ADVERTISEMENT

ಉಡುಪಿ | ದಕ್ಕೆ ಪರಿಸರ ರೋಗಕಾರಕ ಕೇಂದ್ರಗಳಾಗದಿರಲಿ

ಮಲ್ಪೆ ಬೀಚ್‌, ಮೀನುಗಾರಿಕಾ ದಕ್ಕೆ ಪರಿಸರ ಶುಚೀಕರಣಕ್ಕೆ ಆದ್ಯತೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 7:06 IST
Last Updated 8 ಜುಲೈ 2024, 7:06 IST
<div class="paragraphs"><p>ಮಲ್ಪೆ ಧಕ್ಕೆಯಲ್ಲಿ ನಿಲ್ಲಿಸಿರುವ ಮೀನುಗಾರಿಕಾ ಬೋಟ್‌ಗಳ ತಳದಲ್ಲಿ ನೀರಿನಲ್ಲಿ ತೇಲುತ್ತಿರುವ ಕಸ</p></div>

ಮಲ್ಪೆ ಧಕ್ಕೆಯಲ್ಲಿ ನಿಲ್ಲಿಸಿರುವ ಮೀನುಗಾರಿಕಾ ಬೋಟ್‌ಗಳ ತಳದಲ್ಲಿ ನೀರಿನಲ್ಲಿ ತೇಲುತ್ತಿರುವ ಕಸ

   

ಉಡುಪಿ: ಅಲ್ಲಲ್ಲಿ ಮುರಿದ ದೋಣಿಗಳಲ್ಲಿ ಸಂಗ್ರಹಗೊಂಡಿರುವ ಮಳೆ ನೀರು, ಎಲ್ಲೆಂದರಲ್ಲಿ ಬಿದ್ದಿರುವ ಪ್ಲಾಸ್ಟಿಕ್‌ ಬಾಟಲಿ, ಎಳನೀರು ಚಿಪ್ಪುಗಳು, ಪ್ಲಾಸ್ಟಿಕ್‌ ಕಸ... ಇವು ಮಲ್ಪೆ ಬೀಚ್‌ ಮತ್ತು ದಕ್ಕೆ ಪರಿಸರದಲ್ಲಿ ಕಂಡು ಬರುವ ದೃಶ್ಯ.

ರಾಜ್ಯದಾದ್ಯಂತ ಡೆಂಗಿ ಹಾವಳಿ ಮಿತಿ ಮೀರುತ್ತಿರುವ ಸಂದರ್ಭದಲ್ಲಿ ಮಲ್ಪೆಯ ದಕ್ಕೆ ಪರಿಸರ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುತ್ತಿದೆ. ಪ್ರತಿವರ್ಷ ನಗರ ವ್ಯಾಪ್ತಿಯಲ್ಲಿ ದೃಢಪಟ್ಟಿರುವ ಡೆಂಗಿ ಪ್ರಕರಣಗಳನ್ನು ಗಮನಿಸಿದರೆ ಮಲ್ಪೆ ಪರಿಸರದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿರುವುದನ್ನು ಗಮನಿಸಬಹುದು.

ADVERTISEMENT

ಮಲ್ಪೆ ಹೊರತು ಪಡಿಸಿದರೆ ಕುಂದಾಪುರ ತಾಲ್ಲೂಕಿನ ಗಂಗೊಳ್ಳಿ ಬಂದರಿನಲ್ಲಿ ಅತೀ ಹೆಚ್ಚು ಮೀನುಗಾರಿಕಾ ಬೋಟ್‌ಗಳು ನಿಲುಗಡೆಯಾಗುತ್ತವೆ. ಅಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಗಂಗೊಳ್ಳಿ ಬಂದರು ಪ್ರದೇಶದಲ್ಲಿ ಚರಂಡಿ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಮಾಡಬೇಕು, ಇಲ್ಲದಿದ್ದರೆ ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಆಗಾಗ  ಭೇಟಿ ನೀಡಿ ಸ್ವಚ್ಛತೆ ಖಾತರಿಪಡಿಸಿಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮಳೆಗಾಲ ಆರಂಭವಾಗುತ್ತಿದ್ದಂತೆ ಟ್ರೋಲಿಂಗ್‌ ನಿಷೇಧ ಜಾರಿಗೆ ಬರುತ್ತದೆ. ಆಗ ಆಳ ಕಡಲಲ್ಲಿ ಮೀನುಗಾರಿಕೆ ನಡೆಸುವ ಬೋಟ್‌ಗಳು ಮಲ್ಪೆ ಮತ್ತು ಗಂಗೊಳ್ಳಿಯ ದಕ್ಕೆಯಲ್ಲಿ ನಿಲುಗಡೆಯಾಗುತ್ತವೆ. ಇಂತಹ ಬೋಟ್‌ಗಳಲ್ಲಿ ಅಳವಡಿಸಿರುವ ಟೈರ್‌ಗಳಲ್ಲಿ, ಟ್ಯಾಂಕ್‌ಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಮೂಲಗಳು ಹೇಳುತ್ತಿವೆ.

ಅದೇ ರೀತಿ ದಕ್ಕೆ ಸಮೀಪದ ಪ್ರದೇಶಗಳಲ್ಲೂ ಕಸಗಳ ವಿಲೇವಾರಿ ಸರಿಯಾದ ರೀತಿಯಲ್ಲಿ ಆಗದೆ ಸೊಳ್ಳೆಗಳ ಹಾವಳಿ ಹೆಚ್ಚಾಗಲು ಕಾರಣವಾಗುತ್ತಿದೆ. ಮಲ್ಪೆ ಬೀಚ್‌ನಿಂದ ದಕ್ಕೆವರೆಗೆ ಅಲ್ಲಲ್ಲಿ ಮುರಿದ ದೋಣಿಗಳನ್ನು ಹಾಗೆಯೇ ಬಿಡಲಾಗಿದೆ. ಇದರಲ್ಲಿ ಮಳೆ ನೀರು ಸಂಗ್ರಹಗೊಳ್ಳುತ್ತಿರುವುದರಿಂದ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ. ದಕ್ಕೆಯಲ್ಲಿ ಬೋಟ್‌ಗಳನ್ನು ನಿಲ್ಲಿಸುವ ಪ್ರದೇಶದಲ್ಲಿ ನೀರಿನಲ್ಲಿ ಪ್ಲಾಸ್ಟಿಕ್‌ ಬಾಟಲಿಗಳು, ಥರ್ಮೋಕೋಲ್‌, ಎಳನೀರಿನ ಚಿಪ್ಪುಗಳು ತೇಲುತ್ತಿರುತ್ತವೆ. ಈ ಕಸವನ್ನು ಆಗಾಗ ತೆರವುಗೊಳಿಸಬೇಕು ಎನ್ನುತ್ತಾರೆ ಸ್ಥಳೀಯರು.

ಮಲ್ಪೆ ಬೀಚ್‌ ಅಂದಗೆಡಿಸುತ್ತಿರುವ ಕಸ

ಮಳೆ ಹಾಗೂ ಕಡಲಿನ ಅಬ್ಬರ ಜೋರಾಗುತ್ತಿದ್ದಂತೆ ಜಿಲ್ಲೆಯ ಬಹುತೇಕ ಎಲ್ಲಾ ಬೀಚ್‌ಗಳಲ್ಲೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರಂತೆ ಮಲ್ಪೆ ಬೀಚ್‌ನಲ್ಲೂ ಪ್ರವಾಸಿಗರು ಸಮುದ್ರದ ನೀರಿಗೆ ಇಳಿಯದಂತೆ ತಡೆಬೇಲಿ ಅಳವಡಿಸಲಾಗಿದೆ. ಈ ತಡೆಬೇಲಿಯ ಇಕ್ಕೆಲಗಳಲ್ಲೂ ಕಸ ರಾಶಿ ಬಿದ್ದು ಬೀಚ್‌ನ ಅಂದಗೆಡಿಸಿದೆ.

ಮೀನುಗಾರಿಕೆಗೆ ಬಳಸುವ ಬಲೆಯ ತುಣುಕುಗಳು, ಥರ್ಮೋಕೋಲ್‌ ತುಂಡುಗಳು, ಪ್ಲಾಸ್ಟಿಕ್‌ ತ್ಯಾಜ್ಯಗಳು ಸಾಮಾನ್ಯವಾಗಿ ಮಳೆಗಾಲದಲ್ಲಿ ಸಮುದ್ರದಿಂದ ದಡಕ್ಕೆ ಬೀಳುತ್ತವೆ ಇವುಗಳನ್ನು ನಿಯಮಿತವಾಗಿ ತೆರವುಗೊಳಿಸದಿದ್ದರೆ ಅದರಲ್ಲಿ ಮಳೆ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತದೆ.

ಬೀಚ್‌ ಬಳಿ ಇರುವ ಸಣ್ಣ ಅಂಗಡಿ, ಹೋಟೆಲ್‌ಗಳ ಹಿಂದಿನ ಪ್ರದೇಶಗಳಲ್ಲಿ ಕೊಳಚೆ ನೀರು ಸಂಗ್ರಹಗೊಂಡಿದ್ದು, ಇಲ್ಲೂ ಕಸ ಎಸೆಯಲಾಗಿದೆ. ಬೀಚ್‌ ಪಕ್ಕದಲ್ಲೇ ನೀರು ಹರಿದು ಹೋಗುವಲ್ಲಿ ಕಸ ರಾಶಿ ತುಂಬಿದೆ. ಪಕ್ಕದಲ್ಲಿ ನಡೆದಾಡುವವರು ಮೂಗು ಮುಚ್ಚಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಮಲ್ಪೆ ದಕ್ಕೆ ಮತ್ತು ಬೀಚ್‌ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಸಂಬಂಧಪಟ್ಟವರು ಮುಂದಾಗಬೇಕು. ಸಾಂಕ್ರಾಮಿಕ ರೋಗಗಳು ಹರಡುವುದಕ್ಕೂ ಮುನ್ನ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಮೀನುಗಾರ ಒಬ್ಬರು ಆಗ್ರಹಿಸಿದ್ದಾರೆ.

ಸ್ವಚ್ಛತೆ ಕುರಿತು ಜಾಗೃತಿ

ನದಿಗಳಿಂದ ಸಮುದ್ರಕ್ಕೆ ಸೇರುವ ಕಸ ಮಳೆಗಾಲದಲ್ಲಿ ಕಡಲಿನ ದಡಕ್ಕೆ ಬಂದು ಬೀಳುತ್ತವೆ. ಈಗ ತೆಗೆದರೆ ಮತ್ತೆ ಮತ್ತೆ ಬೀಳುತ್ತಿರುತ್ತವೆ. ಆಗಸ್ಟ್‌ನಲ್ಲಿ ಆ ಕಸವನ್ನು ತೆರವುಗೊಳಿಸಲಾಗುವುದು. ದಕ್ಕೆ ಬೀಚ್‌ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವಂತೆ ಮೀನುಗಾರರಿಗೆ ಸಂಬಂಧಿತ ಇಲಾಖೆಯವರಿಗೆ ಸೂಚನೆ ನೀಡಿದ್ದೇವೆ. ನಗರಸಭೆ ವ್ಯಾಪ್ತಿಯಲ್ಲಿ ನೀರು ನಿಲ್ಲುವ ತೋಡುಗಳನ್ನು ಸ್ವಚ್ಛಗೊಳಿಸಲು ನೀರು ನಿಲ್ಲದಂತೆ ನೋಡಿಕೊಳ್ಳಲು ಪೌರಕಾರ್ಮಿಕರಲ್ಲದೆ ಹೆಚ್ಚುವರಿಯಾಗಿ 50 ಮಂದಿಯನ್ನು ನೇಮಕ ಮಾಡಿದ್ದೇವೆ. ಅಲ್ಲದೆ ಆರೋಗ್ಯ ಇಲಾಖೆಯ 20 ಮಂದಿ ಹಾಗೂ ನಗರಸಭೆಯ 19 ಮಂದಿ ಪ್ರತಿ ಮನೆಗೆ ತೆರಳಿ ಜನರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಈ ಕೆಲಸ ನಿರಂತರವಾಗಿ ಸೆಪ್ಟೆಂಬರ್‌ವರೆಗೂ ನಡೆಯಲಿದೆ ನಗರಸಭಾ ಪೌರಾಯುಕ್ತ ರಾಯಪ್ಪ ತಿಳಿಸಿದರು.

ಎಲ್ಲೆಂದರಲ್ಲಿ ಕಸ ತ್ಯಾಜ್ಯ ತುಂಬಿರುವುದರಿಂದ ಮಲ್ಪೆ ಬೀಚ್‌ನಲ್ಲಿ ನಡೆದಾಡಲು ಮನಸ್ಸಾಗುವುದಿಲ್ಲ. ಸಂಬಂಧಪಟ್ಟವರು ತ್ಯಾಜ್ಯ ತೆರವಿಗೆ ಕ್ರಮ ಕೈಗೊಳ್ಳಬೇಕು.
ಸುಶಾಂತ್‌, ಪ್ರವಾಸಿಗ
ಮಳೆಗಾಲದಲ್ಲಿ ಸಮುದ್ರದಿಂದ ಮೇಲೆ ಬರುವ ಪ್ಲಾಸ್ಟಿಕ್‌ ಬಾಟಲಿ ಕಸವನ್ನು ಬೀಚ್‌ನಿಂದ ನಿರಂತರ ತೆರವುಗೊಳಿಸಬೇಕು ಇಲ್ಲದಿದ್ದರೆ ಬೀಚ್‌ ಅಂದಗೆಡುತ್ತದೆ.
ಅರವಿಂದ್‌, ಪ್ರವಾಸಿಗ
ಮಲ್ಪೆ ಧಕ್ಕೆ ಸಮೀಪದ ರಸ್ತೆಯೊಂದರಲ್ಲಿ ಮಗುಚಿ ಹಾಕಿರುವ ಬೋಟ್‌ಗಳ ಅಡಿಯಲ್ಲಿ ಕಸ ಸಂಗ್ರಹಗೊಂಡಿರುವುದು
ಮಲ್ಪೆ ಬೀಚ್‌ನ ತಡೆಬೇಲಿಯ ಬಳಿ ಸಂಗ್ರಹಗೊಂಡಿರುವ ತ್ಯಾಜ್ಯ
ಮಲ್ಪೆ ಬೀಚ್‌ನ ಬಳಿ ಮುರಿದ ದೋಣಿಯೊಂದರಲ್ಲಿ ಮಳೆ ನೀರು ಸಂಗ್ರಹಗೊಂಡಿರುವುದು
ಮಲ್ಪೆ ಬೀಚ್‌ ಸಮೀಪ ನೀರು ಹರಿದು ಹೋಗುವಲ್ಲಿ ಕೊಳಚೆ ಸಂಗ್ರಹವಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.