ಉಡುಪಿ: 1,000ಕ್ಕೂ ಹೆಚ್ಚು ಕೊರೊನಾ ಸೋಂಕಿತರಿದ್ದ ಮಣಿಪಾಲದ ಎಂಐಟಿ ಕ್ಯಾಂಪಸ್ ‘ಮೈಕ್ರೋ ಕಂಟೈನ್‌ಮೆಂಟ್’ ಪರಿಣಾಮಕಾರಿ ಅನುಷ್ಠಾನದ ಮೂಲಕ ಸೋಂಕು ಮುಕ್ತವಾಗಿ ಗಮನ ಸೆಳೆದಿತ್ತು. ಇದೀಗ ಅದೇ ಕಾಲೇಜಿನ ವಿದ್ಯಾರ್ಥಿಗಳು ಕೋವಿಡ್ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿ ಸುದ್ದಿಯಲ್ಲಿದ್ದಾರೆ.
ವಿದ್ಯಾರ್ಥಿಗಳಾದ ಮನೋರತ್ ಖನ್ನಾ, ಪ್ರತೀಕ್ ಶೇಖ್ವಾನಿ, ಮೊಹಮ್ಮದ್ ದಿಲ್‌ಶದ್ ಉಜ್ವೇರ್, ಅಮೂಲ್ಯ ಕೊಲ್ಲಿಪರ, ಅಭಿಷೇಕ್ ಗುಪ್ತಾ ಹಾಗೂ ಆರುಶಿ ಅಗರ್‌ವಾಲ್ ನೇತೃತ್ವದ ತಂಡ ‘ಸೋಷಿಯೊ ಐಕರ್’ ಎಂಬ ವೆಬ್‌ಸೈಟ್ ಆರಂಭಿಸಿದೆ. ಪ್ಲಾಸ್ಮಾ ಅಗತ್ಯವಿರುವ ಹಾಗೂ ಪ್ಲಾಸ್ಮಾ ದಾನಿಗಳ ನಡುವಿನ ಸಂವಹನ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಈ ವೆಬ್‌ಸೈಟ್.
ದೇಶದ ಯಾವುದೇ ಭಾಗದಿಂದ ಪ್ಲಾಸ್ಮಾ ಅಗತ್ಯವಿರುವವರು ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಕೋವಿಡ್‌ನಿಂದ ಗುಣಮುಖರಾಗಿ ಪ್ಲಾಸ್ಮಾ ದಾನ ಮಾಡಲು ಅರ್ಹತೆ ಹೊಂದಿರುವ ದಾನಿಗಳು ಕೂಡ ಹೆಸರು ನೋಂದಾಯಿಸಿಕೊಳ್ಳಬೇಕು.
ಪ್ಲಾಸ್ಮಾಗೆ ಬೇಡಿಕೆ ಸಲ್ಲಿಸುವವರು ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ, ವಯಸ್ಸು, ರಾಜ್ಯ, ನಗರ, ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಹೆಸರು, ರಕ್ತದ ಗುಂಪು ಹೀಗೆ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಬೇಕು. ಅದೇ ಮಾದರಿಯಲ್ಲಿ ಪ್ಲಾಸ್ಮಾ ದಾನ ಮಾಡುವವರು ಕೂಡ ಮಾಹಿತಿಗಳನ್ನು ತುಂಬಬೇಕು.
ದಾನಿಗಳ ಹಾಗೂ ಸೋಂಕಿತರ ರಕ್ತದ ಮಾದರಿ ಹೊಂದಿಕೆಯಾದರೆ ಪ್ಲಾಸ್ಮಾ ಅಗತ್ಯವಿರುವವರು ವಾಸವಾಗಿರುವ ಸ್ಥಳಗಳಲ್ಲಿ ನೋಂದಣಿ ಮಾಡಿಸಿಕೊಂಡಿರುವ ದಾನಿಗಳನ್ನು ಸಂಪರ್ಕಿಸಿ ಪ್ಲಾಸ್ಮಾ ದಾನಕ್ಕೆ ಮನವಿ ಮಾಡುತ್ತೇವೆ ಎಂದು ವೆಬ್‌ಸೈಟ್‌ನ ಕಾರ್ಯವೈಖರಿಯನ್ನು ತಿಳಿಸಿದರು ಮೊಹಮ್ಮದ್ ದಿಲ್‌ಶದ್ ಉಜ್ವೇರ್.
ಸದ್ಯ 60 ದಾನಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಪ್ಲಾಸ್ಮಾಗೆ ಬೇಡಿಕೆ ಸಲ್ಲಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಕೋವಿಡ್‌ನಿಂದ ಗುಣಮುಖರಾದವರು ಕಡ್ಡಾಯವಾಗಿ ಪ್ಲಾಸ್ಮಾ ದಾನ ಮಾಡಿದರೆ ಅಮೂಲ್ಯ ಜೀವಗಳನ್ನು ಉಳಿಸಬಹುದು ಎಂದು ಮನವಿ ಮಾಡಿದರು ಮೊಹಮ್ಮದ್ ದಿಲ್‌ಶದ್.
ದಾನಿಗಳು ಹಾಗೂ ಪ್ಲಾಸ್ಮಾ ಅಗತ್ಯ ಇರುವವರು ವೆಬ್‌ಸೈಟ್ https://plasmadonation.sociio.org/ ಹಾಗೂ https://www.instagram.com/sociio_ichor/ ಭೇಟಿನೀಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.