ಪಲಿಮಾರು (ಪಡುಬಿದ್ರಿ): ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲ್ಲೂಕು ಘಟಕದ 6ನೆಯ ಕನ್ನಡ ಸಾಹಿತ್ಯ ಸಮ್ಮೇಳನ ‘ನೆಲದುಲಿ’ ನ.16ರಂದು ಪಲಿಮಾರಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಕೊರಗ ಭಾಷಾ ತಜ್ಞ, ಸಾಹಿತಿ ಪಾಂಗಾಳ ಬಾಬು ಕೊರಗ ಅಧ್ಯಕ್ಷತೆ ವಹಿಸುವರು.
ಬೆಳಿಗ್ಗೆ 8 ಗಂಟೆಗೆ ಉಡುಪಿ ಪಲಿಮಾರು ಮಠಾಧೀಶ ವಿದ್ಯಾಧೀಶತೀರ್ಥ ಶ್ರೀಪಾದರು ಸಮ್ಮೇಳನ ಅಧ್ಯಕ್ಷರ ಸ್ವಾಗತ ಹಾಗೂ ಕನ್ನಡ ಮಾತೆ ಭುವನೇಶ್ವರಿ ದೇವಿಯ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ. ಬಳಿಕ ಅಸ್ತಪಡ್ಪು ಮೈದಾನದಿಂದ ಸಮ್ಮೇಳನ ಸಭಾಂಗಣದವರೆಗೆ ಪುರ ಮೆರವಣಿಗೆ ನಡೆಯಲಿದೆ. 8.45ಕ್ಕೆ ಪಲಿಮಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ರಾಷ್ಟ್ರ ಧ್ವಜಾರೋಹಣ, ತಾಲ್ಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಪರಿಷತ್ತು ಧ್ವಜಾರೋಹಣ ನೆರವೇರಿಸುವರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಪಾಂಬೂರು ಪಡುಬೆಳ್ಳೆ ನವೋದಯ ಕೊರಗರ ಸಾಂಸ್ಕೃತಿಕ ಕಲಾ ತಂಡದವರಿಂದ ಕಲಾ ಪ್ರಸ್ತುತಿ ಜರುಗಲಿದೆ.
9.30ಕ್ಕೆ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಸಮ್ಮೇಳನ ಉದ್ಘಾಟಿಸುವರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ಮಾತನಾಡುವರು. ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. 11.15ಕ್ಕೆ ಗಣೇಶ್ ಗಂಗೊಳ್ಳಿ ಮತ್ತು ತಂಡದಿಂದ ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ.
ಜನಜೀವನ, ಪರಿಸರ, ಸಂಘಟನೆ, ಮಾಧ್ಯಮ, ಶಿಷ್ಟ ಸಾಹಿತ್ಯ, ಮೀನುಗಾರಿಕೆ; ಬದುಕು-ವೃತ್ತಿ ವಿಷಯಗಳ ಬಗ್ಗೆ ಶೇಖರ ಹೆಜಮಾಡಿ, ಹಮೀದ್ ಪಡುಬಿದ್ರಿ, ಪ್ರಜ್ಞಾ ಮಾರ್ಪಳ್ಳಿ, ವಿ.ಕೆ. ಯಾದವ್ ಹೆಜಮಾಡಿ ವಿಚಾರ ಮಂಡನೆ ಮಾಡಲಿದ್ದಾರೆ.
ಮಧ್ಯಾಹ್ನ 12.30ಕ್ಕೆ ‘ಬೆಳೆವ ಸಿರಿ’ ಕನ್ನಡ ಕಥಾಕಾವ್ಯ ಪ್ರೇರಣೆ- ವಿದ್ಯಾರ್ಥಿ ಕೇಂದ್ರಿತ ಗೋಷ್ಠಿಯಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಕೆ.ಎಸ್. ಶ್ರೀಧರ ಮೂರ್ತಿ ಮತ್ತು ಪ್ರಾಧ್ಯಾಪಕಿ ಕಾತ್ಯಾಯನಿ ಕುಂಜಿಬೆಟ್ಟು ವಿಷಯ ಮಂಡಿಸುವರು.
‘ಕುಂಭ ಕಲೆಯಲ್ಲಿ ಕರಾವಳಿ ಸೊಗಡು’ ಉಪಗೋಷ್ಠಿಯಲ್ಲಿ ಕಲಾವಿದ ವೆಂಕಿ ಪಲಿಮಾರು ಅವರೊಂದಿಗೆ ಮಾತುಕತೆ , ಚಿತ್ರಕಲಾ ಶಿಕ್ಷಕರಾದ ಎಚ್. ನರೇಂದ್ರ, ಶ್ರೀಧರ ಪಲಿಮಾರು ವಿಷಯ ಮಂಡಿಸಲಿದ್ದಾರೆ. ವೆಂಕಿ ಪಲಿಮಾರು ಅವರು ರಚಿಸಿದ ಕಲಾಕೃತಿಗಳ ಪ್ರದರ್ಶನ ನಡೆಯಲಿದೆ.
ಮಧ್ಯಾಹ್ನ 2.30ಕ್ಕೆ ‘ನೆಲದುಲಿಯ ಅಭಿವ್ಯಕ್ತಿ’ ಉಪಗೋಷ್ಠಿಯಲ್ಲಿ ಪೂರ್ವ ಸಮ್ಮೇಳನಾಧ್ಯಕ್ಷ ಕೆ.ಎಲ್. ಕುಂಡಂತಾಯ, ಸಮ್ಮೇಳನಾಧ್ಯಕ್ಷ ಪಾಂಗಾಳ ಬಾಬು ಕೊರಗ ಅವರೊಂದಿಗೆ ಸಂವಾದ ನಡೆಸಿಕೊಡಲಿದ್ದಾರೆ.
ಸಂಜೆ 3 ಗಂಟೆಗೆ ಕಸಾಪ ಕಾಪು ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯ ಕೃಷ್ಣಕುಮಾರ್ ರಾವ್ ಮಟ್ಟು ಹಾಗೂ ಜಿಲ್ಲಾ ಕೃಷಿಕರ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮ ಅವರಿಂದ 6ನೇ ಸಮ್ಮೇಳನದ ನಿರ್ಣಯ ಮಂಡನೆಯಾಗಲಿದೆ.
3.15ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಾಹಿತಿ ವಾಸುದೇವ ಬೆಳ್ಳೆ ಸಮಾರೋಪ ಭಾಷಣ ಮಾಡುವರು. ಕಾಪು ತಹಶೀಲ್ದಾರ್ ಪ್ರತಿಭಾ ಆರ್ ಅಭಿನಂದನಾ ಮಾತನಾಡುವರು. ಅದಾನಿ ಪವರ್ ಕಾರ್ಪೊರೇಷನ್ ಅಧ್ಯಕ್ಷ ಕಿಶೋರ್ ಆಳ್ವ ಸಾಧಕರನ್ನು ಸನ್ಮಾನಿಸಲಿದ್ದಾರೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಮುಖರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.