ಶಿರ್ವ: ಇಲ್ಲಿನ ಶಂಕರಪುರ ವಿಶ್ವಾಸದ ಮನೆ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದಲ್ಲಿ ಆರೈಕೆ ಪಡೆಯುತ್ತಿದ್ದ ಮಹಾರಾಷ್ಟ್ರದ ವಿಮಲಾ ಮಾನೆ ಎಂಬ ಮಹಿಳೆ 14 ವರ್ಷದ ಬಳಿಕ ತಮ್ಮ ಕುಟುಂಬ ಸೇರಿಕೊಂಡಿದ್ದಾರೆ.
ವಿಮಲಾ ಮಾನೆ ಅವರು 2012 ಅಕ್ಟೋಬರ್‌ನಲ್ಲಿ ಉಡುಪಿ ಸಮೀಪದ ರಸ್ತೆಯಲ್ಲಿ ದಿಕ್ಕಿಲ್ಲದೆ ಅಲೆದಾಡುತ್ತಿದ್ದಾಗ ಶಂಕರಪುರದ ವಿಶ್ವಾಸದ ಮನೆಯ ಕಾರ್ಯಕರ್ತರು ಅವರನ್ನು ತಮ್ಮ ಅನಾಥಾಶ್ರಮಕ್ಕೆ ಕರೆದುಕೊಂಡು ಹೋಗಿ ಉಪಚರಿಸಿದ್ದರು. ಆದರೆ, ಭಾಷೆ ಅರ್ಥವಾಗದ ಕಾರಣ ವಿಳಾಸ ಪತ್ತೆ ಮಾಡುವುದು ಕಷ್ಟವಾಗಿತ್ತು.
ದಿನಕಳೆದಂತೆ ವಿಶ್ವಾಸದ ಮನೆಯವರ ಆರೈಕೆಯಿಂದಾಗಿ ವಿಮಲಾ ಅವರು ಆಶ್ರಮದಲ್ಲಿ ಸಾಮಾನ್ಯರಂತೆ ಇದ್ದರು. ಮಣಿಪಾಲ ಕೆಎಂಸಿ ಆಸ್ಪತ್ರೆಯ ಮನೋರೋಗ ತಜ್ಞ ಡಾ.ರಿಷಿಕೇಶ್ ಅವರು ಆಶ್ರಮಕ್ಕೆ ಭೇಟಿ ಕೊಟ್ಟಾಗ, ವಿಮಲಾ ಅವರ ಜೊತೆ ಅವರ ಭಾಷೆಯಲ್ಲಿ ಮಾತನಾಡಿ, ಅವರ ಊರಿನ ವಿಳಾಸ ಪತ್ತೆಹಚ್ಚುವಲ್ಲಿ ಸಫಲರಾದರು. ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಮಸ್ವಾಡ್ ಹಳ್ಳಿಯಲ್ಲಿರುವ ವಿಮಲಾ ಕುಟುಂಬಸ್ಥರಿಗೆ ವಿಷಯ ಮುಟ್ಟಿಸಿದರು. ವಿಮಲಾ ಅವರ ಮಗ, ಇಬ್ಬರು ತಂಗಿಯರು ಅನಾಥಾಶ್ರಮಕ್ಕೆ ಬಂದು ಕರೆದುಕೊಂಡು ಹೋಗಿದ್ದಾರೆ.
ವಿಮಲಾ ಅವರಿಗೆ ಗಂಡ, ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ. ತಾಯಿ ಇಲ್ಲದೆ ಕೊರಗಿದ್ದ ಅವರಿಗೆ ತಮ್ಮ ತಾಯಿ ಸಿಕ್ಕ ಖುಷಿ ಮುಗಿಲುಮುಟ್ಟಿತ್ತು ಎಂದು ವಿಶ್ವಾಸದ ಮನೆಯ ಸಂಸ್ಥಾಪಕ ಸುನಿಲ್ ಡಿಸೋಜಾ ಹೇಳಿದರು. ಪಾಸ್ಟರ್ ಸುನಿಲ್ ಜಾನ್ ಡಿಸೋಜ ಅವರಿಂದ ಶುರುವಾದ ಈ ವಿಶ್ವಾಸದ ಮನೆ ಅನಾಥಾಶ್ರಮ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ.
2010ರಲ್ಲಿ ಕಾಣೆಯಾಗಿದ್ದ ವಿಮಲಾ
ಮಹಾರಾಷ್ಟದ ಸಾತಾರಾ ಜಿಲ್ಲೆಯ ಮಸ್ವಾಡ್ ಹಳ್ಳಿಯಲ್ಲಿ 2010 ರಲ್ಲಿ ರಾತ್ರಿ ವೇಳೆ ವಿಮಲಾ ಅವರು ತಮ್ಮ ಮನೆಯಿಂದ ಕಾಣೆಯಾಗಿದ್ದರು. ಆ ವೇಳೆಗೆ ಅವರಿಗೆ ಮಾನಸಿಕ ಅಸ್ವಸ್ಥತೆ ತುಸು ಕಾಡುತ್ತಿತ್ತು. ಮನೆಯವರು ಎಲ್ಲಾ ಕಡೆ ಹುಡುಕಿ, ಪೊಲೀಸರಿಗೆ ದೂರು ನೀಡಿದ್ದರು. ಇಷ್ಟು ವರ್ಷವಾದರೂ ಸಿಗದ ಕಾರಣ ಅವರು ಮೃತಪಟ್ಟಿರಬಹುದು ಎಂದು ಕುಟುಂಬದವರು ತಿಳಿದುಕೊಂಡಿದ್ದರಂತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.