ಉಡುಪಿ: ಬೇಸಿಗೆಯ ಆರಂಭದಲ್ಲೇ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದು ಜನರು ಹೈರಾಣಾಗುತ್ತಿದ್ದಾರೆ. ಸೂರ್ಯನ ತಾಪಕ್ಕೆ ಬಸವಳಿಯುತ್ತಿರುವ ನಾಗರಿಕರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಕಲ್ಲಂಗಡಿ, ಎಳನೀರು, ಕರ್ಬೂಜ ಹಣ್ಣಿಗೆ ಬೇಡಿಕೆ ಹೆಚ್ಚಾಗಿದ್ದು, ಭರ್ಜರಿ ವ್ಯಾಪಾರ ನಡೆಯುತ್ತಿದೆ. ಬೇಸಿಗೆಯ ಆರಂಭಕ್ಕೆ ಸರಿಯಾಗಿ ಮಾರುಕಟ್ಟೆಗೆ ಹೊರ ಜಿಲ್ಲೆ ಹಾಗೂ ಜಿಲ್ಲೆಯ ಹಲವು ಭಾಗಗಳಿಂದ ಭಾರಿ ಪ್ರಮಾಣದಲ್ಲಿ ಕಲ್ಲಂಗಡಿ ಹಣ್ಣು ಬಂದಿದ್ದು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ.
ಗಾಢ ಹಸಿರು ಬಣ್ಣದ ಕಿರೋಣ್ ತಳಿಯ ಕಲ್ಲಂಗಡಿ ಕೆ.ಜಿಗೆ ₹25 ರಿಂದ ₹30ರವರೆಗೂ ದರವಿದ್ದರೆ, ಗಾತ್ರದಲ್ಲಿ ದೊಡ್ಡದಾದ ತಿಳಿ ಹಸಿರು ನಾಮದಾರಿ ಕಲ್ಲಂಗಡಿಗೆ ಕೆ.ಜಿಗೆ ₹20 ರಿಂದ ₹25 ದರ ಇದೆ. ಈ ಬಾರಿ ಹಲವು ಬಗೆಯ ಕಲ್ಲಂಗಡಿ ತಳಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಮೇಲೆ ಹಳದಿ ಹಾಗೂ ಒಳಗೆ ಕೆಂಪು, ಮೇಲೆ ಹಸಿರು ಹಾಗೂ ಒಳಗೆ ಹಳದಿ ಬಣ್ಣದ ತೈವಾನ್ ತಳಿಯ ಕಲ್ಲಂಗಡಿ ಗ್ರಾಹಕರನ್ನು ಸೆಳೆಯುತ್ತಿವೆ.
ತೈವಾನ್ ತಳಿಯ ಕಲ್ಲಂಗಡಿ ದೇಶೀ ತಳಿಯ ಕಲ್ಲಂಗಡಿಗಿಂತ ದುಪ್ಪಟ್ಟು ದರವಿದ್ದು ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹45 ರಿಂದ ₹50ರವರೆಗೂ ದರ ಇದೆ. ದುಬಾರಿಯಾದರೂ ಗ್ರಾಹಕರು ತೈವಾನ್ ಕಲ್ಲಂಗಡಿಯನ್ನು ಸವಿಯಲು ಆಸಕ್ತಿ ತೋರುತ್ತಿರುವುದು ಕಂಡುಬರುತ್ತಿದೆ.
ಐಸ್‌ಕ್ರಿಂ ಪಾರ್ಲರ್‌ಗಳು ಫುಲ್: ದಾಹ ತೀರಿಸಿಕೊಳ್ಳಲು ಗ್ರಾಹಕರು ಐಸ್‌ಕ್ರೀಂ ಹಾಗೂ ತಂಪು ಪಾನೀಯಗಳ ಮೊರೆ ಹೋಗಿದ್ದು ಉಡುಪಿ ಬಹುತೇಕ ಐಸ್‌ಕ್ರೀಂ ಪಾರ್ಲರ್‌ಗಳು ಗಿಜಿಗಿಡುತ್ತಿವೆ. ಮಲ್ಪೆ, ಕಾಪು, ಪಡುಬಿದ್ರಿ ಬೀಚ್ ಸೇರಿದತೆ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ತಂಪು ಪಾನೀಯಗಳ ವ್ಯಾಪಾರ ಜೋರಾಗಿದೆ.
ತರಕಾರಿ ದರ ಸ್ಥಿರ: ಮಾರುಕಟ್ಟೆಯಲ್ಲಿ ತರಕಾರಿಗಳ ದರ ಬಹುತೇಕ ಸ್ಥಿರವಾಗಿದೆ. ಟೊಮೆಟೊ ಕೆ.ಜಿಗೆ ₹20 ರಿಂದ ₹25, ಆಲೂಗಡ್ಡೆ ₹35, ಸೌತೆಕಾಯಿ ₹25 ರಿಂದ ₹30, ಕ್ಯಾರೆಟ್ ₹60, ಬೀನ್ಸ್ ₹60, ಈರುಳ್ಳಿ ₹30, ಬೆಂಡೆ ಕಾಯಿ ₹50, ಸಾಂಬಾರ್ ಸೌತೆ ₹25, ಎಲೆಕೋಸು ₹25, ಹೂಕೋಸು ₹25, ಬೀಟ್‌ರೂಟ್ ₹50, ಕ್ಯಾಪ್ಸಿಕಂ ₹70, ಬದನೆಕಾಯಿ ₹35, ಹಸಿರುಮೆಣಸಿನ ಕಾಯಿ ₹70, ಈರೇಕಾಯಿ ₹40, ಮೂಲಂಗಿ ₹35, ಸಿಹಿ ಕುಂಬಳ ₹40, ಶುಂಠಿ ₹150 ದರ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.