ಉಡುಪಿ: ಉತ್ಥಾನ ದ್ವಾದಶಿ ಅಂಗವಾಗಿ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಬುಧವಾರ ರಾತ್ರಿ ಲಕ್ಷ ದೀಪೋತ್ಸವ ವಿಜೃಂಭಣೆಯಿಂದ ನೆರವೇರಿತು.
ಲಕ್ಷ ದೀಪೋತ್ಸವ ಅಂಗವಾಗಿ ರಥ ಬೀದಿಯಲ್ಲಿ ರಥೋತ್ಸವ ಮತ್ತು ಮಧ್ವ ಸರೋವರದಲ್ಲಿ ತೆಪ್ಪೋತ್ಸವ ನಡೆಯಿತು. ನೂರಾರು ಮಂದಿ ಭಕ್ತರು ಇದನ್ನು ಕಣ್ತುಂಬಿಕೊಂಡರು.
ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ತುಳಸೀಪೂಜೆ ಅಂಗವಾಗಿ ಕ್ಷೀರಾಬ್ದಿ ನಡೆಯಿತು.
ಬೆಳಿಗ್ಗೆ ಪ್ರಬೋಧೋತ್ಸವ ನಡೆಯಿತು. ಪರ್ಯಾಯ ಪುತ್ತಿಗೆ ಕಿರಿಯ ಸುಶ್ರೀಂದ್ರತೀರ್ಥ ಶ್ರೀಪಾದರು ಶ್ರೀಕೃಷ್ಣನಿಗೆ ಅಮಲೇಶ ಅಲಂಕಾರ ಮಾಡಿದ್ದರು.
ತುಳಸಿ ಬೃಂದಾವನವನ್ನು ಅಲಂಕರಿಸಿ ತುಳಸಿ ಪೂಜೆ ನಡೆಸಲಾಯಿತು. ಸುಗುಣೇಂದ್ರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು. ಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.
ಮಠದ ದಿವಾನ ನಾಗರಾಜ ಆಚಾರ್ಯ, ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ, ವಿದ್ವಾನ್ ಡಾ. ಬಿ. ಗೋಪಾಲಾಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ ತಂತ್ರಿ, ನಾರಾಯಣ ಸರಳಾಯ ಹಾಗು ಭಕ್ತರು ಪೂಜೆಯಲ್ಲಿ ಪಾಲ್ಗೊಂಡರು.
ಶ್ರೀಕೃಷ್ಣ ಮಠದಲ್ಲಿ ನಡೆಯುವ ನಿತ್ಯೋತ್ಸವ ಸಹಿತ ಬ್ರಹ್ಮರಥೋತ್ಸವಕ್ಕೆ ಪೂರಕವಾಗಿ ಬ್ರಹ್ಮರಥದ ಶಿಖರ ಪೂಜೆ ನೆರವೇರಿಸಿ ಶಿಖರ ಕಲಶ ಪ್ರತಿಷ್ಠೆ ನಡೆಸಲಾಯಿತು. ದೀಪೋತ್ಸವಕ್ಕೆ ಹಣತೆ ಇಡುವ ಕಾರ್ಯಕ್ಕೆ ಪುತ್ತಿಗೆ ಶ್ರೀಪಾದದ್ವಯರು ಚಾಲನೆ ನೀಡಿದರು.
ಲಕ್ಷ ದೀಪೋತ್ಸವಕ್ಕಾಗಿ ಮಠದಲ್ಲಿ ಮಂಗಳವಾರದಿಂದಲೇ ಭರದ ಸಿದ್ಧತೆ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.