ಉಡುಪಿ: ಹೆಬ್ರಿ ತಾಲ್ಲೂಕಿನ ಪೀತುಬೈಲಿನಲ್ಲಿ ಗುಂಡಿನ ಮೊರೆತ ಕೇಳಿದ ಬಳಿಕ ಜಿಲ್ಲೆಯ ಪಶ್ಚಿಮಘಟ್ಟದ ಕಾಡಂಚಿನ ಗ್ರಾಮಗಳಲ್ಲಿ ನೆಲೆಸಿರುವ ಮಲೆಕುಡಿಯ ಸಮುದಾಯದವರಲ್ಲಿ ಮತ್ತೆ ಆತಂಕ ಮನೆ ಮಾಡಿದೆ.
ನಕ್ಸಲರ ದಾಳಿಯಾಗಲಿ, ಪೊಲೀಸರ ಕಾರ್ಯಾಚರಣೆಯಾಗಲಿ ನಡೆದಾಗ ಮೊದಲು ಸಂಕಷ್ಟ ಅನುಭವಿಸುವವರು ಇದೇ ಅರಣ್ಯದಂಚಿನ ನಿವಾಸಿಗಳು. ಒಂದೆಡೆ ನಕ್ಸಲರ ಭಯವಾದರೆ, ಇನ್ನೊಂದೆಡೆ ಪೊಲೀಸರ ವಿಚಾರಣೆಯ ಭಯ ಇವರ ನೆಮ್ಮದಿಯನ್ನು ಕಸಿಯುತ್ತಲೇ ಇದೆ.
ಯಾವುದೋ ಕಾಡಲ್ಲಿ ನಕ್ಸಲರು ಕಾಣಿಸಿಕೊಂಡ ಮಾಹಿತಿ ಸಿಕ್ಕಿದರೂ ನಕ್ಸಲ್‌ಬಾಧಿತ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ದಳದಿಂದ ಶೋಧ ಕಾರ್ಯಾಚರಣೆ ಚುರುಕುಗೊಳ್ಳುತ್ತದೆ. ಆ ವೇಳೆ ಹಗಲು ರಾತ್ರಿ ಎನ್ನದೆ ನಮ್ಮವರ ಮನೆಗಳಿಗೆ ಬಂದು ಪರಿಶೀಲನೆ ನಡೆಸುತ್ತಾರೆ ಎನ್ನುತ್ತಾರೆ ಮಲೆಕುಡಿಯ ಸಮುದಾಯದವರು.
ಕೃಷಿಯನ್ನೇ ಆಶ್ರಯಿಸಿರುವ ಮಲೆಕುಡಿಯರು, ರಾಮಪತ್ರೆ ಸೇರಿದಂತೆ ಕಾಡುತ್ಪನ್ನಗಳನ್ನು ಹಾಗೂ ಜೇನನ್ನು ಸಂಗ್ರಹಿಸಿ ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತಾರೆ.
ಉಡುಪಿ ಜಿಲ್ಲೆಯಲ್ಲಿ 468 ಮಲೆಕುಡಿಯ ಕುಟುಂಬಗಳಿವೆ. ಎನ್‌ಕೌಂಟರ್ ನಡೆದಿರುವ ನಾಡ್ಪಾಲ್ ಮತ್ತು ಮುದ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಅಂದಾಜು 250 ಕುಟುಂಬಗಳು ನೆಲೆಸಿವೆ. ಎಎನ್‌ಎಫ್‌ನವರು ಹತ್ಯೆ ಮಾಡಿರುವ ವಿಕ್ರಂ ಗೌಡ ಕೂಡ ಇದೇ ಸಮುದಾಯಕ್ಕೆ ಸೇರಿದವ.
‘ಕಾಡಂಚಿನಲ್ಲಿ ವಾಸಿಸುವ ಮಲೆಕುಡಿಯರ ಯಾವ ಬೇಡಿಕೆಗಳೂ ಈಡೇರುತ್ತಿಲ್ಲ. ಹೆಬ್ರಿ ತಾಲ್ಲೂಕಿನ ಮತ್ತಾವುನಲ್ಲಿ ಸೇತುವೆ ನಿರ್ಮಿಸಬೇಕೆಂಬುದು 50 ವರ್ಷಗಳ ಹಿಂದಿನ ಬೇಡಿಕೆ, ಅದು ಸಾಕಾರವಾಗಿಲ್ಲ. ಈಗ ಸಂಬಂಧಪಟ್ಟವರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ’ ಎನ್ನುತ್ತಾರೆ ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಗಂಗಾಧರ ಗೌಡ.
‘ಜಿಲ್ಲೆಯಲ್ಲಿ ಮಲೆಕುಡಿಯ ಸಮುದಾಯದವರ ಶ್ರೇಯೋಭಿವೃದ್ಧಿಗಾಗಿ ₹6.43 ಕೋಟಿ ವೆಚ್ಚದ ಕ್ರಿಯಾಯೋಜನೆ ಸಿದ್ಧವಾಗಿದೆ ಎಂಬ ಮಾಹಿತಿ ಇದೆ. ಇದು ಏತಕ್ಕೂ ಸಾಲದು. ₹50 ಕೋಟಿಯಷ್ಟಾದರೂ ವೆಚ್ಚಮಾಡಬೇಕು’ ಎಂದು ಅವರು ಆಗ್ರಹಿಸಿದರು.
‘ಕುದುರೆಮುಖ ಸೇರಿದಂತೆ ಜಿಲ್ಲೆಯ ಅರಣ್ಯ ಪ್ರದೇಶಗಳಿಂದ ಸ್ವ ಇಚ್ಛೆಯಿಂದ ಹೊರಬರುವ ನಮ್ಮ ಸಮುದಾಯದವರಿಗೆ 300 ಎಕರೆ ಜಾಗ ಮೀಸಲಿರಿಸಬೇಕು. ಪ್ರತಿ ಕುಟುಂಬಕ್ಕೆ ಕನಿಷ್ಠ 2 ಎಕರೆಯಾದರೂ ಜಾಗ ನೀಡಬೇಕು’ ಎಂದು ಅವರು ಒತ್ತಾಯಿಸಿದರು.
ಕಾರ್ಕಳ ತಾಲ್ಲೂಕಿನ ಈದು ಗ್ರಾಮಕ್ಕೆ ಈಚೆಗೆ ನಕ್ಸಲರು ಬಂದಿದ್ದಾರೆ ಎಂಬ ಸುದ್ದಿ ಹರಡಿದ ಬಳಿಕ ಕೇರಳ ಪೊಲೀಸರ ತಂಡ ನಾವು ವಾಸಿಸುತ್ತಿರುವ ಪ್ರದೇಶಕ್ಕೆ ಬಂದು ಮಾಹಿತಿ ಕಲೆಹಾಕುತ್ತಿದೆಭಾಸ್ಕರ ಮಲೆಕುಡಿಯ ಕನ್ಯಾಲು ಕಾರ್ಕಳ
ಉಡುಪಿ ಜಿಲ್ಲೆಯಲ್ಲಿ ಮಲೆಕುಡಿಯ ಸಮುದಾಯದ ಕೇವಲ 6 ಮಂದಿ ಮಾತ್ರ ಸರ್ಕಾರಿ ನೌಕರಿಯಲ್ಲಿದ್ದಾರೆ. ಅರಣ್ಯ ಇಲಾಖೆಯಲ್ಲಿ ಸ್ಥಳೀಯ ಅರಣ್ಯ ಬುಡಕಟ್ಟು ಮೀಸಲಾತಿ ನೀಡುತ್ತಿರುವಂತೆ ಇತರ ಇಲಾಖೆಗಳಲ್ಲೂ ನಮಗೆ ಸಿ ಮತ್ತು ಡಿ ದರ್ಜೆ ಹುದ್ದೆಗಳಲ್ಲಿ ಮೀಸಲಾತಿ ನೀಡಬೇಕುಗಂಗಾಧರ ಗೌಡ ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ
ಸರ್ಕಾರವು ನಮಗೆ ಶಾಶ್ವತ ಹಕ್ಕುಪತ್ರ ನೀಡಬೇಕು. ಕಸ್ತೂರಿ ರಂಗನ್ ವರದಿಯನ್ನು ಸರ್ಕಾರ ತಿರಸ್ಕರಿಸಿದರೂ ಆ ವರದಿಯಲ್ಲಿ ಉಲ್ಲೇಖಿಸಿರುವ ಪರಿಸರ ಸೂಕ್ಷ್ಮ ಪ್ರದೇಶದಿಂದಾಗಿ ಆತಂಕ ಕಾಡುತ್ತಿದೆಶೇಖರ ಗೌಡ ಅಜ್ಜೋಳಿ ಹೆಬ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.