ADVERTISEMENT

ಕಾರ್ಕಳ | ಗುಣಮಟ್ಟದ ಶಿಕ್ಷಣ: ಮೂಲ ಸೌಕರ್ಯದ ಬಲ

ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 7:11 IST
Last Updated 10 ಜುಲೈ 2024, 7:11 IST
ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು   

ಕಾರ್ಕಳ: 1991ರಲ್ಲಿ ಬಿ.ಬಿ.ಎಂ ಪದವಿ ಶಿಕ್ಷಣದೊಂದಿಗೆ ಆರಂಭಗೊಂಡ ರಾಜ್ಯದ ಪ್ರಥಮ ಸರ್ಕಾರಿ ಕಾಲೇಜು ಎಂದರೆ ಕಾರ್ಕಳದ ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು.

ಗ್ರಾಮೀಣ ಪರಿಸರದ ಅಲ್ಪ ಆದಾಯ ವರ್ಗದ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣದ ಅವಕಾಶ ಒದಗಿಸುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿಯವರ, ಸ್ಥಳೀಯರ ಮುತುವರ್ಜಿಯಿಂದ 28 ವಿದ್ಯಾರ್ಥಿಗಳೊಂದಿಗೆ ನಗರದ ಬೋರ್ಡ್ ಹೈಸ್ಕೂಲ್‌ನಲ್ಲಿ ಆರಂಭಗೊಂಡಿತು. ನಂತರ 1996ರಲ್ಲಿ 3 ಕಿ.ಮೀ. ದೂರದ ಕಾಬೆಟ್ಟು ಬಳಿಯ 7.5 ಎಕರೆ ಸುಂದರ ಪರಿಸರದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.

ದಾನಿ ಮಂಗಳೂರು ಭಾರತ್ ಬೀಡಿ ವರ್ಕ್ಸ್‌ನ ಮಂಜುನಾಥ ಪೈ ಅವರ ಸ್ಮಾರಕ ಕಾಲೇಜ್ ಆಫ್ ಪ್ರೊಫೆಷನಲ್ ಆ್ಯಂಡ್‌ ಬಿಸಿನೆಸ್ ಮ್ಯಾನೆಜ್‌ಮೆಂಟ್ ಎಂಬುದಾಗಿ ಮರುನಾಮಕರಣ ಪಡೆದಿದೆ.

ADVERTISEMENT

ಸುಮಾರು 34 ವರ್ಷಗಳ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಕಾಲೇಜಿನಲ್ಲಿ 2008ರಲ್ಲಿ ಬಿ.ಕಾಂ. ಪದವಿ, 2011–12ರಲ್ಲಿ ಸ್ನಾತಕೋತ್ತರ ಎಂ.ಕಾಂ. ಕೋರ್ಸ್‌ ಆರಂಭಿಸಲಾಗಿದ್ದು, ಬಹು ಬೇಡಿಕೆಯ ಬಿ.ಎ. ಪತ್ರಿಕೋದ್ಯಮ, 2018ರಲ್ಲಿ ಬಿ.ಎ.(ರಾಜ್ಯಶಾಸ್ತ್ರ, ಇತಿಹಾಸ, ಅರ್ಥಶಾಸ್ತ್ರ), 2023ರಿಂದ ಬಿ.ಸಿ.ಎ. ಪದವಿಯನ್ನೂ ಆರಂಭಿಸಲಾಗಿದೆ.

ಕಾಲೇಜಿನಲ್ಲಿ ಈ ಬಾರಿ ಬಿ.ಕಾಂ. ಲಾಜಿಸ್ಟಿಕ್ಸ್ ಆ್ಯಂಡ್‌ ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ಎಂಬ ವಿನೂತನ ಪದವಿ ಕೋರ್ಸ್‌ ಅನ್ನು ಪರಿಚಯಿಸಲಾಗಿದೆ. ವಿದ್ಯಾರ್ಥಿಗಳ ಬೇಡಿಕೆಯಂತೆ ಎಂ.ಬಿ.ಎ. ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಲು ಇಲಾಖೆ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜನೆಗೊಂಡ ಪದವಿ ಕೋರ್ಸ್‌ಗಳು, ಬಿ.ಬಿ.ಎ. ಪದವಿಯು ದೆಹಲಿಯ ಉನ್ನತ ಶಿಕ್ಷಣ ಇಲಾಖೆಯ ಮಾನ್ಯತೆ ಪಡೆದಿದೆ. ಗ್ರಾಮೀಣ ಭಾಗದ ವಿಶೇಷವಾಗಿ ಶೇ 75ಕ್ಕೂ ಅಧಿಕ ವಿದ್ಯಾರ್ಥಿನಿಯರೂ ಸೇರಿದಂತೆ ಇದೀಗ ಕಾಲೇಜಿನಲ್ಲಿ 1,035 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇತ್ತೀಚಿಗೆ ನಡೆದ ನ್ಯಾಕ್ ಮೌಲ್ಯಮಾಪನದಲ್ಲಿ ಕಾಲೇಜು ಅತ್ಯುತ್ತಮ ಶ್ರೇಯಾಂಕ ಪಡೆದಿರುವುದು ಕಾಲೇಜಿನ ಗುಣಮಟ್ಟದ ಕಾರ್ಯನಿರ್ವಹಣೆಯ ಪ್ರತೀಕ ಎನ್ನಬಹುದು.

ಕಾರ್ಕಳ ಮಾತ್ರವಲ್ಲದೆ ಆಸುಪಾಸಿನ ತಾಲ್ಲೂಕು ಹಾಗೂ ಜಿಲ್ಲೆಗಳ ವಿದ್ಯಾರ್ಥಿಗಳಿಗೂ ಈ ಕಾಲೇಜು ವಿದ್ಯಾಕೇಂದ್ರವೆನಿಸಿದೆ. 34 ವರ್ಷಗಳಲ್ಲಿ ಕಾಲೇಜಿಗೆ 45 ರ‍್ಯಾಂಕ್‌ಗಳು ಬಂದಿವೆ.

ಸ್ಥಳೀಯ ಶಾಸಕರ ನೇತೃತ್ವದ ಕಾಲೇಜು ಆಭಿವೃದ್ಧಿ ಸಮಿತಿ, ಪೋಷಕರ ವೇದಿಕೆ, ಪೂರ್ವ ವಿದ್ಯಾರ್ಥಿ ಸಂಘ ಹಾಗೂ ಸ್ಥಳೀಯರ ಸಹಕಾರದಿಂದ ಕಾಲೇಜು ತನ್ನ ಮೂಲ ಸೌಕರ್ಯಗಳನ್ನು ವೃದ್ಧಿಸಿಕೊಳ್ಳುತ್ತಾ ರಾಜ್ಯದಲ್ಲಿಯೇ ಒಂದು ಮಾದರಿ ವಿದ್ಯಾ ಸಂಸ್ಥೆಯಾಗಿ ಬೆಳೆಯುತ್ತಿದೆ.

ಕೋರ್ಸುಗಳು: ಬಿ.ಬಿ.ಎ., ಬಿ.ಕಾಂ. (ಸಾಮಾನ್ಯ), ಬಿಕಾಂ., ಬಿ.ಎ.( ಜರ್ನಲಿಸಂ), ಬಿ.ಎ.(ರಾಜ್ಯ ಶಾಸ್ತ್ರ,ಅರ್ಥಶಾಸ್ತ್ರ, ಇತಿಹಾಸ), ಬಿ.ಸಿ.ಎ. ಹಾಗೂ ಎರಡು ವರ್ಷದ ಸ್ನಾತಕೋತ್ತರ ಪದವಿ ಎಂ.ಕಾಂ.

ಯಕ್ಷಗಾನ ಮತ್ತು ತುಳು ಲಿಪಿ  ಸರ್ಟಿಫಿಕೇಟ್ ಕೋರ್ಸುಗಳು ಸಹ ಕಾಲೇಜಿನಲ್ಲಿದೆ. ಎನ್.ಎಸ್.ಎಸ್, ರೋವರ್ಸ್‌ ಆ್ಯಂಡ್‌ ರೇಂಜರ್ಸ್‌, ರೋಟರ‍್ಯಾಕ್ಟ್ ಕ್ಲಬ್, ಯುವ ರೆಡ್ ಕ್ರಾಸ್ ಘಟಕ, ಕ್ರೀಡಾ ಸಂಘ, ನಾವಿನ್ಯತಾ ಕೂಟ, ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್ ಅಸೋಸಿಯೇಶನ್, ಯಕ್ಷಗಾನ ಸಂಘ, ಲಲಿತ ಕಲಾ ಸಂಘ, ಅಡ್ವೆಂಚರ್ ಕ್ಲಬ್, ಸಂಗೀತ ಮತ್ತು ನೃತ್ಯ ತರಬೇತಿ, ಯೋಗ ತರಬೇತಿ ಮೊದಲಾದವುಗಳು ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾಗಿವೆ.

ನಿರಂತರವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸಿ ವಿದ್ಯಾರ್ಥಿಗಳನ್ನು ಸ್ವಯಂಪ್ರೇರಿತ ರಕ್ತದಾನಿಗಳಾಗುವಂತೆ ಉತ್ತೇಜಿಸಲಾಗುತ್ತಿದೆ.

ಸಂಪೂರ್ಣ ಗಣಕೀಕೃತ ಡಿಜಿಟಲ್ ಗ್ರಂಥಾಲಯದ ಮೂಲಕ ವಿದ್ಯಾರ್ಥಿಗಳಿಗೆ ಲಕ್ಷಾಂತರ ಪಠ್ಯ, ಪರಾಮರ್ಶನ ಹಾಗೂ ನಿಯತಕಾಲಿಕೆಗಳನ್ನು ಒದಗಿಸಲಾಗುತ್ತಿದೆ. 50 ಕಂಪ್ಯೂಟರ್‌ಗಳುಳ್ಳ ಸುಸಜ್ಜಿತ 2 ಕಂಪ್ಯೂಟರ್ ಲ್ಯಾಬ್‌ಗಳಿದ್ದು, ಒಂದು ಲ್ಯಾಬ್ ಸಂಪೂರ್ಣವಾಗಿ ಸೋಲಾರ್‌ನಿಂದ ಕಾರ್ಯಾಚರಿಸುತ್ತಿದೆ.

ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಶುಚಿ ರುಚಿಯಾದ ಊಟ, ತಿಂಡಿಗಾಗಿ ಕ್ಯಾಂಟೀನ್ ಸೌಲಭ್ಯವಿದೆ. ಉಚಿತ ಅಂತರ್ಜಾಲ, ಕ್ಯಾಂಪಸ್ ವೈ–ಫೈ, ಕಾರಿಡಾರ್, ಪ್ರತಿ ತರಗತಿಯಲ್ಲೂ ಸಿ.ಸಿ.ಟಿ.ವಿ. ಕ್ಯಾಮೆರಾ ಕಣ್ಗಾವಲು ಇದೆ. 200 ಆಸನದ ಒಂದು ಮಿನಿ ಹಾಲ್ ಮತ್ತು ಒಂದು ಹೊರಾಂಗಣ ವೇದಿಕೆಯಿದೆ.

ಗ್ರಂಥಾಲಯ ಕಟ್ಟಡ ಬೇಕು: ಪ್ರತ್ಯೇಕ ಗ್ರಂಥಾಲಯ ಕಟ್ಟಡ, ವಿದ್ಯಾರ್ಥಿನಿಯರಿಗೆ ಶ್ರಾಂತಿ ಕೊಠಡಿ ಹಾಗೂ ಶೌಚಾಲಯಗಳನ್ನು ನಿರ್ಮಿಸಬೇಕು. ಆಟದ ಮೈದಾನ ಸಮತಟ್ಟುಗೊಳಿಸಿ ಹೊರ ಆವರಣ ಗೋಡೆ ನಿರ್ಮಿಸಬೇಕು. ಒಳಾಂಗಣ ಸ್ಟೇಡಿಯಂ ನಿರ್ಮಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ರಾಜ್ಯ ರಾಷ್ಟ್ರೀಯ ಮಟ್ಟದಲ್ಲಿ ಮಾಡಿರುವ ಸಾಧನೆಗಳು ಕಾಲೇಜಿನ ಗುಣಮಟ್ಟ ಕ್ರಿಯಾಶೀಲತೆಯನ್ನು ಬಿಂಬಿಸುತ್ತವೆ.
ಕಿರಣ್, ಪ್ರಾಂಶುಪಾಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.