ADVERTISEMENT

ನೇಮಕಾತಿ, ವರ್ಗಾವಣೆ ಭ್ರಷ್ಟಾಚಾರಕ್ಕೆ ಕಡಿವಾಣ: ಸಚಿವ ಸುನಿಲ್ ಕುಮಾರ್

ಎರಡೂ ಇಲಾಖೆಗಳ ಕಾರ್ಯ ನಿರ್ವಹಣೆಗೆ 100 ದಿನಗಳ ಕ್ರಿಯಾ ಯೋಜನೆ ತಯಾರಿ:

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 14:05 IST
Last Updated 30 ಆಗಸ್ಟ್ 2021, 14:05 IST
ಸಚಿವ ಸುನಿಲ್ ಕುಮಾರ್
ಸಚಿವ ಸುನಿಲ್ ಕುಮಾರ್   

ಉಡುಪಿ: ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಡಳಿತದಲ್ಲಿ ಪಾರದರ್ಶಕತೆಗೆ ಒತ್ತು ನೀಡುವ ಮೂಲಕ ವರ್ಗಾವಣೆ ಹಾಗೂ ನೇಮಕಾತಿಯಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದ ನೀಡದಂತೆ ಕಾರ್ಯ ನಿರ್ವಹಿಸುವುದಾಗಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಸೋಮವಾರ ಪ್ರೆಸ್‌ಕ್ಲಬ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಎರಡೂ ಇಲಾಖೆಗಳ ಕಾರ್ಯವ್ಯಾಪ್ತಿ ವಿಸ್ತಾರವಾಗಿದ್ದು, ಜನಸ್ನೇಹಿ ಆಡಳಿತಕ್ಕೆ ಒತ್ತು ನೀಡಲಾಗುವುದು. ಇಲಾಖೆಯಲ್ಲಿ ಭ್ರಷ್ಟಾಚಾರ, ಅವ್ಯವಹಾರ ನಡೆದರೆ ತಪ್ಪಿತಸ್ತ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.‌‌

ಆ.31ರಿಂದ ರಾಜ್ಯ ಪ್ರವಾಸ ಮಾಡುತ್ತಿದ್ದು, ಪ್ರಮುಖ ವಿದ್ಯುತ್ ಉತ್ಪಾದನಾ ಸ್ಥಾವರಗಳಿಗೆ ಹಾಗೂ ಎಲ್ಲ ವಿದ್ಯುತ್ ಸರಬರಾಜು ನಿಗಮಗಳಿಗೆ ಭೇಟಿನೀಡಲಾಗುವುದು. ಪರಿಸರ ಸ್ನೇಹಿ ಇಂಧನ ಉತ್ಪಾದನೆ ನಿಟ್ಟಿನಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯನ್ನು ಹಂತ ಹಂತವಾಗಿ ಕಡಿತಗೊಳಿಸಿ, ಜಲ ವಿದ್ಯುತ್ ಹಾಗೂ ಸೌರ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ADVERTISEMENT

ರೈತರು, ಉದ್ಯಮಿಗಳು ಹಾಗೂ ಗ್ರಾಹಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಇಂಧನ ಇಲಾಖೆಯಲ್ಲಿ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಸೆ.10ರಂದು ಹೊಸ ಕಾರ್ಯಕ್ರಮಗಳನ್ನು ಪ್ರಕಟಿಸಲಾಗುವುದು ಎಂದರು.

ಎಲ್ಲ ಅಕಾಡೆಮಿಗಳ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರು, ಸದಸ್ಯರು ಹಾಗೂ ರಂಗಾಯಣದ ನಿರ್ದೇಶಕರನ್ನು ಭೇಟಿ ಮಾಡಿ ಚರ್ಚಿಸಿದ್ದು, ಸಲಹೆಗಳ ಆಧಾರದಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅಗತ್ಯ ಸಿಬ್ಬಂದಿ ನೇಮಕಾತಿ ಮಾಡಲಾಗುವುದು ಎಂದರು.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಕಾರ್ಯಕ್ರಮಗಳು ಕೋವಿಡ್‌ ಮಾರ್ಗಸೂಚಿಯಂತೆ ಶಿಕ್ಷಣ ಇಲಾಖೆ, ಯುವ ಸಬಲೀಕರಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ನಡೆಯಲಿದೆ.

ನಾಡಗೀತೆಯ ಅವಧಿ ಎಷ್ಟಿರಬೇಕು, ಸಂಗೀತದ ಆಲಾಪನೆ ಹೇಗಿರಬೇಕು, ಏಕರೂಪದ ಭುವನೇಶ್ವರಿ ಭಾವಚಿತ್ರಗಳನ್ನು ಬಳಸುವ ಸಂಬಂಧ ಶೀಘ್ರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ನಾಡಗೀತೆಯ ಅವಧಿ ಸಂಬಂಧ ಚನ್ನವೀರ ಕಣವಿ ಸಮಿತಿ ನೀಡಿರುವ ಶಿಫಾರಸನ್ನೂ ಪರಿಗಣಿಸಲಾಗುವುದು. ನಾಡಧ್ವಜ ಹೇಗಿರಬೇಕು ಎಂಬ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿ ಶಿಲ್ಪಕಲಾ ಹಾಗೂ ಫರ್ನಿಚರ್ ಹಬ್ ಸೇರಿದಂತೆ ಸಣ್ಣ ಉದ್ಯಮಗಳ ಸ್ಥಾಪನೆಗೆ ಒತ್ತು ನೀಡಲಾಗುವುದು. ಇದಕ್ಕಾಗಿ ಪ್ರತಿ ತಾಲ್ಲೂಕಿನಲ್ಲಿ 100 ಎಕರೆ ಜಾಗ ಗುರುತಿಸಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಗೋಶಾಲೆ ಆರಂಭಿಸಲಾಗುವುದು. ಉಡುಪಿಯಲ್ಲಿ ಜಿಲ್ಲಾ ರಂಗಮಂದಿರ ನಿರ್ಮಾಣ ಸಂಬಂಧ 15 ದಿನಗಳೊಳಗೆ ಸಿಹಿ ಸುದ್ದಿ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

‘ವೇತನ ನೀಡದ ಮೇಳಗಳ ವಿರುದ್ಧ ಕ್ರಮ’

ಯಕ್ಷಗಾನ ಮೇಳಗಳು ಕಲಾವಿದರಿಗೆ ಪೂರ್ಣ ವೇತನ ನೀಡಬೇಕು ಎಂದು ಸರ್ಕಾರ ಆದೇಶಿಸಿದೆ. ಆದರೂ ಕೆಲವು ಮೇಳಗಳು ಕಲಾವಿದರಿಗೆ ವೇತನ ನೀಡದ ಬಗ್ಗೆ ದೂರುಗಳು ಬಂದಿವೆ. ಈ ಸಂಬಂಧ ಮುಜರಾಯಿ ಇಲಾಖೆ ಸಚಿವರು ಹಾಗೂ ಆಯುಕ್ತರೊಂದಿಗೆ ಚರ್ಚಿಸಿ, ಕಲಾವಿದರಿಗೆ ವೇತನ ನೀಡದ ಯಕ್ಷಗಾನ ಮೇಳಗಳ ವಿರುದ್ಧ ಕ್ರಮ ಜರುಗಿಸಲಾಗುವುದು. 10 ದಿನಗಳೊಳಗೆ ಯಕ್ಷಗಾನ ಅಕಾಡೆಮಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

‘ಸಂಗ್ರಹವಾದ ಪುಸ್ತಕಗಳು ಗ್ರಂಥಾಲಯಗಳಿಗೆ’

ಹೂವಿನ ಹಾರಗಳ ಬದಲಾಗಿ ಪುಸ್ತಕಗಳನ್ನು ನೀಡುವಂತೆ ಮಾಡಿದ ಮನವಿಗೆ ನಿರೀಕ್ಷೆಗೂ ಮೀರಿ ಸ್ಪಂದನ ಸಿಕ್ಕಿದ್ದು, ಸಾವಿರಾರು ಪುಸ್ತಕಗಳು ಬಂದಿವೆ. ಸೆ.5ರಂದ ಕಾರ್ಕಳದಲ್ಲಿ ಪುಸ್ತಕಗಳ ಪ್ರದರ್ಶನ ಆಯೋಜಿಸಿದ್ದು, ಬಳಿಕ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ನೀಡಲಾಗುವುದು. ಶೈಕ್ಷಣಿಕ ವಿಚಾರಗಳಿಗೆ ಸಂ‌ಬಂಧಿಸಿದ ಪುಸ್ತಕಗಳನ್ನು ಕಾಲೇಜುಗಳ ಗ್ರಂಥಾಲಯಗಳಿಗೆ ನೀಡಲಾಗುವುದು. ಪುಸ್ತಕ ಸಂಸ್ಕೃತಿ ಮತ್ತೆ ಮುನ್ನಲೆಗೆ ಬಂದಿರುವುದು ಖುಷಿಯ ವಿಚಾರ ಎಂದು ಸಚಿವ ವಿ.ಸುನಿಲ್ ಕುಮಾರ್‌ ಹೇಳಿದರು.

‘ಹಿಂದುತ್ವ ಪರ ನಿಲುವು ಬದಲಾಗುವುದಿಲ್ಲ’

ಸಚಿವನಾದರೂ ದತ್ತಪೀಠ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ದತ್ತಪೀಠಕ್ಕೆ ಸಂಪರ್ಕ ರಸ್ತೆ, ಕುಡಿಯುವ ನೀರು, ಕಚೇರಿ, ಪ್ರವಾಸಿ ಗೃಹ ಸೇರಿದಂತೆ ಆಡಳಿತಾತ್ಮಕ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ. ಈಗ ಹಿಂದೂ ಅರ್ಚಕರ ನೇಮಕ, ತ್ರಿಕಾಲ ಪೂಜೆ, ಗೋರಿಗಳ ಸ್ಥಳಾಂತರ ಸೇರಿದಂತೆ ಭಾವನಾತ್ಮಕ ಬೇಡಿಕೆಗಳು ಈಡೇರುವುದು ಬಾಕಿ ಇದೆ. ಈ ಎಲ್ಲ ವಿಚಾರಗಳು ನ್ಯಾಯಾಲಯದಲ್ಲಿವೆ. ಸಚಿವನಾಗಿದ್ದರೂ ಹಿಂದೂಪರ ನಿಲುವುಗಳು, ಸಿದ್ಧಾಂತಗಳು ಬದಲಾಗುವುದಿಲ್ಲ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.