ADVERTISEMENT

ಮರವಂತೆ ವರಾಹಸ್ವಾಮಿ: ವಸ್ತ್ರಸಂಹಿತೆ ಜಾರಿ

ಕರ್ಕಾಟಕ ಅಮಾವಾಸ್ಯೆಯ ಜಾತ್ರೆಯಿಂದ ಆರಂಭ

​ಪ್ರಜಾವಾಣಿ ವಾರ್ತೆ
Published 27 ಜುಲೈ 2022, 2:40 IST
Last Updated 27 ಜುಲೈ 2022, 2:40 IST
ಮರವಂತೆಯ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನ
ಮರವಂತೆಯ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನ   

ಬೈಂದೂರು: ಮರವಂತೆ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ಕರ್ಕಾಟಕ ಅಮಾವಾಸ್ಯೆ (ಜುಲೈ 28) ಎಂದು ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ. ಇತಿಹಾಸ ಪ್ರಸಿದ್ಧ ದೇವಸ್ಥಾನವಾಗಿರುವ ಇಲ್ಲಿ ಈ ವರ್ಷದಿಂದ ನೂತನ ವಸ್ತ್ರಸಂಹಿತೆಯನ್ನು ವ್ಯವಸ್ಥಾಪನಾ ಸಮಿತಿ ಜಾರಿ ಮಾಡಿದೆ. ಇದರ ಕುರಿತು ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.

ನೂತನ ನಿಯಮ ಜಾರಿ: ಇಲ್ಲಿಯವರೆಗೆ ಭಕ್ತಾದಿಗಳು ದೇವಸ್ಥಾನಕ್ಕೆ ಬರುವಾಗ ಎಲ್ಲಾ ತರಹದ ಉಡುಪು ಧರಿಸಲು ಅವಕಾಶವಿತ್ತು. ಆದರೆ ಈ ವರ್ಷದ ಜಾತ್ರೆಯಿಂದ ವಸ್ತ್ರಸಂಹಿತೆಯನ್ನು ಪಾಲಿಸಬೇಕು ಎಂದು ವ್ಯವಸ್ಥಾಪನಾ ಸಮಿತಿ ಸೂಚಿಸಿದೆ. ಪುರುಷರು ಪಂಚೆ, ಪ್ಯಾಂಟ್ ಹಾಗೂ ಅಂಗಿ ಹಾಗೂ ಮಹಿಳೆಯರು ಸೀರೆ, ಸಾಂಪ್ರದಾಯಿಕ ಶೈಲಿಯ ಚೂಡಿದಾರ ಧರಿಸಿ ಬರಬೇಕೆಂಬ ನಿಯಮವನ್ನು ಜಾರಿಗೆ ತರಲಾಗಿದೆ. ಆಧುನಿಕ ಶೈಲಿಯ ಉಡುಪು ಇತರ ಭಕ್ತರಿಗೆ ಕಿರಿಕಿರಿ ಉಂಟು ಮಾಡುತ್ತದೆ, ಹಾಗಾಗಿ ವಸ್ತ್ರಸಂಹಿತೆ ಜಾರಿಗೆ ತರುತ್ತಿದ್ದೇವೆ ಎನ್ನುವುದು ವ್ಯವಸ್ಥಾಪನಾ ಸಮಿತಿಯವರ ವಾದ. ಆದರೆ ಏಕಾಏಕಿ ವಸ್ತ್ರ ಸಂಹಿತೆ ಜಾರಿಗೆ ತರುವುದು ಸರಿಯಲ್ಲ ಎನ್ನುವುದು ಪ್ರಗತಿಪರರ ಅಭಿಪ್ರಾಯವಾಗಿದೆ.

ಪ್ರವಾಸಿತಾಣವಾದ್ದರಿಂದ ನಿರ್ಬಂಧ ಅನಿವಾರ್ಯ: ಮರವಂತೆ ಬೀಚ್‌ಗೆ ಹೊಂದಿಕೊಂಡಂತೆ ಇರುವ ದೇವಸ್ಥಾನಕ್ಕೆ ಹಲವಾರು ಪ್ರವಾಸಿಗರು ಧಾರ್ಮಿಕ ಶ್ರ‌ದ್ಧೆಯಿಂದ ಬಾರದೇ ದೇವಸ್ಥಾನವನ್ನು ಪ್ರವಾಸಿ ಕೇಂದ್ರವೆಂಬಂತೆ ಯೋಚಿಸಿ ಪ್ರವೇಶಿಸುತ್ತಾರೆ. ಬೀಚ್‌ನಲ್ಲಿ ತೊಡುವ ತುಂಡುಡುಗೆಯಲ್ಲೇ ದೇಗುಲಕ್ಕೆ ಬರುವುದರಿಂದ ಉಳಿದ ಭಕ್ತರಿಗೆ ಮುಜುಗರವಾಗುತ್ತದೆ. ಅಸಾಂಪ್ರದಾಯಿಕ ಉಡುಪಿನಲ್ಲಿ ದೇವಸ್ಥಾನ ಪ್ರವೇಶಿಸಿ, ಪೋಟೊಗಳನ್ನು ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುವ ಪ್ರಕರಣಗಳು ಕಂಡುಬಂದಿದ್ದವು.

ಇದರಿಂದ ಶೃದ್ಧಾಕೇಂದ್ರಕ್ಕೆ ಬರುವ ಆಸ್ತಿಕರಿಗೆ ನೋವಾಗುತ್ತದೆ ಎನ್ನುವ ಕಾರಣವನ್ನು ಮುಂದಿಟ್ಟು, ಈ ಕುರಿತು ಅನೇಕ ಭಕ್ತರು ವ್ಯವಸ್ಥಾಪನಾ ಸಮಿತಿಗೆ ದೂರನ್ನು ನೀಡಿದ್ದರು. ಹಾಗಾಗಿ ಭಕ್ತರು ತೊಡುವ ಉಡುಪಿನ ಕುರಿತು ಸಮಿತಿ ನಿರ್ಣಯ ತೆಗೆದುಕೊಂಡು ವಸ್ತ್ರಸಂಹಿತೆಯನ್ನು ಜಾರಿಗೆ ತಂದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.