ADVERTISEMENT

ಉಡುಪಿ‌ | ಚಿಕನ್‌ ದರ ಏರಿಕೆ; ಇಳಿಯದ ಬೆಳ್ಳುಳ್ಳಿ

ಮೀನು, ಕುರಿ ಮಾಂಸ ದರವೂ ಹೆಚ್ಚಳ

ಬಾಲಚಂದ್ರ ಎಚ್.
Published 23 ಫೆಬ್ರುವರಿ 2024, 5:06 IST
Last Updated 23 ಫೆಬ್ರುವರಿ 2024, 5:06 IST
ಚಿಕನ್‌
ಚಿಕನ್‌   

ಉಡುಪಿ: ಜಿಲ್ಲೆಯಲ್ಲಿ ತಿಂಗಳ ಹಿಂದೆ ₹200ರ ಆಸುಪಾಸಿನಲ್ಲಿದ್ದ ಕೋಳಿ ಮಾಂಸದ ದರ ಪ್ರಸ್ತುತ ಕೆ.ಜಿಗೆ ₹280ಕ್ಕೆ ಮುಟ್ಟಿದೆ. ವಾರದಿಂದ ವಾರಕ್ಕೆ ಕೋಳಿ ಮಾಂಸದ ದರ ಏರುಗತಿಯಲ್ಲಿ ಸಾಗುತ್ತಿದ್ದು ಮಾಂಸ ಪ್ರಿಯರ ಜೇಬಿಗೆ ಹೊರೆಯಾಗಿದೆ.

ಮಾರುಕಟ್ಟೆಯಲ್ಲಿ ಸದ್ಯ ಬ್ರಾಯ್ಲರ್ ಚಿಕನ್‌ (ಸ್ಕಿನ್‌ ಲೆಸ್‌) ಕೆ.ಜಿಗೆ ₹280 ಇದ್ದು, ಚರ್ಮ ಸಹಿತ ಕೋಳಿ ಮಾಂಸಕ್ಕೆ ₹260 ದರ ಇದೆ. ತಿಂಗಳ ಹಿಂದೆ ಚರ್ಮ ರಹಿತ ಕೋಳಿ ಮಾಂಸಕ್ಕೆ ₹220, ಚರ್ಮ ಸಹಿತ ಕೋಳಿ ಮಾಂಸಕ್ಕೆ ₹200 ದರ ಇತ್ತು. ನಂತರ ನಿಧಾನವಾಗಿ ಏರಿಕೆ ಹಾದಿಯಲ್ಲಿ ಸಾಗಿದ ದರ ಮುನ್ನೂರರ ಗಡಿಯ ಸಮೀಪಕ್ಕೆ ಬಂದು ತಲುಪಿದೆ.

ಬೇಡಿಕೆಯಷ್ಟು ಕೋಳಿಗಳು ಪೂರೈಕೆಯಾಗುತ್ತಿಲ್ಲ. ವಾರದಿಂದ ವಾರಕ್ಕೆ ದರ ಜಿಗಿಯುತ್ತಿರುವುದನ್ನು ನೋಡಿದರೆ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನುತ್ತಾರೆ ಚಿಕನ್ ಸೆಂಟರ್ ಮಾಲೀಕರಾದ ಮಹಮ್ಮದ್‌ ರಿಜ್ವಾನ್‌.

ADVERTISEMENT

ಮೊಟ್ಟೆಯ ದರವೂ ಹೆಚ್ಚಾಗಿದ್ದು ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಗೆ ₹6.50ರಿಂದ ₹7 ದರ ಇದೆ. ಕುರಿ, ಆಡು ಮಾಂಸದರ ಸ್ಥಿರವಾಗಿದ್ದು ಕೆ.ಜಿಗೆ ₹700 ರಿಂದ ₹850ರವರೆಗೆ ಮಾರಾಟವಾಗುತ್ತಿದೆ. ಅನ್ಯ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿಯಲ್ಲಿ ಕುರಿ ಮಾಂಸ ದರ ₹200 ರಿಂದ ₹250 ಹೆಚ್ಚಾಗಿರುವುದನ್ನು ಕಾಣಬಹುದು. ಕುರಿಗಳ ಸಾಗಣೆ ವೆಚ್ಚ, ಮೇವಿನ ಕೊರತೆ ಕಾರಣದಿಂದ ಮಾಂಸ ದರ ಹೆಚ್ಚಾಗಿದೆ ಎನ್ನುತ್ತಾರೆ ವ್ಯಾಪಾರಿ ಮಲ್ಲಪ್ಪ.

ಮೀನಿನ ದರವೂ ಹೆಚ್ಚಳ: ಸಮುದ್ರದಲ್ಲಿ ಮೀನಿನ ಅಲಭ್ಯತೆಯ ಪರಿಣಾಮ ಮೀನಿನ ದರವೂ ಹೆಚ್ಚಾಗಿದೆ. ಹೆಚ್ಚು ಬಳಕೆಯಲ್ಲಿರುವ ಬಂಗುಡೆ ಕೆ.ಜಿಗೆ ₹280 ರಿಂದ ₹300, ಅಂಜಲ್‌ ಕೆ.ಜಿಗೆ ₹700 ರಿಂದ ₹800, ಪಾಂಪ್ಲೆಟ್‌ ಕೆ.ಜಿಗೆ ₹1,200, ಡಿಸ್ಕೊ ₹250, ಬೊಂಡಾಸ್‌ ₹300 ದರ ಇದೆ.

ಈ ಬಾರಿ ನಿರೀಕ್ಷೆಯಷ್ಟು ಮೀನುಗಳು ಲಭ್ಯವಾಗಿಲ್ಲ. ಹೆಚ್ಚು ಬೇಡಿಕೆ ಇರುವ ಪಾಂಪ್ಲೆಟ್‌ ಹಾಗೂ ಅಂಜಲ್ ಮೀನುಗಳು ಸಿಗುತ್ತಿಲ್ಲ. ಪರಿಣಾಮ ಹಾಕಿದ ಬಂಡವಾಳವೂ ಕೈಸೇರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಮೀನುಗಾರ ವಿಶ್ವನಾಥ್ ಸುವರ್ಣ.

ಬೆಳ್ಳುಳ್ಳಿ ದುಬಾರಿ: 2 ತಿಂಗಳ ಹಿಂದೆ ಗಗನಕ್ಕೇರಿರುವ ಬೆಳ್ಳುಳ್ಳಿ ದರ ಇನ್ನೂ ಇಳಿಕೆಯಾಗಿಲ್ಲ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹440 ರಿಂದ ₹480ರವರೆಗೂ ಮಾರಾಟವಾಗುತ್ತಿದೆ. ಡಿಸೆಂಬರ್‌ ಮಧ್ಯಾವಧಿಯಲ್ಲಿ ಕೆ.ಜಿಗೆ ₹300ರ ಗಡಿ ದಾಟಿದ ಬೆಳ್ಳುಳ್ಳಿ ಬೆಲೆ ನಂತರ ಇಳಿಕೆಯಾಗಿಲ್ಲ.

ಜಿಲ್ಲೆಯಲ್ಲಿ ಮೀನು ಹಾಗೂ ಮಾಂಸಹಾರಿ ಹೋಟೆಲ್‌ಗಳು ಹೆಚ್ಚಾಗಿದ್ದು ಮಸಾಲೆ ಪದಾರ್ಥಗಳ ತಯಾರಿಕೆಗೆ ಬೆಳ್ಳುಳ್ಳಿ ಅಗತ್ಯವಾಗಿರುವುದರಿಂದ ಹೋಟೆಲ್ ಉದ್ಯಮಕ್ಕೆ ದರ ಏರಿಕೆ ಬಿಸಿ ತಟ್ಟಿದೆ.

ಮಾಂಸದ ಇಳುವರಿ ಕಡಿಮೆ: ಬೆಲೆ ಹೆಚ್ಚಳ

ಬಿಸಿಲಿನ ಪ್ರಖರತೆ ಹೆಚ್ಚಳದಿಂದ ಕೋಳಿ ಮರಿಗಳ ಉತ್ಪಾದನೆ ಕುಂಠಿತವಾಗಿದ್ದು ಮಾಂಸದ ಇಳುವರಿ ಕಡಿಮೆಯಾಗಿದೆ. ಉಷ್ಣತೆ ತಾಳಲಾರದೆ ಕೋಳಿಗಳು ಸಾಯುತ್ತಿರುವುದರಿಂದ ಉದ್ಯಮಕ್ಕೆ ಪೆಟ್ಟುಬಿದ್ದಿದೆ. ಇದರ ಜತೆಗೆ ಕೋಳಿ ಸಾಕಾಣೆಗೆ ಪ್ರಮುಖವಾಗಿ ಬಳಕೆಯಾಗುವ ಆಹಾರದ ದರ ಗಗನಕ್ಕೇರಿರುವುದರಿಂದ ನಿರ್ವಹಣಾ ವೆಚ್ಚದಲ್ಲಿ ಏರಿಕೆಯಾಗಿದ್ದು ಮಾಂಸ ದರ ಏರಿಕೆ ಅನಿವಾರ್ಯ ಎನ್ನುತ್ತಾರೆ ಕೋಳಿ ಸಾಕಣೆದಾರ ವಿಶ್ವನಾಥ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.