ಉಡುಪಿ: ಕಾಡಂಚಿನಲ್ಲಿ ಬದುಕು ಕಟ್ಟಿಕೊಂಡಿರುವ ಮಲೆಕುಡಿಯ ಸಮುದಾಯದವರು ಜೀವನಕ್ಕಾಗಿ ತಲೆತಲಾಂತರದಿಂದ ಕಿರು ಅರಣ್ಯ ಉತ್ಪತ್ತಿ ಸಂಗ್ರಹಣೆಯನ್ನು ಆಶ್ರಯಿಸಿದವರಾದರೂ ಅವರ ಶ್ರಮದ ಲಾಭ ವ್ಯಾಪಾರಿಗಳ ಪಾಲಾಗುತ್ತಿದೆ.
ರಾಮಪತ್ರೆ, ದಾಲ್ಚಿನಿ, ಮಂತುಹುಳಿ, ಕರಿಮೆಣಸು, ಜೇನು ಮೊದಲಾದವುಗಳನ್ನು ಸಂಗ್ರಹಿಸಬೇಕಾದರೆ ಮಲೆಕುಡಿಯರು ಬಹಳ ಶ್ರಮ ವಹಿಸಬೇಕಾಗುತ್ತದೆ. ಎತ್ತರದ ಮರಗಳಿಗೆ ಹತ್ತಿ ಜೀವ ಪಣಕ್ಕಿಟ್ಟು ಸಂಗ್ರಹಿಸುವ ಈ ಉತ್ಪನ್ನಗಳನ್ನು ಸ್ಥಳೀಯ ವ್ಯಾಪಾರಿಗಳಿಗೆ ಮಾರಿದರೆ ಅರ್ಧಕ್ಕರ್ಧ ಬೆಲೆ ಮಾತ್ರ ಸಿಗುತ್ತಿದೆ ಎಂಬುದು ಅವರ ಅಳಲು.
ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ನಡೆದ ಹೆಬ್ರಿ ತಾಲ್ಲೂಕಿನ ನಾಡ್ಪಾಲು ಗ್ರಾಮದ ಪೀತುಬೈಲು ಪರಿಸರದಲ್ಲಿ ವಾಸಿಸುವ ಮಲೆಕುಡಿಯ ಸಮುದಾಯದವರಲ್ಲಿ ಈಗಲೂ ಕೆಲವರು ಕಿರು ಅರಣ್ಯ ಉತ್ತತ್ತಿಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಜೀವನ ನಿರ್ವಹಣೆ, ಮಕ್ಕಳ ಶಿಕ್ಷಣ ಸೇರಿದಂತೆ ಎಲ್ಲದಕ್ಕೂ ಈ ಸಮುದಾಯದವರು ಅರಣ್ಯ ಉತ್ಪನ್ನಗಳನ್ನು ಆಶ್ರಯಿಸಿದ್ದರು. ಕೆಲವರು ಬುಟ್ಟಿ ಹೆಣೆಯುವ ಕಾಯಕವನ್ನೂ ನಡೆಸುತ್ತಿದ್ದರು. ಇತ್ತೀಚೆಗೆ ಕೆಲವರಷ್ಟೇ ಅಲ್ಪ ಸ್ವಲ್ಪ ಕೃಷಿಯ ಕಡೆಗೆ ಹೊರಳಿದ್ದಾರೆ.
‘ಹಿಂದೆ ಮಧ್ಯವರ್ತಿಗಳು ಮನೆ ಮನೆಗೆ ಬಂದು ಕಾಡುತ್ಪನ್ನಗಳನ್ನು ಸಂಗ್ರಹಿಸಿ ಹೋಗುತ್ತಿದ್ದರು, ಆಗ ಕಡಿಮೆ ದರ ಕೊಡುತ್ತಿದ್ದರು. ಅನಂತರ ನಾವೇ ವ್ಯಾಪಾರಿಗಳಿಗೆ ನೇರವಾಗಿ ಮಾರಾಟ ಮಾಡಲು ಆರಂಭಿಸಿದೆವು ಆದರೂ ನ್ಯಾಯಯುತ ಬೆಲೆ ನಮಗೆ ಸಿಗುತ್ತಿಲ್ಲ’ ಎಂದು ಈ ಸಮುದಾಯದ ಕೆಲವು ಹಿರಿಯರು ಅಳಲು ತೋಡಿಕೊಳ್ಳುತ್ತಾರೆ.
ಮಲೆಕುಡಿಯರಲ್ಲಿ ಕಾಡಂಚಿನಲ್ಲಿ ವಾಸಿಸುವವರು ಮಾತ್ರ ಈಗ ಕಾಡುತ್ಪತ್ತಿ ಸಂಗ್ರಹಿಸುವ ಕಾಯಕ ನಡೆಸುತ್ತಿದ್ದಾರೆ. ಉಳಿದಂತೆ ಹೆಬ್ರಿ ಪರಿಸರದಲ್ಲಿ ವಾಸಿಸುವ ಹೆಚ್ಚಿನವರು ಅಡಿಕೆ ತೋಟದ ಕೆಲಸವನ್ನೇ ನೆಚ್ಚಿಕೊಂಡಿದ್ದಾರೆ. ಈ ಕೆಲಸಕ್ಕಾಗಿ ದಿನನಿತ್ಯ ಆರೇಳು ಕಿ.ಮೀ. ನಡೆದು ಹೋಗುವವರೂ ಕಬ್ಬಿನಾಲೆ ಪ್ರದೇಶದಲ್ಲಿದ್ದಾರೆ.
‘ನಕ್ಸಲರ ವಿಚಾರ ಬಂದಾಗ ಮಾತ್ರ ನಮ್ಮ ಸಂಕಷ್ಟಗಳ ಬಗ್ಗೆ ಚರ್ಚೆಯಾಗುತ್ತದೆ. ಬಳಿಕ ಎಲ್ಲರೂ ನಮ್ಮನ್ನು ಮರೆತು ಬಿಡುತ್ತಾರೆ. ನಮ್ಮ ಯಾವುದೇ ಬೇಡಿಕೆ ಈಡೇರಿಕೆಯಾಗಿಲ್ಲ’ ಎನ್ನುತ್ತಾರೆ ಕುಚ್ಚೂರು ನಿವಾಸಿ ಲಕ್ಷ್ಮಿನಾರಾಯಣ ಗೌಡ.
‘ನಮ್ಮವರು ಸಂಗ್ರಹಿಸುವ ಕಿರು ಅರಣ್ಯ ಉತ್ಪನ್ನಗಳನ್ನು ಸರ್ಕಾರವೇ ಬೆಂಬಲ ಬೆಲೆಯಲ್ಲಿ ಖರೀದಿಸುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಆಗ್ರಹಿಸುತ್ತಾರೆ ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಗಂಗಾಧರ ಗೌಡ.
‘ಅರಣ್ಯವಾಸಿಗಳು ಸಂಗ್ರಹಿಸುವ ಕಿರು ಅರಣ್ಯ ಉತ್ಪನ್ನಗಳಿಗೆ ಸರಿಯಾದ ಬೆಲೆ ಲಭಿಸುವುದಿಲ್ಲ. ಮೇ, ಜೂನ್, ಜುಲೈ ತಿಂಗಳಲ್ಲಿ ಮಾತ್ರ ಜೇನು ಸಿಗುತ್ತದೆ. ಜೂನ್, ಜುಲೈ ತಿಂಗಳಲ್ಲಿ ಘಾಟಿ ರಾಮಪತ್ರೆ ಸಂಗ್ರಹಿಸಿದರೆ, ಊರಿನ ರಾಮಪತ್ರೆಯನ್ನು ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಸಂಗ್ರಹಿಸಲಾಗುತ್ತದೆ’ ಎನ್ನುತ್ತಾರೆ ಅವರು.
‘ಮುಂಬೈ ಮತ್ತು ಗುಜರಾತ್‌ನಲ್ಲಿ ರಾಮಪತ್ರೆಗೆ ಕೆ.ಜಿ.ಗೆ ₹2,000ದವರೆಗೆ ದರ ಇದೆ. ನಮ್ಮಿಂದ ಕೆ.ಜಿ.ಗೆ ₹800ಕ್ಕೆ ಖರೀದಿಸುವ ವ್ಯಾಪಾರಿಗಳು ಅದನ್ನು ಅಲ್ಲಿಗೆ ಕಳುಹಿಸುತ್ತಾರೆ. ಜೇನು ತುಪ್ಪವನ್ನು ನಮ್ಮಿಂದ ಕೆ.ಜಿ.ಗೆ ₹500ಕ್ಕೆ ಖರೀದಿಸಲಾಗುತ್ತದೆ’ ಎಂದೂ ಅವರು ವಿವರಿಸಿದರು.
‘ನಮ್ಮಲ್ಲಿ ಉನ್ನತ ಶಿಕ್ಷಣ ಪಡೆದವರ ಸಂಖ್ಯೆ ಬಹಳ ಕಡಿಮೆ. ಕಲಿತವರಿಗೂ ಸರ್ಕಾರಿ ನೌಕರಿ ಸಿಗದಿರುವುದರಿಂದ ಕೆಲವರು ಕಲಿಕೆಯ ಕಡೆಗೆ ಆಸಕ್ತಿವಹಿಸಿಲ್ಲ. ರಸ್ತೆ ಸೇರಿದಂತೆ ಮೂಲ ಸೌಕರ್ಯಗಳು ಇಲ್ಲದ ಕಾರಣ ಹಲವರು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ನಮ್ಮ ಸಮುದಾಯದವರಲ್ಲಿ ಪದವಿ ಪೂರ್ಣಗೊಳಿಸಿರುವವರು 20ರಿಂದ 25 ಮಂದಿ ಇರಬಹುದು ಅಷ್ಟೇ. ಸ್ನಾತಕೋತ್ತರ ಪದವಿ ಪಡೆದವರು 10 ಮಂದಿ ಇರಬಹುದು. ಜಿಲ್ಲೆಯಲ್ಲಿ ನಮ್ಮವರ ಜನಸಂಖ್ಯೆ ಅಂದಾಜು 2,500 ಇರಬಹುದು’ ಎನ್ನುತ್ತಾರೆ ಗಂಗಾಧರ ಗೌಡ.
ಚಿಕಿತ್ಸೆಗೆ ಕಷ್ಟ: ಕಬ್ಬಿನಾಲೆ ಮತ್ತು ಹೆಬ್ರಿಯಲ್ಲಿ ಆಸ್ಪತ್ರೆಗಳಿದ್ದರೂ ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಜಿಲ್ಲಾಸ್ಪತ್ರೆಯನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ನಮ್ಮದು. ಆದ್ದರಿಂದ ಕಬ್ಬಿನಾಲೆ ಮತ್ತು ಹೆಬ್ರಿಯಲ್ಲಿರುವ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಬೇಕು ಎಂದು ಆಗ್ರಹಿಸುತ್ತಾರೆ ಲಕ್ಷ್ಮಿನಾರಾಯಣ ಗೌಡ.
ಮಲೆಕುಡಿಯರು ಸಂಗ್ರಹಿಸುವ ಕಿರು ಅರಣ್ಯ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗದ ಕಾರಣ ಹೆಚ್ಚಿನವರು ಈಗ ಅಡಿಕೆ ತೋಟಗಳಿಗೆ ಕೆಲಸಕ್ಕೆ ಹೋಗುತ್ತಾರೆಲಕ್ಷ್ಮಿನಾರಾಯಣ ಗೌಡ ಕುಚ್ಚೂರು ನಿವಾಸಿ
ನಕ್ಸಲ್ ಎನ್‌ಕೌಂಟರ್ ನಡೆದಿರುವ ಪೀತುಬೈಲಿನ ಹಾದಿಯಲ್ಲಿ ದಟ್ಟ ಅರಣ್ಯದಿಂದ ಆವೃತವಾಗಿರುವ ತಿಂಗಳಮಕ್ಕಿ ಎಂಬಲ್ಲಿ ಅಂಗವಿಕಲರಾಗಿರುವ ಲಕ್ಷ್ಮಣ ಗೌಡ ಎಂಬುವವರು ಪುಟ್ಟ ಮನೆಯಲ್ಲಿ ಏಕಾಂಗಿ ಜೀವನ ನಡೆಸುತ್ತಿದ್ದಾರೆ. ‘ಪೋಲಿಯೊ ಬಾಧಿಸಿ ನನ್ನ ಕಾಲುಗಳು ಬಲಹೀನವಾಗಿವೆ. ಅಂಗವಿಕಲನಾಗಿರುವ ಕಾರಣಕ್ಕೆ ಸರ್ಕಾರದಿಂದ ತಿಂಗಳಿಗೆ ₹1400 ಬರುತ್ತದೆ. ಇದು ಜೀವನ ನಿರ್ವಹಣೆಗೆ ಸಾಕಾಗುವುದಿಲ್ಲ’ ಎನ್ನುತ್ತಾರೆ ಲಕ್ಷ್ಮಣ ಗೌಡ.
‘ಸರ್ಕಾರವು ಮನೆ ನಿರ್ಮಿಸಿ ಕೊಟ್ಟಿದೆ. ಸೋಲಾರ್ ವ್ಯವಸ್ಥೆ ಕೂಡ ಮಾಡಿಕೊಟ್ಟಿದೆ. ಇನ್ನಷ್ಟು ಸಹಾಯ ಲಭಿಸಿದರೆ ಅನುಕೂಲವಾಗಬಹುದು’ ಎನ್ನುತ್ತಾರೆ ಅವರು. ‘ನನಗೆ ಎಲ್ಲಿಗಾದರೂ ಹೋಗಬೇಕಾದರೆ ಅಣ್ಣನ ಮಕ್ಕಳು ಬಂದು ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಾರೆ. ಮುಖ್ಯವಾಗಿ ಈ ಪ್ರದೇಶಕ್ಕೆ ಕಾಂಕ್ರೀಟ್ ರಸ್ತೆ ಮಾಡಿದರೆ ನಮ್ಮಂಥವರಿಗೆ ತುಂಬ ಅನುಕೂಲವಾಗಲಿದೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.