ADVERTISEMENT

ಸಂಸದ ಸ್ಥಾನಕ್ಕೆ ಕಳಂಕ ತಂದ ಮೊಹುವಾ ಮೊಯಿತ್ರಾ: ಶೋಭಾ ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2023, 15:43 IST
Last Updated 9 ಡಿಸೆಂಬರ್ 2023, 15:43 IST
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ   

ಉಡುಪಿ: ಸಂಸತ್ತಿನಲ್ಲಿ ಪ್ರಶ್ನೆ ಕೇಳುವುದಕ್ಕೆ ಲಂಚ ಪಡೆದಿರುವ ಮಹುವಾ ಮೊಯಿತ್ರಾ ಸಂಸದ ಸ್ಥಾನಕ್ಕೆ ಕಳಂಕ ತಂದಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕಿಸಿದರು.

ಮಹುವಾ ಮೊಯಿತ್ರಾ ಪ್ರಕರಣ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕಪ್ಪು ಚುಕ್ಕೆಯಿದ್ದಂತೆ. ಸಂಸತ್ತಿನಲ್ಲಿ ಕೇಳುವ ಪ್ರಶ್ನೆಗಳನ್ನು ಸಂಸದರು ಬಹಳ ಗುಪ್ತವಾಗಿ ಇಡುತ್ತಾರೆ. ಜನಪ್ರತಿನಿಧಿಗಳು ಕೇಳುವ ಪ್ರಶ್ನೆಗೆ ಅಧಿಕಾರಿಗಳು ಸಾಕಷ್ಟು ಶ್ರಮ ವಹಿಸುತ್ತಾರೆ. ಸ್ವಂತ ಲಾಭಕ್ಕಾಗಿ ಪವಿತ್ರವಾದ ಸದನದ ಗೌರವವನ್ನು ದುರ್ಬಳಕೆ ಮಾಡಿಕೊಂಡಿದ್ದು ಖಂಡನೀಯ. 

ಇಂತಹ ಘಟನೆಗಳು ಪ್ರಜಾತಂತ್ರ ವ್ಯವಸ್ಥೆಗೆ ಮಾರಕ ಹಾಗೂ ಜನತೆಗೆ ಕೆಟ್ಟ ಸಂದೇಶ ರವಾನಿಸುತ್ತದೆ. ಮುಂದೆ ವಿಧಾನಸಭೆಗಳಲ್ಲೂ ಇಂತಹ ಕಹಿ ಘಟನೆಗಳು ನಡೆಯಬಹುದಾಗಿದ್ದು ಎಚ್ಚರ ವಹಿಸಬೇಕು ಎಂದರು.

ADVERTISEMENT

ಗೂಳಿಹಟ್ಟಿ ಶೇಖರ್‌ಗೆ ತಪ್ಪು ಮಾಹಿತಿ: ಗೂಳಿಹಟ್ಟಿ ಶೇಖರ್ ಆರ್‌ಎಸ್‌ಎಸ್ ಕಚೇರಿಗೆ ಯಾವಾಗ ಬಂದಿದ್ದಾರೊ ಗೊತ್ತಿಲ್ಲ. ಆರ್‌ಎಸ್‌ಎಸ್ ಶಾಖೆಗೆ ಹೋದವರು ಈ ರೀತಿ ಮಾತನಾಡಲು ಸಾಧ್ಯವಿಲ್ಲ. ಎಲ್ಲ ವರ್ಗದವರು ಒಟ್ಟಾಗಿ ಇರಬೇಕು ಅನ್ನೋದು ಆರ್‌ಎಸ್‌ಎಸ್ ಆಶಯವಾಗಿದೆ. ಭಾರತದ ಅಭ್ಯುದಯವನ್ನು ಆರ್‌ಎಸ್‌ಎಸ್ ಬಯಸುತ್ತದೆ. ಗೂಳಿಹಟ್ಟಿ ಶೇಖರ್‌ಗೆ ಅರ್‌ಎಸ್‌ಎಸ್‌ ಬಗ್ಗೆ ತಪ್ಪು ಮಾಹಿತಿ ಇದೆ, ಅವರು ಸಂಘಕ್ಕೆ ಬಂದು ನೋಡಲಿ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.