ಉಡುಪಿ: ಹಿರಿಯ ಚೇತನ ತೋನ್ಸೆ ಮೋಹನದಾಸ ಪೈಗಳ ಅಂತ್ಯಕ್ರಿಯೆ ಸೋಮವಾರ ನೆರವೇರಿತು. ಮಣಿಪಾಲಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟ ಪೈಗಳ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾಯಿತು.
ಎಂಜಿಎಂ ಕಾಲೇಜಿನ ನೂತನ ರವೀಂದ್ರ ಕಲಾಮಂಟಪದಲ್ಲಿ ಸಾರ್ವಜನಿಕರ ದರ್ಶನಕ್ಕೆ ಪೈಗಳ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ಶಾಸಕರು, ಸಚಿವರು, ಅಧಿಕಾರಿಗಳು, ಗಣ್ಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ.ಮೋಹನ ಆಳ್ವ, ಮಣಿಪಾಲ ಮೀಡಿಯಾ ನೆಟ್‌ವರ್ಕ್ ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಸತೀಶ್ ಪೈ, ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ ಸಂಧ್ಯಾ ಪೈ, ಮಣಿಪಾಲ್ ಟೆಕ್ನಾಲಜಿಸ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಗೌತಮ್ ಪೈ, ವನಿತಾ ಪೈ, ಡಾ.ಇಂಧುಮತಿ ಪೈ, ಡಾ ಆಶಾ ಪೈ, ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ರಿಜಿಸ್ಟ್ರಾರ್ ಡಾ.ರಂಜನ್ ಪೈ, ಮಾಹೆ ವಿವಿ ಸಹ ಕುಲಾಧಿಪತಿ ಡಾ ಎಚ್.ಎಸ್.ಬಲ್ಲಾಳ್, ಮಾಹೆ ವಿವಿ ಕುಲಪತಿ ಡಾ.ಎಂ.ಡಿ.ವೆಂಕಟೇಶ್, ಮಣಿಪಾಲ್ ಮೀಡಿಯಾ ನೆಟ್ ವರ್ಕ್‌ನ ಸಿಇಒ ವಿನೋದ್ ಕುಮಾರ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷಜಯಪ್ರಕಾಶ್ ಹೆಗ್ಡೆೆ, ಮುಖಂಡರಾದ ಅಭಯಚಂದ್ರ ಜೈನ್, ಕುಯಿಲಾಡಿ ಸುರೇಶ್ ನಾಯಕ್, ಅಶೋಕ್ ಕುಮಾರ್ ಕೊಡವೂರು, ಯು.ಆರ್.ಸಭಾಪತಿ, ಜಿಲ್ಲಾಧಿಕಾರಿ ಕೂರ್ಮಾರಾವ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ ಸಹಿತ ಹಲವರು ಅಂತಿಮ ದರ್ಶನ ಪಡೆದರು.
ಪತ್ರಿಕಾರಂಗದಲ್ಲಿ ವಿಶೇಷ ಸಾಧನೆ ಮಾಡಿರುವ ಟಿ.ಮೋಹನದಾಸ್ ಪೈಗಳು ಹಲವು ಸಂಘ ಸಂಸ್ಥೆೆಗಳನ್ನು ಸ್ಥಾಪಿಸಿ, ಮುನ್ನಡೆಸಿದ್ದಾರೆ. ಅವರ ಕೊಡುಗೆಗಳನ್ನು ಉಳಿಸಿಕೊಂಡು ಸಾಗಬೇಕಿದೆ. ಅಭಿವೃದ್ಧಿಯ ಹರಿಕಾರರಾಗಿದ್ದ, ದೂರದೃಷ್ಟಿತ್ವ ಹೊಂದಿದ್ದ ಪೈಗಳು ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಶ್ರದ್ಧಾಂಜಲಿ ಸಲ್ಲಿಸಿದರು.
ಹಲವು ಸಂಘ ಸಂಸ್ಥೆೆಗಳನ್ನು ಸ್ಥಾಪಿಸಿ ತೆರೆಮರೆಯಲ್ಲಿದ್ದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಪೈಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡಿದ್ದಾರೆ. ಗುಡ್ಡವಾಗಿದ್ದ ಮಣಿಪಾಲಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟಿದ್ದಾರೆ. ಅವರ ಯೋಗದಾನ ಕಾರ್ಯಗಳು ಸಾಕಷ್ಟಿವೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆೆ ತಿಳಿಸಿದರು.
ಶಿಕ್ಷಣ, ಬ್ಯಾಂಕಿಂಗ್, ಪತ್ರಿಕಾರಂಗಕ್ಕೆ ಟಿ.ಮೋಹನ್‌ದಾಸ್ ಪೈ ದೊಡ್ಡ ಕೊಡುಗೆ ನೀಡಿದ್ದಾರೆ. ಹೊಸ ಪರಿವರ್ತನೆಗೆ ನಾಂದಿ ಹಾಡಿದ್ದಾರೆ. ಮಣಿಪಾಲ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಪೈಗಳ ಶ್ರಮ ದೊಡ್ಡದು. ಮಾಧವ ಪೈಗಳು ಕಂಡ ಕನಸುಗಳನ್ನು ನನಸು ಮಾಡಲು ಕಾರ್ಯಕ್ರಮ ರೂಪಿಸಿ, ಅನುಷ್ಠಾನಗೊಳಿಸಿದ್ದಾರೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಮೋಹನ್‌ದಾಸ್ ಪೈಗಳು ದೂರದೃಷ್ಟಿಯ ನಾಯಕರಾಗಿ ಹಲವು ಸಂಸ್ಥೆೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಉದ್ಯೋಗಾವಕಾಶ ಕಲ್ಪಿಸಿದ್ದಾರೆ. ಮಹಾನ್ ಚೇತನವಾಗಿ ನಮ್ಮ ನಡುವೆ ಸದಕಾಲ ಉಳಿದುಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.