ಉಡುಪಿ: ಸ್ವಚ್ಛ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಉಡುಪಿ ತಾಲ್ಲೂಕಿನ 80 ಬಡಗಬೆಟ್ಟು ಗ್ರಾಮ ಪಂಚಾಯಿತಿ ವಿಭಿನ್ನ ಯೋಜನೆ ಅನುಷ್ಟಾನಗೊಳಿಸಿದೆ.
ಗ್ರಾಮೀಣ ಭಾಗಗಳಲ್ಲಿ ನೈರ್ಮಲ್ಯ ಹಾಗೂ ಗ್ರಾಮೀಣ ಜನರ ಆರೋಗ್ಯದ ದೃಷ್ಟಿಯಿಂದ ಮಲ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಿದೆ. ಈ ಮೂಲಕ ಸ್ವಚ್ಛ ಉಡುಪಿ ನಿರ್ಮಾಣದ ಜಿಲ್ಲಾಡಳಿತದ ಆಶಯಕ್ಕೆ ಹೆಗಲು ಕೊಟ್ಟಿದೆ.
ಏನಿದು ಮಲ ತ್ಯಾಜ್ಯ ಸಂಸ್ಕರಣೆ:
ಹಳ್ಳಿಗಳಲ್ಲಿ ಶೌಚಾಲಯಗಳ ಗುಂಡಿಗಳು ತುಂಬಿದಾಗ ಮಲ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು ದೊಡ್ಡ ಸವಾಲು. ಸಕ್ಕಿಂಗ್ ಯಂತ್ರಗಳ ಅಲಭ್ಯತೆಯ ಕಾರಣದಿಂದ ಮಲದ ಗುಂಡಿಯಿಂದ ತ್ಯಾಜ್ಯವನ್ನು ಹೊರತೆಗೆದು ವಿಲೇವಾರಿ ಮಾಡುವುದು ಸಮಸ್ಯೆಯಾಗುತ್ತಿತ್ತು.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗ್ರಾಮೀಣ ಭಾಗಗಳಲ್ಲಿ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ 80 ಬಡಗಬೆಟ್ಟು ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲೆಯಲ್ಲೇ ಮೊದಲ ಮಲ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲಾಗಿದೆ.
ಈ ಮಲ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ₹ 63.36 ಲಕ್ಷ ವೆಚ್ಚ ತಗುಲಿದೆ. ಘಟಕವು 3 ಕೆೆಎಲ್‌ಡಿ ಅಂದರೆ ಪ್ರತಿ ದಿನ 3 ಸಾವಿರ ಲೀಟರ್ ಮಲತ್ಯಾಜ್ಯವನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದೆ.
ಮನೆ, ಅಪಾರ್ಟ್‌ಮೆಂಟ್, ವಾಣಿಜ್ಯ ಉದ್ದಿಮೆ ಕಟ್ಟಡಗಳಿಂದ ಸಂಗ್ರಹಿಸುವ ಮಲದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು ಹಾಗೂ ಉತ್ಪತ್ತಿಯಾದ ಜೈವಿಕ ಗೊಬ್ಬರವನ್ನು ಸ್ಥಳೀಯ ರೈತರಿಗೆ ರಿಯಾಯಿತಿ ದರದಲ್ಲಿ ನೀಡುವುದು ಘಟಕ ಸ್ಥಾಪನೆಯ ಪ್ರಮುಖ ಉದ್ದೇಶ.
ಸದ್ಯ ಘಟಕದ ವ್ಯಾಪ್ತಿಗೊಳಪಡುವ ಗ್ರಾಮ ಪಂಚಾಯಿತಿಗಳಾದ 80 ಬಡಗಬೆಟ್ಟು, ಅಲೆವೂರು, ಆತ್ರಾಡಿ, ಕೊಡಿಬೆಟ್ಟು, ಮಣಿಪುರ, ಕೆಮ್ಮಣ್ಣು, ಕಲ್ಯಾಣಪುರ, ಅಂಬಲಪಾಡಿ, ಕಡೆಕಾರು, ಉದ್ಯಾವರ, ಕೋಟೆ, ಬೆಳ್ಳೆ, ಕಟಪಾಡಿ ವ್ಯಾಪ್ತಿಯಲ್ಲಿ ಮಲ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತದೆ.
ಬೇರೆ ಗ್ರಾಮ ಪಂಚಾಯಿತಿಗಳು ಕೂಡ ಘಟಕದ ಸದುಪಯೋಗ ಪಡೆದುಕೊಳ್ಳಬಹುದು. ತಾಲ್ಲೂಕು ಪಂಚಾಯಿತಿಗಳ ಅನುದಾನ ಕ್ರೋಢೀಕರಿಸಿ ₹ 23 ಲಕ್ಷದಲ್ಲಿ ಮಲ ತ್ಯಾಜ್ಯ ಸಂಗ್ರಹಿಸಿ ಸಾಗಿಸುವ ವಾಹನವನ್ನು ಒದಗಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ನೈರ್ಮಲ್ಯ ಹಾಗೂ ಆರೋಗ್ಯದ ಕಾಳಜಿಯೊಂದಿಗೆ ಆರಂಭವಾಗಿರುವ ಮಲ ತ್ಯಾಜ್ಯ ನಿರ್ವಹಣಾ ಘಟಕ ಜಿಲ್ಲೆಯ ಎಲ್ಲೆಡೆ ಆರಂಭವಾದರೆ ಸ್ವಚ್ಛ ಉಡುಪಿ ನಿರ್ಮಾಣದ ಆಶಯ ಈಡೇರಲಿದೆ.
ಟ್ರಿಪ್‌ಗೆ ₹ 3000 ದರ ನಿಗದಿ
ಮಲ ತ್ಯಾಜ್ಯ ಸಂಗ್ರಹಣೆ ಮಾಡಲು ನಗರಸಭೆಯು ಪ್ರತಿ ಟ್ರಿಪ್‌ಗೆ ₹ 3000 ಹಾಗೂ ಪ್ರತಿ ಕಿ.ಮೀ ಗೆ ₹ 35 ದರ ನಿಗದಿಗೊಳಿಸಿದೆ. ಸಂಜೀವಿನಿ ಸಂಘ ಘಟಕದ ನಿರ್ವಹಣೆಯ ಹೊಣೆ ಹೊತ್ತುಕೊಂಡಿದೆ. ಜ.1ರಿಂದಲೇ ಘಟಕ ಕಾರ್ಯಾರಂಭ ಮಾಡಿದ್ದು, ಇಲ್ಲಿಯವರೆಗೂ 30 ಟ್ರಿಪ್‌ಗಳ ಮೂಲಕ ಮಲ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಿದೆ. ಸಾರ್ವಜನಿಕರಿಗೆ ಈ ಸೌಲಭ್ಯ ಬೇಕಾದರೆ ನಿಗದಿತ ಮೊತ್ತವನ್ನು ಗ್ರಾಮ ಪಂಚಾಯಿತಿಗೆ ಪಾವತಿಸಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ 0820-2010020, 9880044435 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.