ಉಡುಪಿ: ಜನಪರ ಯೋಜನೆಗಳ ಜಾರಿ ಮೂಲಕ ಜನರಿಗೆ ಸಮಸ್ಯೆಗಳನ್ನು ಎದುರಿಸಲು ಶಕ್ತಿ ತುಂಬುತ್ತಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನವ ಭಾರತ ನಿರ್ಮಾಣ ಮಾಡುವ ಕಾರ್ಯ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಂಸಿಸಿದರು.
ಕೇಂದ್ರ ಸರ್ಕಾರದ 8 ವರ್ಷಗಳ ಸಾಧನೆಗಳನ್ನು ತಿಳಿಸಲು ಮಣಿಪಾಲದ ಕಂಟ್ರಿಇನ್ ಹೋಟೆಲ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಆರೋಗ್ಯ, ನೈರ್ಮಲ್ಯ, ಮಹಿಳಾ ಸಬಲೀಕರಣದ ಮಹತ್ವ ಅರಿತು ಸ್ವಚ್ಛ ಭಾರತ ಯೋಜನೆ ಜಾರಿಗೊಳಿಸಿದ ಮೋದಿ ಬಹಿರ್ದೆಸೆ ಮುಕ್ತ ದೇಶ ಸಂಕಲ್ಪ ಮಾಡಿದ್ದಾರೆ. ಮಹಿಳೆಯರಿಗೆ ಗೌರವಯುತ ಜೀವನಕ್ಕೆ ದಾರಿ ತೋರಿಸಿದ್ದಾರೆ ಎಂದರು.
ಕೃಷಿ, ಉತ್ಪಾದನೆ ಹಾಗೂ ಸೇವಾ ವಲಯದ ಅಭಿವೃದ್ಧಿಗೆ ಒತ್ತು ನೀಡಿದ್ದು, ಕೃಷಿ ಸಮ್ಮಾನ ಯೋಜನೆಯಡಿ 20 ಕೋಟಿ ರೈತರಿಗೆ ಸಹಾಯಧನ ನೀಡಿ ರೈತರ ಆತ್ಮಗೌರವ ಹೆಚ್ಚಿಸಿ ಆರ್ಥಿಕ ಶಕ್ತಿ ತುಂಬಿದೆ. ಬೇವು ಲೇಪಿತ ಯೂರಿಯಾ ಉತ್ಪಾದನೆ ಹಾಗೂ ರಸಗೊಬ್ಬರಗಳ ತಯಾರಿಕೆಗೆ ಒತ್ತು ನೀಡಿದೆ.
ಸೇವಾವಲಯಕ್ಕೆ ಶಕ್ತಿ ತುಂಬಲು ಐಟಿ, ಬಿಟಿ, ಫಾರ್ಮಾ ವಲಯಗಳಲ್ಲಿ ಹೆಚ್ಚಿನ ಬಂಡವಾಳ ಹೂಡಲಾಗಿದೆ. ಪರಿಣಾಮ ವಿಶ್ವದಲ್ಲಿಯೇ ಅತಿ ಹೆಚ್ಚು ಸ್ಟಾರ್ಟ್‌ಅಪ್‌ಗಳು ಭಾರತದಲ್ಲಿ ಸ್ಥಾಪನೆಯಾಗಿದ್ದರೆ, ದೇಶದಲ್ಲಿ ಅತಿ ಹೆಚ್ಚು ಸ್ಟಾರ್ಟ್‌ಅಪ್‌ಗಳು ಕರ್ನಾಟಕದಲ್ಲಿ ತಲೆ ಎತ್ತಿವೆ ಎಂದರು.
ತೋಟಗಾರಿಕೆ, ಕೃಷಿ, ರೇಷ್ಮೆ ವಲಯದಲ್ಲಿ ಸ್ಟಾರ್ಟ್‌ಅಪ್‌ಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಮೀನುಗಾರರಿಗೆ ಹಾಗೂ ನೇಕಾರರಿಗೂ ಸ್ಟಾರ್ಟ್‌ಅಪ್‌ಗಳ ಆರಂಭಕ್ಕೆ ಉತ್ತೇಜನ ನೀಡಲಾಗುವುದು ಎಂದು ಬೊಮ್ಮಾಯಿ ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಎದುರಾದ ಸವಾಲುಗಳನ್ನು ಆತ್ಮನಿರ್ಭರ ಭಾರತ ಯೋಜನೆಯ ಮೂಲಕ ಸಮರ್ಥವಾಗಿ ಎದುರಿಸಲಾಗಿದೆ. ದೇಶವನ್ನು ಸ್ವಾವಲಂಬನೆಯತ್ತ ಕೊಂಡೊಯ್ಯಲು ಕೈಗಾರಿಕೆ, ತಂತ್ರಜ್ಞಾನ, ರಕ್ಷಣೆ ಹಾಗೂ ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಪ್ರಮಾಣವನ್ನು ಹೆಚ್ಚಿಸಲಾಗಿದೆ.
ಗರೀಬ್ ಕಲ್ಯಾಣ್ ಯೋಜನೆಯ ಮೂಲಕ ಅಸ್ಥಿರವಾಗಿದ್ದ ದುಡಿಯವ ವರ್ಗಕ್ಕೆ ಸ್ಥಿರ ಬದುಕು ನೀಡಿ, ಆಹಾರ, ಆರೋಗ್ಯ ಹಾಗೂ ಕೆಲಸದ ಭದ್ರತೆ ಒದಗಿಸಲಾಗಿದೆ. ದೇಶದ ಅಭಿವೃದ್ಧಿಯಲ್ಲಿ ಜನಸಾಮಾನ್ಯರೂ ಪಾಲುದಾರರಾಗಬೇಕು ಎಂಬ ಸರ್ಕಾರದ ಆಶಯ ಈಡೇರಿದೆ.
ಹಿಂದಿನ ಯವ ಪ್ರಧಾನಿಯೂ ಧೈರ್ಯವಾಗಿ ಹೇಳಲು ಸಾಧ್ಯವಾಗದಂತಹ ಯೋಜನೆಗಳನ್ನು ಪ್ರಧಾನಿ ಮೋದಿ ದಿಟ್ಟತನದಿಂದ ಜಾರಿಗೊಳಿಸಿದ್ದಾರೆ. ಜಲಜೀವನ ಮಿಷನ್ ಯೋಜನೆಯಡಿ ರಾಜ್ಯ ಸರ್ಕಾರ ಕಳೆದ ವರ್ಷ 25 ಲಕ್ಷ ಮನೆಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ನೀಡಿದೆ. ಮುಂದಿನ ವರ್ಷ 25 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಈ ಸಂದರ್ಭದಲ್ಲಿ ಸಚಿವರಾದ ಆರ್.ಅಶೋಕ್, ಗೋವಿಂದ ಕಾರಜೋಳ, ಸುನಿಲ್ ಕುಮಾರ್, ಕೋಟ ಶ್ರೀನಿವಾಸ್ ಪೂಜಾರಿ, ಎಸ್.ಅಂಗಾರ, ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಸುಕುಮಾರ ಶೆಟ್ಟಿ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯ್‌ಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಇದ್ದರು.
‘ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಎನ್‌ಇಪಿ’
ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಲು ಮುಂದಿನ 25 ವರ್ಷಗಳನ್ನು ದೃಷ್ಟಿಯಲ್ಲಿಟ್ಟು ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಮಕ್ಕಳಿಗೆ ಬುನಾದಿಯಿಂದ ಅರ್ಥಪೂರ್ಣ ಶಿಕ್ಷಣ ನೀಡುವುದು ಎನ್‌ಇಪಿ ಉದ್ದೇಶ. ಶಿಕ್ಷಣದ ಮೂಲಕ ಹೊಸ ಚಿಂತನೆಗಳ ಕ್ರಾಂತಿ ಆರಂಭವಾಗಲಿದೆ. 21ನೇ ಶತಮಾನದ ಸವಾಲುಗಳನ್ನು ಎದುರಿಸುವಂತಹ ಶಿಕ್ಷಣವನ್ನು ಎನ್‌ಇಪಿ ಮೂಲಕ ನೀಡಲಾಗುವುದು.
‘ಶರಾವತಿ ₹ 5,000 ಕೋಟಿ ಯೋಜನೆ’
ನವೀಕರಿಸಬಹುದಾದ ಶಕ್ತಿಗಳ ಗರಿಷ್ಠ ಬಳಕೆಗೆ ಕೇಂದ್ರ ನಿರ್ಧರಿಸಿದ್ದು ಸೋಲಾರ್ ಹಾಗೂ ಗಾಳಿಯಿಂದ ವಿದ್ಯುತ್ ಶಕ್ತಿ ಉತ್ಪಾದಿಸಲು ಒತ್ತು ನೀಡಿದೆ. ಸೋಲಾರ್ ಶಕ್ತಿ ಬಳಸಿಕೊಂಡು ಶಿವಮೊಗ್ಗದ ಶರಾವತಿ ನದಿಯಿಂದ ಧರೆಗೆ ಬೀಳುವ ನೀರನ್ನು ಮತ್ತೆ ಮೇಲೆತ್ತಿ ವಿದ್ಯುತ್ ಶಕ್ತಿ ಉತ್ಪಾದನೆ ಮಾಡಲಾಗುವುದು. ಈ ಯೋಜನೆಗೆ ₹ 5,000 ಕೋಟಿ ಖರ್ಚಾಗಲಿದೆ. ಈ ಯೋಜನೆ ನರೇಂದ್ರ ಮೋದಿಯ ಪರಿಕಲ್ಪನೆ. ಇಂಧನ ವಲಯದಲ್ಲಿ ದೇಶ ಆತ್ಮನಿರ್ಭರ ಸಾಧಿಸಲು ಪೆಟ್ರೋಲ್, ಡೀಸೆಲ್‌ನಲ್ಲಿ ಎಥೆನಾಲ್ ಬಳಕೆ ಪ್ರಮಾಣ ಹೆಚ್ಚಿಸಲು ಕೇಂದ್ರ ಮುಂದಾಗಿದ್ದು, ಅತಿಹೆಚ್ಚು ಎಥೆನಾಲ್ ಉತ್ಪಾದಿಸುವ ಕರ್ನಾಟಕಕ್ಕೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
‘ಸಮುದ್ರ ನೀರಿನಿಂದ ಅಯೋನ್ ಉತ್ಪಾದನೆ’
ಇಂಧನ ಶಕ್ತಿ ಹಾಗೂ ರಾಸಾಯನಿಕ ಗೊಬ್ಬರಗಳ ತಯಾರಿಕೆಗೆ ಅಮೋನಿಯಂ ಉತ್ಪಾದನೆಗೆ ಒತ್ತು ನೀಡಲು ಕೇಂದ್ರ ನಿರ್ಧಿಸಿದೆ. ಸಮುದ್ರದ ನೀರನ್ನು ಬಳಸಿಕೊಂಡು ಅಯೋನ್‌ಗಳನ್ನು ಬೇರ್ಪಡಿಸಿ ಅದರಲ್ಲಿರುವ ಅಂಶದಿಂದ ಅಮೋನಿಯಂ ತಯಾರಿಗೆ ಚಿಂತನೆ ನಡೆದಿದೆ. ಈ ಯೋಜನೆ ಸಾಕಾರಗೊಂಡರೆ ಕರಾವಳಿ ಗ್ರೀನ್ ಎನರ್ಜಿ ಉತ್ಪಾದನಾ ವಲಯವಾಗಿ ದೇಶದ ಗಮನ ಸೆಳೆಯಲಿದೆ. ಸೆಮಿಕಂಡಕ್ಟರ್‌ಗಳ ಉತ್ಪಾದನೆಯಲ್ಲಿ ಚೀನಾದ ಪ್ರಾಬಲ್ಯ ತಗ್ಗಿಸಲು ಮಿಷನ್ ಮೋಡ್‌ನಲ್ಲಿ ಸೆಮಿಕಂಡಕ್ಟರ್ ತಯಾರಿಕೆಗೆ ಆದ್ಯತೆ ನೀಡಲಾಗಿದೆ. ಸೆಮಿ ಕಂಡಕ್ಟರ್‌ಗಳ ಉತ್ಪಾದನೆಯಲ್ಲಿ ದೇಶದಲ್ಲೇ ಮೊದಲ ಎಂಒಯು ಮಾಡಿಕೊಂಡಿರುವ ಕರ್ನಾಟಕ ಮುಂದೆ ಮುಂಚೂಣಿಯಲ್ಲಿ ನಿಲ್ಲಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.