ADVERTISEMENT

ಉಡುಪಿ: ಮಾವು ಖರೀದಿ ಜೋರು, ‘ಬಾದಾಮಿ’ಗೆ ಬೇಡಿಕೆ

ತರಕಾರಿ ದರ ಹೆಚ್ಚಳ; ಟೊಮೆಟೊ ಬೆಲೆ ಏರಿಕೆ

ಎಚ್.ಬಾಲಚಂದ್ರ
Published 24 ಮೇ 2024, 6:43 IST
Last Updated 24 ಮೇ 2024, 6:43 IST
ಮಾವು
ಮಾವು   

ಉಡುಪಿ: ಮಾರುಕಟ್ಟೆಯಲ್ಲಿ ಹಣ್ಣುಗಳ ರಾಜ ಮಾವು ವ್ಯಾಪಾರ ಜೋರಾಗಿದೆ. ಗ್ರಾಹಕರು ತರಹೇವಾರಿ ತಳಿಯ ಮಾವಿನಹಣ್ಣಿನ ಖರೀದಿಗೆ ಮುಗಿಬಿದ್ದಿದ್ದಾರೆ. ಹೊಂಬಣ್ಣ ಹಾಗೂ ವಿಭಿನ್ನ ಸುವಾಸನೆಯಿಂದ ಬಾದಾಮಿ ಮಾವು ಗ್ರಾಹಕರ ಬಾಯಲ್ಲಿ ನೀರೂರಿಸುತ್ತಿದ್ದು ಅತಿ ಹೆಚ್ಚು ಮಾರಾಟವಾಗುತ್ತಿದೆ.

ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ನೆರೆಯ ಮಹಾರಾಷ್ಟ್ರದಿಂದಲೂ ಬಾದಾಮಿ (ಆಲ್ಫಾನ್ಸೊ) ತಳಿಯ ಮಾವು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದ್ದು ದರ ದುಬಾರಿಯಾದರೂ ಗ್ರಾಹಕರು ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ.

ಜ್ಯೂಸ್‌, ಐಸ್‌ಕ್ರೀಂ ಸೇರಿದಂತೆ ಮಾವಿನ ಖಾದ್ಯಗಳ ತಯಾರಿಗೆ ಹೆಚ್ಚು ಬಳಕೆಯಾಗುವ ಬಾದಾಮಿ ತಳಿಯ ಮಾವು ರುಚಿಯಲ್ಲೂ ಇತರ ಮಾವುಗಳಿಗಿಂತ ಮಿಗಿಲಾಗಿರುವುದು ಬೇಡಿಕೆ ಹಾಗೂ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನುತ್ತಾರೆ ವ್ಯಾಪಾರಿ ನಿಸಾರ್‌. 

ADVERTISEMENT

ಜಿಲ್ಲೆಯಲ್ಲಿ ಬಾದಾಮಿ ಬೆಳೆಯುವುದಿಲ್ಲ, ಬೇಡಿಕೆಯ ಬಹುಪಾಲು ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಪೂರೈಕೆಯಾಗುವುದರಿಂದ ಸಹಜವಾರಿ ದರ ಹೆಚ್ಚಾಗಿದೆ. ಕೆ.ಜಿಗೆ ₹ 130ರಿಂದ ₹170ರವರೆಗೂ ದರ ಇದೆ. ಪೂರೈಕೆ ಹೆಚ್ಚಾದರೆ ದರ ಇಳಿಕೆಯಾಗಲಿದೆ. ಕಳೆದ 15 ದಿನಗಳಿಗೆ ಹೋಲಿಸಿದರೆ ದರ ಶೇ 20ರಷ್ಟು ಕಡಿಮೆಯಾಗಿದೆ ಎನ್ನುತ್ತಾರೆ ಅವರು.

ರುಚಿ ಹಾಗೂ ಪರಿಮಳದ ಮೂಲಕ ಗ್ರಾಹಕರ ಮನೆಗೆದ್ದಿರುವ ಮಲ್ಲಿಕಾ ಮಾವಿಗೂ ಬೇಡಿಕೆ ಹೆಚ್ಚಾಗಿದೆ. ಕೆ.ಜಿಗೆ ₹120ರಿಂದ ₹150ರವರೆಗೂ ದರ ಇದ್ದು, ಗಾತ್ರದಲ್ಲಿ ಇತರ ಮಾವುಗಳಿಗಿಂತ ದೊಡ್ಡದಾಗಿದೆ. ವಾಟೆಯ ಗಾತ್ರವೂ ಕಡಿಮೆ ಇರುವುದರಿಂದ ಮಾರಾಟ ಹೆಚ್ಚಾಗಿದೆ ಎನ್ನುತ್ತಾರೆ ವ್ಯಾಪಾರಿ ದಶರಥ್‌. ಸಿಂಧೂರ, ಬಂಗನ್‌ಪಲ್ಲಿ, ತೋತಾಪುರಿ, ರಸಪೂರಿ ಸೇರಿದಂತೆ ವಿವಿಧ ತಳಿಗಳ ಮಾವು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಮಾಂಸ ದರ: ಚಿಕನ್‌ ದುಬಾರಿಯಾಗಿದ್ದು ಬ್ರಾಯ್ಲರ್‌ ಕೋಳಿ (ಚರ್ಮರಹಿತ) ಮಾಂಸ ಕೆ.ಜಿಗೆ ₹300, ಚರ್ಮ ಸಹಿತ ₹280 ದರ ಇದೆ. ಮೊಟ್ಟೆ ಒಂದಕ್ಕೆ ₹7 ರಿಂದ ₹7.50 ಇದೆ. ಕುರಿ ಮಾಂಸ ₹800 ರಿಂದ ₹850 ಬೆಲೆ ಇದೆ.

ದುಬಾರಿಯಾದ ತರಕಾರಿ 

ಮಳೆಗಾಲ ಆರಂಭವಾಗಿದ್ದರೂ ತರಕಾರಿಗಳ ದರ ಕಡಿಮೆಯಾಗಿಲ್ಲ. ಟೊಮೆಟೊ ದರ ಗಗನಮುಖಿಯಾಗಿದ್ದು ವಾರದ ಹಿಂದೆ ಕೆ.ಜಿಗೆ ₹30ಕ್ಕೆ ದೊರೆಯುತ್ತಿದ್ದ ಟೊಮೆಟೊ ಪ್ರಸ್ತುತ ₹50ಕ್ಕೆ ತಲುಪಿದೆ. ಮಾರುಕಟ್ಟೆಗೆ ಬೇಡಿಕೆಯಷ್ಟು ಟೊಮೆಟೊ ಪೂರೈಕೆಯಾಗುತ್ತಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ಟೊಮೆಟೊ ಬೆಳೆ ಬೆಳೆಯದ ಪರಿಣಾಮ ದರ ಹೆಚ್ಚಾಗಿದೆ. ಹೊಸ ಬೆಳೆ ಕಟಾವಿಗೆ ಬರುವವರೆಗೂ ದರ ಏರುಗತಿಯಲ್ಲಿ ಸಾಗುತ್ತದೆ ಎನ್ನುತ್ತಾರೆ ವ್ಯಾಪಾರಿಗಳು.

ಅತಿಯಾದ ರೋಗಬಾಧೆ ಹಾಗೂ ಇಳುವರಿ ಕುಸಿತದ ಪರಿಣಾಮ ಎಲೆಕೋಸು ಹಾಗೂ ಹೂಕೋಸಿನ ದರವೂ ದುಬಾರಿಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ಹೂಕೋಸಿಗೆ ₹30 ರಿಂದ ₹40 ದರ ಇದ್ದರೆ ಹೂಕೋಸಿಗೆ ₹50ರಿಂದ ₹60 ದರ ಇದೆ. ಹೋಟೆಲ್‌ಗಳಲ್ಲಿ ಪಲ್ಯ ಹಾಗೂ ಗೋಬಿ ಮಂಚೂರಿ ತಯಾರಿಕೆಯಲ್ಲಿ ಎರಡೂ ಬಗೆಯ ಕೋಸು ಹೆಚ್ಚಾಗಿ ಬಳಕೆಯಾಗುತ್ತಿದ್ದು ದರ ಹೆಚ್ಚಾದರೂ ಖರೀದಿ ಅನಿವಾರ್ಯ ಎನ್ನುತ್ತಾರೆ ಹೋಟೆಲ್ ಮಾಲೀಕರು.

ಈರೇಕಾಯಿ ದರ ದಿಢೀರ್ ಹೆಚ್ಚಳವಾಗಿದ್ದು ಕೆ.ಜಿಗೆ ₹70 ರಿಂದ ₹80ಕ್ಕೆ ತಲುಪಿದೆ. ಕಳೆದವಾರ ಕೆ.ಜಿಗೆ ₹50ರ ಆಸುಪಾಸಿನಲ್ಲಿತ್ತು. ಕ್ಯಾರೆಟ್‌ ಕೂಡ ಕೆ.ಜಿಗೆ ₹60 ರಿಂದ ₹70 ಕ್ಯಾಪ್ಸಿಕಂ ₹70 ರಿಂದ ₹80 ಸೌತೆಕಾಯಿ ₹35 ರಿಂದ ₹40 ಈರುಳ್ಳಿ ₹30 ರಿಂದ ₹40 ನುಗ್ಗೆಕಾಯಿ ₹80 ರಿಂದ ₹100 ಆಲೂಗಡ್ಡೆ ₹40 ಹಸಿ ಮೆಣಸಿನಕಾಯಿ ₹100 ಬದನೆಕಾಯಿ ₹40 ಸಾಂಬಾರ್ ಸೌತೆ ₹40 ಶುಂಠಿ ₹160 ಕೊತ್ತಮರಿ ಪಾಲಕ್‌ ಕರಿಬೇವು ಹರಿವೆ ದಂಟು ಸೊಪ್ಪ ಕಟ್ಟಿಗೆ ₹6 ರಿಂದ ₹10 ದರ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.