ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿವಾದವನ್ನು ನ್ಯಾಯಾಂಗದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಬೇಕು ಎಂಬುದು ಜನರ ಅಭಿಲಾಷೆಯಾಗಿತ್ತು. ಅದರಂತೆ ಸುಪ್ರೀಂಕೋರ್ಟ್ ಕೂಡ ಸಂಧಾನದ ಮೂಲಕ ವಿವಾದ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಿರುವುದು ಸ್ವಾಗತಾರ್ಹ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, ಆಧ್ಯಾತ್ಮಗುರು ರವಿಶಂಕರ್ ಗುರೂಜಿ ಸೇರಿದಂತೆ ಹಲವು ತಜ್ಞರನ್ನೊಳಗೊಂಡ ಸಮಿತಿ ರಚಿಸಿ 8 ವಾರಗಳೊಳಗೆ ವರದಿ ನೀಡುವಂತೆ ನ್ಯಾಯಾಲಯ ಸಲಹೆ ನೀಡಿರುವುದು ಸಂತಸ ತಂದಿದೆ. ರಾಮಜನ್ಮಭೂಮಿ ನಿರ್ಮಾಣಕ್ಕೆ ಪೂರಕವಾದ ವರದಿ ಹೊರಬರಲಿದೆ ಎಂದು ಕೋಟ ವಿಶ್ವಾಸ ವ್ಯಕ್ತಪಡಿಸಿದರು.
ರೇವಣ್ಣ ಕ್ಷಮೆ ಕೇಳಲಿ:ಕರ್ನಾಟಕದ ಸೂಪರ್ ಸಿಎಂ ಎಂದು ಕರೆಸಿಕೊಳ್ಳುವ ಸಚಿವ ಎಚ್.ಡಿ.ರೇವಣ್ಣ ಸುಮಲತಾ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದು ನೋವು ತಂದಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ರೇವಣ್ಣ ಕೂಡಲೇ ಸುಮಲತಾ ವಿರುದ್ಧ ಆಡಿರುವ ಮಾತುಗಳನ್ನು ಹಿಂಪಡೆಯಬೇಕು ಹಾಗೂ ವಿಷಾದ ವ್ಯಕ್ತಪಡಿಸಬೇಕು ಎಂದು ಕೋಟ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.