ADVERTISEMENT

ಉಡುಪಿ | ಮಾನಸಿಕ ಸಮಸ್ಯೆ: ಹೆಚ್ಚುತ್ತಿದೆ ರೋಗಿಗಳ ಸಂಖ್ಯೆ

ಮಾನಸಿಕ ರೋಗಕ್ಕೆ ಒಳರೋಗಿ ವಿಭಾಗದಲ್ಲಿ ಚಿಕಿತ್ಸೆ: ಎರಡನೇ ಸ್ಥಾನದಲ್ಲಿದೆ ಉಡುಪಿ ಜಿಲ್ಲಾಸ್ಪತ್ರೆ

ನವೀನ ಕುಮಾರ್ ಜಿ.
Published 9 ಅಕ್ಟೋಬರ್ 2024, 7:34 IST
Last Updated 9 ಅಕ್ಟೋಬರ್ 2024, 7:34 IST
ಡಾ.ಐ.ಪಿ. ಗಡಾದ್‌
ಡಾ.ಐ.ಪಿ. ಗಡಾದ್‌   

ಉಡುಪಿ: ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯ ಕೂಡ ಮನುಷ್ಯನಿಗೆ ಅತೀ ಮುಖ್ಯ. ಆದರೆ ಇಂದು ಒತ್ತಡದ ಜೀವನ ಶೈಲಿ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಮಾನಸಿಕ ರೋಗಕ್ಕೆ ಚಿಕಿತ್ಸೆ ಪಡೆಯುವವರ ಸಂಖ್ಯೆ ಏರಿಕೆಯಾಗುತ್ತಿದೆ.

ಜಿಲ್ಲೆಯಲ್ಲೂ ಮಾನಸಿಕ ರೋಗಕ್ಕೆ ಚಿಕಿತ್ಸೆ ಪಡೆಯುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೇ. ಮಾನಸಿಕ ರೋಗಕ್ಕೆ ಒಳರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದ ರೋಗಿಗಳ ಸಂಖ್ಯೆಯ ಆಧಾರದಲ್ಲಿ ಉಡುಪಿಯ ಜಿಲ್ಲಾಸ್ಪತ್ರೆಯು ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ.

ಬದಲಾಗುತ್ತಿರುವ ಜೀವನ ಶೈಲಿ, ಮೊಬೈಲ್‌ನಂತಹ ಗ್ಯಾಜೆಟ್‌ಗಳ ಅತಿಯಾದ ಬಳಕೆ ಕೂಡ ನಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ ಎಂದು ವೈದ್ಯಕೀಯ ಮೂಲಗಳು ಹೇಳುತ್ತವೆ.

ADVERTISEMENT

ರಾಜ್ಯದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಕೆಲವು ತಿಂಗಳ ಹಿಂದೆ ‌ಸರ್ಕಾರವು ‘ಕರ್ನಾಟಕ ಬ್ರೈನ್‌ ಹೆಲ್ತ್‌ ಇನಿಶಿಯೇಟಿವ್‌’ ಕಾರ್ಯಕ್ರಮವನ್ನು ಜಾರಿಗೊಳಿಸಿತ್ತು. ಮಾನಸಿಕ ಸಮಸ್ಯೆಗೆ ಸಂಬಂಧಿಸಿ ರೋಗಿಗಳಿಗೆ ಅವರಿರುವ ಪ್ರದೇಶಗಳಲ್ಲೇ ಚಿಕಿತ್ಸೆ ನೀಡಲು ಈ ಕಾರ್ಯಕ್ರಮದ ಅಡಿ ಸಾಧ್ಯವಾಗಿದೆ. ಅದರಂತೆ ಜಿಲ್ಲಾಮಟ್ಟದಲ್ಲಿ ತಂಡವೊಂದನ್ನು ರಚಿಸಲಾಗಿದ್ದು. ಅದು ಜಿಲ್ಲಾಸ್ಪತ್ರೆಯ ನರಶಾಸ್ತ್ರಜ್ಞರು, ಸಮಾಲೋಚಕರು, ಪಿಸಿಯೊಥೆರಪಿಸ್ಟ್‌ಗಳನ್ನು ಒಳಗೊಂಡಿದೆ.

‘ಇಂದು ಎಲ್ಲಾ ಕ್ಷೇತ್ರಗಳಲ್ಲೂ ಕೆಲಸದ ಒತ್ತಡ ಅಧಿಕವಾಗಿದೆ. ಇದೇ ಕಾರಣಕ್ಕೆ ಈ ಬಾರಿಯ ಮಾನಸಿಕ ಆರೋಗ್ಯ ಜಾಗೃತಿ ಸಪ್ತಾಹವು ‌‘ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಸಮಯ’ ಎಂಬ ವಿಷಯವನ್ನು ಆಧರಿಸಿದೆ. ಇಂದು ಜನರು ಹಣದ ಬೆನ್ನತ್ತಿ, ಒತ್ತಡದ ಜೀವನವನ್ನು ತಾವಾಗಿಯೇ ತಂದುಕೊಂಡಿದ್ದಾರೆ. ಒಳ್ಳೆಯ ಆಹಾರ, ಗಾಳಿ, ಬೆಳಕು, ನಿದ್ರೆ ಇವು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಅತೀ ಮುಖ್ಯ. ಆದರೆ ಇಂದು ನಾವು ಇವುಗಳನ್ನು ಕಡೆಗಣಿಸುತ್ತಿದ್ದೇವೆ. ಇದರಿಂದಲೇ ಮಾನಸಿಕ ಸಮಸ್ಯೆಗಳು ಕಾಡುತ್ತಿವೆ’ ಎನ್ನುತ್ತಾರೆ ಜಿಲ್ಲಾ ವೈದ್ಯಾಧಿಕಾರಿ ಡಾ. ಐ.ಪಿ. ಗಡಾದ್‌.

‘ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ತಂಡವು ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹೋಗಿ ಮಾನಸಿಕ ಸಮಸ್ಯೆ ಎದುರಿಸುವವರಿಗೆ ಚಿಕಿತ್ಸೆ ನೀಡುತ್ತಿದೆ. ಈ ತಂಡದಲ್ಲಿ ಮನೋವೈದ್ಯರು, ಸ್ಟಾಫ್‌ ನರ್ಸ್, ಕಮ್ಯುನಿಟಿ ವರ್ಕರ್‌ ಇರುತ್ತಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ ಮಾನಸಿಕ ಸಮಸ್ಯೆ ಇರುವವರೊಂದಿಗೆ ಆಪ್ತ ಸಮಾಲೋಚನೆ ನಡೆಸುತ್ತಾರೆ ಮತ್ತು ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ’ ಎಂದು ವಿವರಿಸುತ್ತಾರೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಲತಾ ನಾಯಕ್‌.

ಅಲ್ಲದೆ ಈ ತಂಡವು ಸ್ತ್ರೀಶಕ್ತಿ ಸಂಘ, ಕಾಲೇಜುಗಳಿಗೆ ಭೇಟಿ ನೀಡಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡುತ್ತಿದೆ ಎಂದೂ ಅವರು ತಿಳಿಸಿದರು.

ಇಂದು ಜನರಲ್ಲಿ ಆಹಾರದ ಬಗ್ಗೆ ಸಾಕಷ್ಟು ಕಾಳಜಿ ಮೂಡಿದೆ. ಅದೇ ರೀತಿ ಮಾನಸಿಕ ಆರೋಗ್ಯದ ಕುರಿತೂ ಕಾಳಜಿ ಮೂಡಬೇಕಾದ ಅಗತ್ಯವಿದೆ.
-ಡಾ.ಐ.ಪಿ.ಗಡಾದ್‌, ಜಿಲ್ಲಾ ವೈದ್ಯಾಧಿಕಾರಿ
ಕೋವಿಡ್‌ ನಂತರ ಜನರಲ್ಲಿ ಮಾನಸಿಕ ಸಮಸ್ಯೆಗಳು ಹೆಚ್ಚಾಗಿವೆ. ಅತಿಯಾದ ಮಾನಸಿಕ ಒತ್ತಡವು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
-ಡಾ.ಲತಾ ನಾಯಕ್‌, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.