
ಪೇಜಾವರ ಶ್ರೀಗಳನ್ನು ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಶಾಲು ಹೊದಿಸಿ ಸನ್ಮಾನಿಸಿದರು.   

ಉಡುಪಿ: ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಸನ್ಯಾಸ ಸ್ವೀಕರಿಸಿ 80 ವಸಂತಗಳು ತುಂಬಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಸೋಮವಾರ ಪೇಜಾವರ ಶ್ರೀಗಳಿಗೆ ಅಭಿನಂದನೆ ಸಲ್ಲಿಸಿದರು.

ಮಂಗಳೂರು ವಿಮಾನ ನಿಲ್ದಾಣದ ಮೂಲಕ ಆದಿ ಉಡುಪಿ ಹೆಲಿಪ್ಯಾಡ್‌ಗೆ ಬಂದಿಳಿದ ರಾಷ್ಟ್ರಪತಿಗಳು, 11.45ಕ್ಕೆ ಪೇಜಾವರ ಮಠಕ್ಕೆ ಬಂದರು. ಈ ಸಂದರ್ಭ ಪೂರ್ಣಕುಂಭ ಸ್ವಾಗತ ಹಾಗೂ ವಾದ್ಯಘೋಷಗಳೊಂದಿಗೆ ರಾಷ್ಟ್ರಪತಿಗಳನ್ನು ಮಠದ ದಿವಾನರಾದ ರಘುರಾಮ ಆಚಾರ್ಯ ಬರಮಾಡಿಕೊಂಡರು.

ಮಠದಲ್ಲಿ ಪೇಜಾವರ ಶ್ರೀಗಳನ್ನು ಭೇಟಿಮಾಡಿದ ರಾಷ್ಟ್ರಪತಿಗಳು ಕೆಲಹೊತ್ತು ಉಭಯ ಕುಶಲೋಪರಿ ನಡೆಸಿದರು. ನಂತರ ಪೇಜಾವರ ಮಠದ ಮೂಲದೇವರು ವಿಜಯ ವಿಠ್ಠಲನಿಗೆ ಪೂಜೆ ಸಲ್ಲಿಸಿದರು. ಬಳಿಕ ಪೇಜಾವರ ಶ್ರೀಗಳು ಮಠದ ಇತಿಹಾಸ, ಪೂಜಾ ವಿಧಿವಿಧಾನಗಳನ್ನು ವಿವರಿಸಿದರು.

ADVERTISEMENT

ಬಳಿಕ ರಾಷ್ಟ್ರಪತಿಗಳು ಪೇಜಾವರ ಶ್ರೀಗಳಿಗೆ ಶಾಲುಹೊದಿಸಿ ಅಭಿನಂದನೆ ಸಲ್ಲಿಸಿದರು. ಇದಕ್ಕೆ ಪ್ರತಿಯಾಗಿ ಪೇಜಾವರ ಶ್ರೀಗಳು ರಾಷ್ಟ್ರಪತಿಗಳಿಗೆ ಯಕ್ಷಗಾನ ಮುಂಡಾಸು ತೊಡಿಸಿ ಸಂಭ್ರಮಿಸಿದರು. ಜತೆಗೆ, ಶ್ರೀಕೃಷ್ಣನ ಸುಂದರ ಮೂರ್ತಿ ಒಳಗೊಂಡ ಸಾಂಪ್ರದಾಯಿಕ ಅಟ್ಟೆ ಪ್ರಭಾವಳಿ ಹಾಗೂ ಸ್ವರಚಿತ ಕೃತಿಗಳ ಮಾಲಿಕೆಯನ್ನು ನೀಡಿ ಗೌರವಿಸಿದರು.

ಈ ಸಂದರ್ಭ ಮಾತನಾಡಿದ ರಾಷ್ಟ್ರಪತಿಗಳು, ಉಡುಪಿಯ ಶ್ರೀಕೃಷ್ಣಮಠಕ್ಕೆ ಭೇಟಿನೀಡಬೇಕು ಎಂಬ ಬಯಕೆ ಈಡೇರಿದೆ. ಪೇಜಾವರ ಶ್ರೀಗಳ ಬಗ್ಗೆ ಕೇಂದ್ರ ಸಚಿವೆ ಉಮಾಭಾರತಿ ಹಲವು ವಿಚಾರಗಳನ್ನು ಹೇಳಿದ್ದಾರೆ. ಇಳಿ ವಯಸ್ಸಿನಲ್ಲೂ ಶ್ರೀಗಳು ಚೈತನ್ಯದಿಂದ ಓಡಾಡುವುದನ್ನು ಕಂಡರೆ ಆಶ್ಚರ್ಯ ಉಂಟಾಗುತ್ತದೆ. ಶ್ರೀಗಳ ಧಾರ್ಮಿಕ ಕೈಂಕರ್ಯ ನಿರಂತರವಾಗಿರಲಿ ಎಂದು ಆಶಿಸಿದರು.

ಈ ಸಂದರ್ಭ ಪೇಜಾವರ ಶ್ರೀಗಳ ಕುರಿತು ಶೇಷಗಿರಿ ಎಂಬುವರು ಸಿದ್ಧಪಡಿಸಿದ್ದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

ಸುಮಾರು ಅರ್ಧತಾಸು ಪೇಜಾವರ ಮಠದಲ್ಲಿದ್ದ ರಾಷ್ಟ್ರಪತಿಗಳು 12.20ಕ್ಕೆ ಕೃಷ್ಣಮಠಕ್ಕೆ ತೆರಳಿದರು. ಪಲಿಮಾರು ವಿದ್ಯಾಧೀಶ ಶ್ರೀಗಳು ಸ್ವಾಗತ ಕೋರಿದರು. ಶ್ರೀಕೃಷ್ಣನ ದರ್ಶನ ಪಡೆದ ಬಳಿಕ ಮಾತನಾಡಿದ ರಾಷ್ಟ್ರಪತಿಗಳು ‘ಪರಮಾತ್ಮ ಸೃಷ್ಟಿಸಿದ ಜೀವಿಗಳಲ್ಲಿ ಮಾನವ ಅತ್ಯುತ್ತಮ ಸೃಷ್ಟಿ. ಮನುಷ್ಯ ಮನುಷ್ಯರ ಮಧ್ಯೆ ಪ್ರೀತಿ ಪ್ರೇಮದ ಬೆಸುಗೆ ಇಂದಿನ ಅವಶ್ಯ ಎಂದರು.‌

ದೇವರನ್ನು ಹಲವು ನಾಮಗಳಿಂದ ಕರೆಯಲ್ಪಡುತ್ತಿದದರೂ ಸ್ವರೂಪ ಒಂದೇ ಆಗಿದೆ. ದೇಶದಲ್ಲಿ ರಾಮರಾಜ್ಯ ಸ್ಥಾಪನೆಯಾಗಬೇಕು. ಪ್ರಜೆಗಳೊಂದಿಗೆ ಯಾವ ರೀತಿ ವ್ಯವಹರಿಸಬೇಕು, ಆಡಳಿತ ನಡೆಸಬೇಕು ಎಂಬುದಕ್ಕೆ ರಾಮರಾಜ್ಯ ನಿದರ್ಶನ. ರಾಮರಾಜ್ಯದ ಆದರ್ಶವನ್ನು ಪಾಲಿಸಿದರೆ ಜಗತ್ತು ಸುಖಿಯಾಗಿರಲಿದೆ ಎಂದರು.

ಈ ಸಂದರ್ಭ ಪಲಿಮಾರು ಮಠದಿಂದ ರಾಷ್ಟ್ರಪತಿಗಳನ್ನು ಗೌರವಿಸಲಾಯಿತು.ರಾಷ್ಟ್ರಪತಿ ಪತ್ನಿಸವಿತಾ ಕೋವಿಂದ್, ರಾಜ್ಯಪಾಲ ವಜೂಬಾಯಿ ವಾಲಾ, ನಾಗಾಲ್ಯಾಂಡ್ ರಾಜ್ಯಪಾಲ ಪದ್ಮನಾಭ ಆಚಾರ್ಯ, ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಯಶವಂತ್, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್, ಎಡಿಜಿಪಿ ಕಮಲಪಂಥ್, ಐಜಿಪಿ ಅರುಣ್ ಚಕ್ರವರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಉಪಸ್ಥಿತರಿದ್ದರು.

ಬಿಕೋ ಎನ್ನುತ್ತಿದ್ದ ರಥಬೀದಿ

ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ಶ್ರೀಕೃಷ್ಣಮಠದ ಸುತ್ತಲೂ ಖಾಕಿ ಕಣ್ಗಾವಲು ಹಾಕಲಾಗಿತ್ತು. ಮಠ ಪ್ರವೇಶಿಸುವ ಎಲ್ಲ ಅಡ್ಡರಸ್ತೆಗಳನ್ನು ಬ್ಯಾರಿಕೇಡ್‌ ಹಾಕಿ ಮುಚ್ಚಲಾಗಿತ್ತು. ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಇಡೀ ರಥಬೀದಿ ಪರಿಸರ ಬಿಕೋ ಎನ್ನುತ್ತಿತ್ತು. ಅಂಗಡಿ ಮುಂಗಟ್ಟು, ಹೋಟೆಲ್‌ಗಳು, ಮಳಿಗೆಗಳು ಮುಚ್ಚಿದ್ದವು. ರಥಬೀದಿಯ ಸುತ್ತಲೂ ಹಸಿರು ಹಾಗೂ ಕೆಂಪು ಕಾರ್ಪೆಟ್‌ ಹಾಕಲಾಗಿತ್ತು.

ಝೀರೋ ಟ್ರಾಫಿಕ್‌: ಸಾರ್ವಜನಿಕರಿಗೆ ಕಿರಿಕಿರಿ

ಮಂಗಳೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಆದಿ ಉಡುಪಿ ಹೆಲಿಪ್ಯಾಡ್‌ಗೆ ಬಂದಿಳಿದ ರಾಷ್ಟ್ರಪತಿಗಳಿಗೆ ರಾಜ್ಯಪಾಲ ವಜುಭಾಯ್‌ ವಾಲಾ, ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ದಿನಕರ ಬಾಬು ಸ್ವಾಗತ ಕೋರಿದರು.

ಬಳಿಕ ರಸ್ತೆ ಮಾರ್ಗವಾಗಿ ರಾಷ್ಟ್ರಪತಿಗಳನ್ನು ಪೇಜಾವರ ಮಠಕ್ಕೆ ಕರೆತರಲಾಯಿತು. ಈ ಸಂದರ್ಭ ಮುಖ್ಯರಸ್ತೆಯನ್ನು ಝೀರೋ ಟ್ರಾಫಿಕ್‌ ಮಾಡಲಾಗಿತ್ತು. ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಅಡ್ಡರಸ್ತೆಗಳನ್ನು ಬಂದ್ ಮಾಡಲಾಗಿತ್ತು. ರಸ್ತೆಯುದ್ದಕ್ಕೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಬೆಳಿಗ್ಗಿಯಿಂದ ಮಧ್ಯಾಹ್ನ 1ಗಂಟೆಯ ರವರೆಗೂ ಮುಖ್ಯರಸ್ತೆಯನ್ನು ಬಂದ್‌ ಮಾಡಿದ್ದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು. ಕಚೇರಿಗೆ ಹೋಗಬೇಕಿದ್ದವರು ಪೊಲೀಸ್ ಇಲಾಖೆಯನ್ನು ಶಪಿಸುತ್ತಲೇ ಸುತ್ತಿಬಳಸಿ ಹೋಗಬೇಕಾಯಿತು.

ಜನರತ್ತ ಕೈಬೀಸಿದ ರಾಷ್ಟ್ರಪತಿ

ಹೆಲಿಪ್ಯಾಡ್‌ನಿಂದ ರಸ್ತೆ ಮಾರ್ಗವಾಗಿ ರಾಷ್ಟ್ರಪತಿಗಳನ್ನು ಕರೆತರುವಾಗ 25ಕ್ಕೂ ಹೆಚ್ಚು ವಾಹನಗಳು ಒಂದಾದ ಮೇಲೋಂದರಂತೆ ರಸ್ತೆಯಲ್ಲಿ ಸಾಗುತ್ತಿರುವುದನ್ನು ಸಾರ್ವಜನಿಕರು ಕೂತೂಹಲದಿಂದ ವೀಕ್ಷಿಸಿದರು. ಈ ಸಂದರ್ಭ ಜನರತ್ತ ರಾಷ್ಟ್ರಪತಿಗಳು ಕೈಬೀಸಿದರು. ಹಲವರು ಫೋಟೊ ಈ ದೃಶ್ಯಗಳನ್ನು ಮೊಬೈಲ್‌ಗಳಲ್ಲಿ ಸೆರೆ ಹಿಡಿದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.